ಸಪ್ತಸಾಗರ ವಾರ್ತೆ,ವಿಜಯಪುರ, ಜೂ. 12:
ದೇಶ ರಕ್ಷಕರ ಪಡೆ ಸಂಚಾಲಿತ ಅನ್ನ ಸ್ನೇಹಿ ಸೇವಾ ಬಳಗ ವತಿಯಿಂದ ಹಮ್ಮಿಕೊಳ್ಳಲಾಗುತ್ತಿರುವ “ಹಸಿವು ಮುಕ್ತ ಸೇವಾ ಕಾರ್ಯಕ್ರಮ”ದ 100ನೇ ವಾರವನ್ನು ಶುಕ್ರವಾರ ಯಶಸ್ವಿಯಾಗಿ ಆಚರಿಸಲಾಯಿತು.
ನಗರದ ವಿವಿಧ ಭಾಗಗಳಲ್ಲಿ ಬೇರೆ ಊರಿಗೆ ತೆರಳುವ ಪ್ರಯಾಣಿಕರು, ನಿರ್ಗತಿಕರು ಹಾಗೂ ಆಶ್ರಯಹೀನರಿಗೆ ಉಚಿತವಾಗಿ ಬಿಸಿ ಊಟ ವಿತರಿಸಲಾಯಿತು.
ಈ ಉದಾತ್ತ ಅನ್ನದಾನ ಕಾರ್ಯಕ್ರಮದ ಅಂಗವಾಗಿ ಜಿಲ್ಲಾ ಸರ್ಕಾರಿ ಆಸ್ಪತ್ರೆ ಆವರಣ, ಕೇಂದ್ರ ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ ಹಾಗೂ ನಗರದ ಪ್ರಮುಖ ವೃತ್ತಗಳ ರಸ್ತೆ ಬದಿಯಲ್ಲಿ ವಾಸಿಸುವ ನೂರಾರು ಜನರನ್ನು ದೇಶ ರಕ್ಷಕರ ಪಡೆ ಸ್ವಯಂಸೇವಕರು ಖುದ್ದಾಗಿ ಭೇಟಿ ಮಾಡಿ ಗೌರವಪೂರ್ವಕವಾಗಿ ಸಿದ್ಧಪಡಿಸಿದ ಆಹಾರವನ್ನು ವಿತರಿಸಿದರು.
ಕಾರ್ಯಕ್ರಮಕ್ಕೆ ಮಹಾನಗರ ಪಾಲಿಕೆ ಉಪ ಆಯುಕ್ತ ಮಹಾವೀರ ಬೋರಣ್ಣವರ, ಖ್ಯಾತ ಮಧುಮೇಹ ತಜ್ಞ ಡಾ. ಬಾಬು ರಾಜೇಂದ್ರ ನಾಯಿಕ, ಮಹಾನಗರ ಪಾಲಿಕೆ ಸದಸ್ಯರಾದ ಶಿವರುದ್ರ ಬಾಗಲಕೋಟ, ರಾಹುಲ್ ಜಾಧವ್ ಹಾಗೂ ಬಂದೇನವಾಜ್ ಬೀಳಗಿ ವಿಶೇಷ ಅತಿಥಿಗಳಾಗಿ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಸಂಘಟನೆಯ ಸಂಸ್ಥಾಪಕ ರೋಹನ್ ಆಪ್ಟೆ, “ಮಾನವ ಸೇವೆಯೇ ಮಾಧವ ಸೇವೆ ಎಂಬ ಧ್ಯೇಯದೊಂದಿಗೆ ಅನ್ನ ಸ್ನೇಹಿ ಸೇವಾ ಬಳಗ ನಿರಂತರವಾಗಿ ಸಮಾಜಮುಖಿ ಕಾರ್ಯಗಳನ್ನು ಕೈಗೊಳ್ಳುತ್ತಿದೆ. ಹಸಿದವರ ಹೊಟ್ಟೆ ತುಂಬಿಸುವ ಕಾರ್ಯಕ್ಕಿಂತ ಶ್ರೇಷ್ಠ ಸೇವೆ ಮತ್ತೊಂದಿಲ್ಲ” ಎಂದು ಹೇಳಿದರು.
ಸಂಘಟನೆಯ ಅಧ್ಯಕ್ಷ ಆಕಾಶ ಇಂಡಿ ಮಾತನಾಡಿ, “ಹಸಿದವರಿಗೆ ಅನ್ನ ನೀಡುವುದಕ್ಕಿಂತ ಮಿಗಿಲಾದ ಧರ್ಮ ಮತ್ತೊಂದಿಲ್ಲ. ಈ ಸೇವಾ ಕಾರ್ಯವನ್ನು ಚಿರಸ್ಥಾಯಿಯಾಗಿಸುವುದು ನಮ್ಮ ಪ್ರಮುಖ ಉದ್ದೇಶವಾಗಿದೆ. ಮುಂದಿನ ದಿನಗಳಲ್ಲೂ ಇಂತಹ ಮಾನವೀಯ ಸೇವೆಗಳು ನಿರಂತರವಾಗಿ ಮುಂದುವರಿಯಲಿವೆ” ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ದೇಶ ರಕ್ಷಕರ ಪಡೆಯ ವಿಕ್ರಮ್ ತಂಬೇಕರ, ಜಗದೀಶ ರೂಗಿಮಠ, ಕಿರಣ ಕೊಳುರಗಿ, ಶಶಿ, ಸುಜಿತ್, ಕೃಷ್ಣ, ಶಶಿಧರ, ಮುತ್ತು, ಮೈಬುಬ, ಮುಸ್ತಾಕ್, ಶಾಂತು, ಸಂತೋಷ, ಮಹಾಂತೇಶ್, ಪ್ರಕಾಶ, ವಿನಾಯಕ, ಸಾಗರ, ವಿರೇಶ್, ವಿನೋದ್ ಪತ್ತಾರ ಸೇರಿದಂತೆ ಅನ್ನ ಸ್ನೇಹಿ ಸೇವಾ ಬಳಗದ ಸದಸ್ಯರು ಹಾಗೂ ಸ್ಥಳೀಯ ಮುಖಂಡರು ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ಹಸಿವು ಮುಕ್ತ ಸೇವೆಯ 100ನೇ ವಾರ: ನೂರಾರು ನಿರ್ಗತಿಕರಿಗೆ ಅನ್ನದಾನ


