11 ಗಂಟೆಗಳ ಕಾಲ ಮೊಳಗಿದ ಸಂಗೀತ ಸುಧೆ! ವಿಜಯಪುರದ 34 ಕಲಾವಿದರಿಂದ ಶಾಸ್ತ್ರೀಯ ರಾಗಗಳ ರಸದೌತಣ

ಸಪ್ತಸಾಗರ ವಾರ್ತೆ,ವಿಜಯಪುರ, ಆ. 11:
ಬೆಳಗಿನ 9ರಿಂದ ರಾತ್ರಿ 11ರವರೆಗೆ ನಿರಂತರವಾಗಿ ಮೊಳಗಿದ ಶಾಸ್ತ್ರೀಯ ರಾಗಗಳು… ಒಂದೆಡೆ ಸಂಗೀತದ ಸೊಬಗು, ಮತ್ತೊಂದೆಡೆ ಕಲಾವಿದರ ಅದ್ಭುತ ಪ್ರಸ್ತುತಿ… ಅಪಾರ ಸಂಖ್ಯೆಯ ಸಂಗೀತಾಸಕ್ತರನ್ನು ಮಂತ್ರಮುಗ್ಧಗೊಳಿಸಿದ ಅಪೂರ್ವ ಕ್ಷಣಗಳಿಗೆ ವಿಜಯಪುರ ಸಾಕ್ಷಿಯಾಯಿತು.
ನಗರದ ವಿಶ್ರಾಮ ಹೋಟೆಲ್ ಸಭಾಂಗಣದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಧನಸಹಾಯದೊಂದಿಗೆ ಸುರಸಿಂಗಾರ ಕಲೆ ಮತ್ತು ಸಾಂಸ್ಕೃತಿಕ ಸಂಸ್ಥೆ, ವಿವೇಕಾನಂದ ಸೇವಾ ಸಂಘ ಹಾಗೂ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಸ್ವರಾತ್ಮ ಗುರುಕುಲ, ಗೋಕರ್ಣ ಇವರ ಸಹಯೋಗದಲ್ಲಿ ಆಯೋಜಿಸಿದ್ದ ಐದನೇ ಶಾಸ್ತ್ರೀಯ ಸಂಗೀತೋತ್ಸವ ಸಂಗೀತ ಲೋಕದಲ್ಲಿ ಗಮನ ಸೆಳೆಯಿತು.
ವಿಜಯಪುರದ 34 ಮಂದಿ ಕಲಾವಿದರು ವಿವಿಧ ರಾಗಗಳನ್ನು ಪ್ರಸ್ತುತಪಡಿಸಿ ಸಂಗೀತ ರಸಿಕರಿಗೆ ಅಪೂರ್ವ ಅನುಭವ ನೀಡಿದರು. ಬೆಳಗ್ಗಿನಿಂದ ಆರಂಭವಾದ ಸಂಗೀತದ ಪಯಣ ರಾತ್ರಿ 11ರವರೆಗೂ ಅವಿರತವಾಗಿ ಸಾಗಿದ್ದು, ಸಭಾಂಗಣದ ತುಂಬೆಲ್ಲ ಶಾಸ್ತ್ರೀಯ ಸಂಗೀತದ ಕಂಪನ ಮೂಡಿಸಿತು.
ಕಾರ್ಯಕ್ರಮ ಉದ್ಘಾಟಿಸಿದ ಸುರಸಿಂಗಾರ ಸಂಸ್ಥೆಯ ಅಧ್ಯಕ್ಷ ಡಾ. ಸತೀಶ ಜಿಗಜಿನ್ನಿ ಮಾತನಾಡಿ, ವಿಜಯಪುರದಲ್ಲಿ ಶಾಸ್ತ್ರೀಯ ಸಂಗೀತದ ಬೆಳವಣಿಗೆ ದಿನದಿಂದ ದಿನಕ್ಕೆ ವಿಸ್ತಾರಗೊಳ್ಳುತ್ತಿರುವುದು ಸಂತಸದ ಸಂಗತಿ. ಸ್ಥಳೀಯ ಕಲಾವಿದರಿಗೆ ವೇದಿಕೆ ಕಲ್ಪಿಸುವ ಇಂತಹ ಸಂಗೀತೋತ್ಸವಗಳು ಕಲಾ ಪರಂಪರೆಯನ್ನು ಉಳಿಸಿ ಬೆಳೆಸುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ ಎಂದರು.
ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಮುಖ್ಯಸ್ಥ ಮಂಜುನಾಥ ಭಟ್ ಸುವರ್ಣಗದ್ದೆ ಮಾತನಾಡಿ, ಉತ್ತರ ಕರ್ನಾಟಕ ಹಾಗೂ ಉತ್ತರ ಕನ್ನಡದ ನಡುವಿನ ಕಲಾ ಸಂಬಂಧ ವೇಗವಾಗಿ ವಿಸ್ತರಿಸುತ್ತಿದೆ. ಸಂಗೀತ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಮೂಲಕ ಈ ಬಾಂಧವ್ಯ ಇನ್ನಷ್ಟು ಗಟ್ಟಿಯಾಗಬೇಕು ಎಂದು ಆಶಿಸಿದರು.
ವಿವೇಕಾನಂದ ಸೇವಾ ಸಂಘದ ಅಧ್ಯಕ್ಷ ಶಾಂತೇಶ ಕಳಸಗೊಂಡ ಹಾಗೂ ಹೋಟೆಲ್ ಉದ್ಯಮಿ ಪ್ರಶಾಂತ ಶೆಟ್ಟಿ ಮಾತನಾಡಿ, ಸಂಗೀತೋತ್ಸವದಲ್ಲಿ ಪಾಲ್ಗೊಂಡ ಎಲ್ಲ ಕಲಾವಿದರಿಗೆ ಶುಭ ಹಾರೈಸಿದರು.
ಗೀತಾ ಕುಲಕರ್ಣಿ, ವಿಶಾಲ ಕಟ್ಟಿ, ಕಾಶಿನಾಥ ಭೋಸಲೆ, ಸಾಕ್ಷಿ ಹಿರೇಮಠ, ಸಂಗೀತಾ ಹಿರೇಮಠ, ಮಾಳವಿಕಾ ಜೋಶಿ, ಅದಿತಿ ಮೊಕಾಶಿ, ಸುನಯನಾ ದೇಶಪಾಂಡೆ, ಶ್ರೀಪ್ರದಾ ದಶವಂತ, ಸುಲೇಖಾ ಆದ್ಯ, ಶ್ರೀನಿವಾಸ ಬಣಗಾರ, ಹರಿಣಿ ಅರ್ಜುಣಗಿ, ಶ್ರಾವಣಿ ಪಾಟೀಲ, ನಿಂಗಣ್ಣ ದೇವಣಗಾವ್, ಭವಾನಿ ಕುಲಕರ್ಣಿ, ವಿರೇಶ ಬಡಿಗೇರ, ದಾನಮ್ಮ ಪಾಟೀಲ, ಮನಸ್ವಿ ಸೋನಾರ್, ಖುಷಿ ಕಲಾಲ, ಮಾನ್ಯತಾ ಪಟೇಲ್, ಪ್ರಿಯಾ ಕುಲಕರ್ಣಿ, ಶಾಂತೇಶ ಕಳಸಗೊಂಡ, ವೇದಿಕಾ ಭಿಡೆ, ಪ್ರದೀಪ ಪೋದ್ದಾರ, ವೀಣಾ ಪೋದ್ದಾರ, ಅಕ್ಷತಾ ಆರ್., ಸಮರ್ಥ ಹಿರೇಮಠ, ಶ್ರೀನಿವಾಸ ಟಂಕಸಾಲಿ, ಚಂದನಾ ಚಪ್ಪರದಹಳ್ಳಿಮಠ, ಗಣೇಶ ವಾರದ, ಮೇಘನಾ ಕುಲಕರ್ಣಿ, ಚೇತನಾ ಗುಡಿ (ನಾಯಿಕ) ಹಾಗೂ ಡಾ. ಹರೀಶ ಹೆಗಡೆ ಸೇರಿದಂತೆ ಕಲಾವಿದರು ಸಂಗೀತೋತ್ಸವದಲ್ಲಿ ತಮ್ಮ ಪ್ರತಿಭೆ ಅನಾವರಣಗೊಳಿಸಿದರು.
ಸಂವಾದಿನಿಯಲ್ಲಿ ನಂದಾ ಮಿರ್ಜಿ, ಪ್ರದೀಪ ಪೋದ್ದಾರ ಹಾಗೂ ಶ್ರೀಶೈಲ ಬೀಳೂರ; ತಬಲಾದಲ್ಲಿ ಶೇಷಾದ್ರಿ ಅಯ್ಯಂಗಾರ, ಜಗನ್ನಾಥ ಅಳ್ಳಗಿ, ಮಂಥನ ಜೋಶಿ, ಓಂಕಾರ ಅಳ್ಳಗಿ, ಅನಂತ ಆದ್ಯ ಹಾಗೂ ಪ್ರಸನ್ನ ಪೋದ್ದಾರ ಮತ್ತು ವಯಲಿನ್‌ನಲ್ಲಿ ರವಿಕುಮಾರ ಟಿ. ಸಾಥ್ ನೀಡಿದರು.
ಕಾರ್ಯಕ್ರಮದಲ್ಲಿ ಲತಾ ಜಹಾಗಿರ್ದಾರ, ವಿದುಷಿ ಶಾಂತಾಬಾಯಿ ಕೌತಾಳ, ಕೆ.ಎಸ್. ಕ್ಷೀರಸಾಗರ, ಪಿ.ಎಸ್. ಕಡೇಮನಿ, ಡಾ. ಎಸ್.ಎಸ್. ಶಿರಗುಪ್ಪಿ, ಜಗನ್ನಾಥ ಅಳ್ಳಗಿ, ಶ್ರೀಪಾದ ಅಠಲೆ ಸೇರಿದಂತೆ ಹಲವು ಕಲಾವಿದರು, ಉದ್ಯಮಿಗಳು ಹಾಗೂ ಕಲಾಭಿಮಾನಿಗಳು ಉಪಸ್ಥಿತರಿದ್ದರು.
ಸುರಸಿಂಗಾರ ಸಂಸ್ಥೆಯ ಕಾರ್ಯದರ್ಶಿ ಸಂಗಣ್ಣ ಪಾಟೀಲ, ಕಲಾವಿದರಾದ ರಮೇಶ ಚವ್ಹಾಣ, ವೀರಭದ್ರ ಹೇರಲಗಿ ಸೇರಿದಂತೆ ಸಂಸ್ಥೆಯ ಪದಾಧಿಕಾರಿಗಳು ಹಾಗೂ ಕಲಾಭಿಮಾನಿಗಳ ಸಹಕಾರದಿಂದ ಕಾರ್ಯಕ್ರಮ ಯಶಸ್ವಿಯಾಯಿತು. ಡಾ. ಹರೀಶ ಹೆಗಡೆ ನಿರೂಪಿಸಿದರು.

Share this