371(ಜೆ) ಸೌಲಭ್ಯಕ್ಕಾಗಿ 16 ದಿನಗಳಿಂದ ಧರಣಿ : ವಿಜಯಪುರ ಜಿಲ್ಲೆ ಸೇರ್ಪಡೆಗೆ ಮೂವರು ಶಾಸಕರ ಬೆಂಬಲ

ಚಳಿಗಾಲದ ಅಧಿವೇಶನದಲ್ಲಿ ಧ್ವನಿ ಎತ್ತಲು ನಿರ್ಧಾರ; ಕೇಂದ್ರಕ್ಕೆ ಶಿಫಾರಸಿಗೆ ಒಗ್ಗಟ್ಟಿನ ಪ್ರಯತ್ನದ ಭರವಸೆ

ಸಪ್ತಸಾಗರ ವಾರ್ತೆ, ಸಿಂದಗಿ, ಅ. 18:
ಡಾ. ಡಿ.ಎಂ. ನಂಜುಂಡಪ್ಪ ವರದಿಯ ಶಿಫಾರಸಿನ ಆಧಾರದಲ್ಲಿ ವಿಜಯಪುರ ಜಿಲ್ಲೆಯನ್ನು ಸಂವಿಧಾನದ 371(ಜೆ) ಕಲಂ ವ್ಯಾಪ್ತಿಗೆ ಸೇರ್ಪಡೆಗೊಳಿಸಿ, ಈ ಭಾಗದ ಜನರಿಗೆ ವಿಶೇಷ ಸೌಲಭ್ಯ ಕಲ್ಪಿಸಬೇಕೆಂಬ ಬೇಡಿಕೆ ತೀವ್ರಗೊಂಡಿದೆ. ಈ ನಿಟ್ಟಿನಲ್ಲಿ ಬಸವೇಶ್ವರ ವೃತ್ತದ ಬಳಿ ಕಳೆದ 16 ದಿನಗಳಿಂದ ನಡೆಯುತ್ತಿರುವ ಧರಣಿ ಸತ್ಯಾಗ್ರಹಕ್ಕೆ ಇಂಡಿ, ಸಿಂದಗಿ ಹಾಗೂ ದೇವರಹಿಪ್ಪರಗಿ ಕ್ಷೇತ್ರಗಳ ಶಾಸಕರು ಭೇಟಿ ನೀಡಿ ಬೆಂಬಲ ಸೂಚಿಸಿದ್ದು, ಹೋರಾಟಕ್ಕೆ ರಾಜಕೀಯ ಬಲ ದೊರೆತಿದೆ.
ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ ಮಾತನಾಡಿ, ವಿಜಯಪುರ ಜಿಲ್ಲೆಯ ಸಿಂದಗಿ, ಇಂಡಿ, ಬಾಗೇವಾಡಿ ಹಾಗೂ ಮುದ್ದೇಬಿಹಾಳ ತಾಲೂಕುಗಳು ಶೈಕ್ಷಣಿಕ, ಸಾಮಾಜಿಕ ಮತ್ತು ಆರ್ಥಿಕವಾಗಿ ಹಿಂದುಳಿದಿವೆ. ಡಾ. ನಂಜುಂಡಪ್ಪ ವರದಿಯಲ್ಲಿ 371(ಜೆ) ಸೌಲಭ್ಯಕ್ಕೆ ಅಗತ್ಯವಿರುವ ಎಲ್ಲ ಅರ್ಹತೆಗಳು ಈ ಭಾಗಕ್ಕಿದ್ದರೂ, ಜಿಲ್ಲೆಯನ್ನು ಈ ವ್ಯಾಪ್ತಿಗೆ ಸೇರಿಸುವಲ್ಲಿ ನಿರ್ಲಕ್ಷ್ಯ ವಹಿಸಿರುವುದೇಕೆ ಎಂಬ ಪ್ರಶ್ನೆಗೆ ಉತ್ತರ ಸಿಗಬೇಕಿದೆ ಎಂದರು.
ರಾಜ್ಯದ ಇತರ ಭಾಗಗಳೊಂದಿಗೆ ಹೋಲಿಸಿದರೂ ವಿಜಯಪುರ ಜಿಲ್ಲೆಯು ನಿರಂತರ ಬರದ ಹೊಡೆತಕ್ಕೆ ತುತ್ತಾಗುತ್ತಿದೆ. ಈ ಭಾಗದ ಹಿಂದುಳಿದಿರುವಿಕೆಯನ್ನು ಗಂಭೀರವಾಗಿ ಪರಿಗಣಿಸಿ, ಜಿಲ್ಲೆಯ ಎಲ್ಲ ಶಾಸಕರನ್ನು ಒಗ್ಗೂಡಿಸಿ ಜಿಲ್ಲಾ ಉಸ್ತುವಾರಿ ಸಚಿವರ ಮೂಲಕ ಸರ್ಕಾರದ ಗಮನ ಸೆಳೆಯಲಾಗುವುದು. ಚಳಿಗಾಲದ ಅಧಿವೇಶನದಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿ, ಮುಖ್ಯಮಂತ್ರಿ ಹಾಗೂ ಹೋರಾಟ ಸಮಿತಿಯ ಸದಸ್ಯರನ್ನು ಭೇಟಿಯಾಗಿ ಚರ್ಚಿಸಲಾಗುವುದು. ವಿಜಯಪುರ ಜಿಲ್ಲೆಯನ್ನು 371(ಜೆ) ವ್ಯಾಪ್ತಿಗೆ ಸೇರಿಸುವಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲು ಎಲ್ಲ ಶಾಸಕರು ಒಟ್ಟಾಗಿ ಪ್ರಯತ್ನಿಸುವುದಾಗಿ ಭರವಸೆ ನೀಡಿದರು.
ಶಾಸಕ ಅಶೋಕ ಮನಗೂಳಿ ಮಾತನಾಡಿ, ಸಿಂದಗಿ, ಇಂಡಿ, ಮುದ್ದೇಬಿಹಾಳ ಹಾಗೂ ಬಾಗೇವಾಡಿ ತಾಲೂಕುಗಳು ನಿಜಾಮರ ಕಾಲದಿಂದಲೂ ಹಲವು ಕ್ಷೇತ್ರಗಳಲ್ಲಿ ಹಿಂದುಳಿದಿವೆ. ಈ ಭಾಗದ ಜನರಿಗೆ ಶಿಕ್ಷಣ, ಉದ್ಯೋಗ ಹಾಗೂ ಅಭಿವೃದ್ಧಿಯಲ್ಲಿ ಸಮಾನ ಅವಕಾಶಗಳು ದೊರೆಯಬೇಕಿದೆ. ಡಾ. ನಂಜುಂಡಪ್ಪ ವರದಿಯಲ್ಲಿ ಅರ್ಹತೆಗಳಿದ್ದರೂ 371(ಜೆ) ಸೌಲಭ್ಯ ಜಾರಿಯಾಗದಿರುವುದು ದುರದೃಷ್ಟಕರ. ಈಗ ಆರಂಭವಾಗಿರುವ ಹೋರಾಟಕ್ಕೆ ಸಂಪೂರ್ಣ ಬೆಂಬಲವಿದ್ದು, ಬೇಡಿಕೆ ಈಡೇರುವವರೆಗೂ ಹೋರಾಟದ ಕಿಚ್ಚು ಆರಬಾರದು ಎಂದರು.
ದೇವರಹಿಪ್ಪರಗಿ ಶಾಸಕ ರಾಜುಗೌಡ ಪಾಟೀಲ ಮಾತನಾಡಿ, ಮುಂಬೈ ಕರ್ನಾಟಕದ ಕೊನೆಯ ತಾಲೂಕುಗಳು ಮತ್ತು ಕಲ್ಯಾಣ ಕರ್ನಾಟಕದ ಕೊನೆಯ ಗ್ರಾಮಗಳೆಂಬ ಸ್ಥಿತಿಯಲ್ಲಿ ಈ ಭಾಗದ ಜನರು ಅಭಿವೃದ್ಧಿ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ವಿಜಯಪುರ ಜಿಲ್ಲೆಯನ್ನು 371(ಜೆ) ವ್ಯಾಪ್ತಿಗೆ ಸೇರಿಸುವುದರಿಂದ ಈ ಭಾಗದ ಸಮಗ್ರ ಅಭಿವೃದ್ಧಿಗೆ ನೆರವಾಗಲಿದೆ. ಹೀಗಾಗಿ ಜಿಲ್ಲೆಯ ಜನಪ್ರತಿನಿಧಿಗಳು ಅಗತ್ಯ ದಾಖಲೆಗಳೊಂದಿಗೆ ರಾಜ್ಯ ಸರ್ಕಾರದ ಮೂಲಕ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ಒತ್ತಾಯಿಸಿದರು.
ಕಲ್ಯಾಣ ಕರ್ನಾಟಕಕ್ಕೆ ವಿಶೇಷ ಸೌಲಭ್ಯ ದೊರೆತಿರುವ ಹಿನ್ನೆಲೆಯಲ್ಲಿ ವಿಜಯಪುರ ಜಿಲ್ಲೆಯ ಹಿಂದುಳಿದ ತಾಲೂಕುಗಳಿಗೂ ನ್ಯಾಯಸಮ್ಮತ ಅವಕಾಶ ಕಲ್ಪಿಸಬೇಕೆಂಬ ಒತ್ತಾಯ ಧರಣಿಯ ಕೇಂದ್ರಬಿಂದುವಾಗಿದೆ. ಶಾಸಕರ ಬೆಂಬಲದಿಂದ ಬೇಡಿಕೆಗೆ ಮತ್ತಷ್ಟು ಬಲ ಬಂದಿದ್ದು, ಮುಂದಿನ ದಿನಗಳಲ್ಲಿ ಸರ್ಕಾರ ಯಾವ ಕ್ರಮ ಕೈಗೊಳ್ಳಲಿದೆ ಎಂಬುದರತ್ತ ಹೋರಾಟಗಾರರ ಗಮನ ನೆಟ್ಟಿದೆ.
ಮಾಜಿ ಶಾಸಕರಾದ ಶರಣಪ್ಪ ಸುಣಗಾರ, ರಂಗನಾಥ ತೋಫೆ, ಶಂಬುಲಿಂಗ ಕಕ್ಕಳಮೇಲಿ, ಮುತ್ತು ಶಾಬಾದಿ ಹಾಗೂ ಅಶೋಕ ಅಲ್ಲಾಪುರ ಮಾತನಾಡಿದರು.
ಲಿಂಬೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಭೀಮಣ್ಣ ಕೌಲಗಿ, ಶಿವು ಹತ್ತಿ, ಜೆಡಿಎಸ್ ಅಧ್ಯಕ್ಷ ಎಂ.ಎನ್. ಪಾಟೀಲ, ಶೈಲಜಾ ಸ್ಥಾವರಮಠ, ಪ್ರಕಾಶ ಹಿರೇಕುರಬರ, ಹೋರಾಟ ಸಮಿತಿಯ ಎಂ.ಎಂ. ಹಂಗರಗಿ, ಸಿದ್ದು ಪಾಟೀಲ, ಅಶೋಕ ವಾರದ, ಪಂಡಿತ ಯಂಪೂರೆ, ಗುರುರಾಜ ಪಡಶೆಟ್ಟಿ, ಸಿದ್ದು ಕಡಗಂಚಿ, ಆನಂದ ಶಾಬಾದಿ, ಸಂಗಣ್ಣ ಬ್ಯಾಕೋಡ, ಅಂಬರೀಶ ಸುಣಗಾರ, ಎಸ್.ಆರ್. ಪಾಟೀಲ ಹಾಗೂ ಶಂಕರ ಮಲ್ಲೇದ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Share this