ಸಪ್ತಸಾಗರ ವಾರ್ತೆ,ವಿಜಯಪುರ,ಆ. 11 : ನಗರದಲ್ಲಿರುವ ಇಬ್ರಾಹಿಂಪೂರ ರೈಲ್ವೆ ನಿಲ್ದಾಣದಲ್ಲಿ ಸುಸಜ್ಜಿತ ಕಟ್ಟಡ ನಿರ್ಮಾಣಕ್ಕಾಗಿ ಅಂದಾಜು 1.50 ಕೋಟಿ ರೂ. ಅನುದಾನ ಮಂಜೂರಾಗಿದ್ದು, ಶೀಘ್ರದಲ್ಲಿಯೇ ಕಟ್ಟಡ ನಿರ್ಮಾಣ ಕಾಮಗಾರಿ ಆರಂಭಗೊಳ್ಳಲಿದೆ ಎಂದು ಸಂಸದ ರಮೇಶ ಜಿಗಜಿಣಗಿ ಮಾಹಿತಿ ನೀಡಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ವಿಜಯಪುರ ನಗರದ ಇಬ್ರಾಹಿಂಪೂರ ಭಾಗದ ಜನತೆಯ ಅನುಕೂಲಕ್ಕಾಗಿ ರೈಲ್ವೆ ನಿಲ್ದಾಣ ಇರಬೇಕು ಎನ್ನುವ ಕಾರಣಕ್ಕೆ ಆಗ ನಿಲ್ದಾಣ ಆರಂಭಿಸಲು ವಿಶೇಷ ಪ್ರಯತ್ನ ವಹಿಸಿ ಯಶಸ್ವಿಯಾಗಿದ್ದೆನು. ಈ ಇಬ್ರಾಹಿಂಪೂರ ರೈಲ್ವೆ ನಿಲ್ದಾಣ ಸ್ಥಾಪನೆ ಹಾಗೂ ಅಭಿವೃದ್ಧಿಗಾಗಿ ವಿಶ್ರಾಂತ ಅಭಿಯಂತರ ಶಂಕರಗೌಡ ಪಾಟೀಲ ಸವನಹಳ್ಳಿ ವಿಶೇಷ ಪ್ರಯತ್ನ ಮಾಡಿದ್ದರು. ಈಗಲೂ ಸಹ ಇಲ್ಲಿ ಕಟ್ಟಡ ಅಭಿವೃದ್ಧಿ ಸೇರಿದಂತೆ ಅನೇಕ ಅಭಿವೃದ್ಧಿ ಕಾರ್ಯಗಳಿಗೆ ಅನೇಕ ಬಾರಿ ಮನವಿ ಸಹ ನೀಡಿದ್ದರು. ಈ ಮನವಿಯನ್ನು ಗಂಭೀರವಾಗಿ ಪರಿಗಣಿಸಿದ್ದ ನಾನು ಜನತೆಯ ಅನುಕೂಲಕ್ಕಾಗಿ ಈ ಕಾರ್ಯ ಕೈಗೊಂಡಿರುವೆನು ಎಂದು ತಿಳಿಸಿದ್ದಾರೆ.
ಇಬ್ರಾಹಿಂಪೂರ ಭಾಗದ ಪ್ರಯಾಣಿಕರು ಈ ಇಬ್ರಾಹಿಂಪೂರ ರೈಲ್ವೆ ನಿಲ್ದಾಣವನ್ನೇ ಅವಲಂಬಿಸಿದ್ದಾರೆ. ಕೇಂದ್ರ ರೈಲ್ವೆ ನಿಲ್ದಾಣಕ್ಕೆ ಹೋಗಲು ಆಗುತ್ತಿದ್ದ ಸಮಯವೂ ಉಳಿತಾಯವಾಗಿದೆ. ಈಗ ಕಟ್ಟಡ ನಿರ್ಮಾಣಕ್ಕೂ ಸಹ ಪೂರಕವಾದ ಅನುದಾನ ಒಂದೂವರೆ ಕೋಟಿ ರೂ. ಮಂಜೂರಾಗಿದ್ದು, ಶೀಘ್ರದಲ್ಲಿಯೇ ಅನುದಾನ ಬಿಡುಗಡೆಯಾಗಿ ಕಾಮಗಾರಿ ಆರಂಭಗೊಳ್ಳಲಿದೆ ಎಂದು ಅವರು ಹೇಳಿದ್ದಾರೆ.
ಇಬ್ರಾಹಿಂಪುರ ಸುಸಜ್ಜಿತ ರೈಲು ನಿಲ್ದಾಣ ಕಟ್ಟಡಕ್ಕೆ 1.50 ಕೋಟಿ ಮಂಜೂರು
