ಸಪ್ತಸಾಗರ ವಾರ್ತೆ ವಿಜಯಪುರ, ಜೂ. 21:
ನಗರದ ಬಿ.ಎಲ್.ಡಿ.ಇ ಸಂಸ್ಥೆಯ ಶ್ರೀ ಸಂಗನಬಸವ ಮಹಾಸ್ವಾಮೀಜಿ ಪಾಲಿಟೆಕ್ನಿಕ್ ವಿದ್ಯಾಲಯದಲ್ಲಿ ಜೂನ್ 9ರಂದು ಬೆಂಗಳೂರಿನ ಸೆಂಟಮ್ ಎಲೆಕ್ಟ್ರಾನಿಕ್ಸ್ ಮತ್ತು ಬೆಳಗಾವಿಯ ಏಕಸ್ ಸಂಸ್ಥೆಗಳು ನಡೆಸಿದ ಕ್ಯಾಂಪಸ್ ಉದ್ಯೋಗ ಮೇಳದಲ್ಲಿ ಕಾಲೇಜಿನ ಒಟ್ಟು 23 ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ.
ಸೆಂಟಮ್ ಎಲೆಕ್ಟ್ರಾನಿಕ್ಸ್ ಸಂಸ್ಥೆಗೆ 17 ಮತ್ತು ಏಕಸ್ ಸಂಸ್ಥೆಗೆ ಆರು ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ.
ಬೆಂಗಳೂರಿನ ಸೆಂಟಮ್ ಎಲೆಕ್ಟ್ರಾನಿಕ್ಸ್ ಸಂಸ್ಥೆಯ ವತಿಯಿಂದ ಸಹಾಯಕ ವ್ಯವಸ್ಥಾಪಕ ಮತ್ತು ಮಾನವ ಸಂಪನ್ಮೂಲ ಅಧಿಕಾರಿ ಅಂಶಿತ್ ಸಿ. ಡಿ. ಅವರು ಖುದ್ದಾಗಿ ಆಗಮಿಸಿ ಸಂದರ್ಶನ ನಡೆಸಿದರು. ಈ ಸಂದರ್ಶನದಲ್ಲಿ ವಿಜಯಪುರ ಹಾಗೂ ಸುತ್ತಮುತ್ತಲಿನ ಜಿಲ್ಲೆಗಳ ಮೆಕ್ಯಾನಿಕಲ್, ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ ವಿಭಾಗದ 21ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಲಿಖಿತ ಪರೀಕ್ಷೆಯಲ್ಲಿ ತೇರ್ಗಡೆಯಾದ 20 ವಿದ್ಯಾರ್ಥಿಗಳಿಗೆ ಮೌಖಿಕ ಸಂದರ್ಶನ ನಡೆಸಲಾಗಿತ್ತು. ಈ ವಿದ್ಯಾರ್ಥಿಗಳಲ್ಲಿ ಅಂತಿಮವಾಗಿ 17 ವಿದ್ಯಾರ್ಥಿಗಳನ್ನು ಕಂಪನಿ ಆಯ್ಕೆಮಾಡಿಕೊಂಡಿದೆ.
ಬೆಳಗಾವಿಯ ಏಕಸ್ ಸಂಸ್ಥೆಯಿಂದ ವತಿಯಿಂದ ಮಾನವ ಸಂಪನ್ಮೂಲ ಅಧಿಕಾರಿ ಶ್ರಾವಣಿ ಕುಲಕರ್ಣಿ ಮತ್ತು ಅವರ ತಂಡದವರು ಮೆಕ್ಯಾನಿಕಲ್ ಮತ್ತು ಆಟೋಮೋಬೈಲ್ ಎಂಜಿನಿಯರಿಂಗ್ ವಿಭಾಗದ 24 ಕ್ಕೂ ಹೆಚ್ಚು ವಿದ್ಯಾರ್ಥಿಗಳ ಸಂದರ್ಶನದಲ್ಲಿ ನಡೆಸಿದ್ದರು. ಲಿಖಿತ ಪರೀಕ್ಷೆಯ ಮೂಲಕ 16 ವಿದ್ಯಾರ್ಥಿಗಳನ್ನು ಮೌಖಿಕ ಸಂದರ್ಶನಕ್ಕೆ ಆಯ್ಕೆ ಮಾಡಲಾಗಿತ್ತು. ಅವರಲ್ಲಿ ಅತ್ಯುತ್ತಮ ಆರು ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ.
ಈ ಕ್ಯಾಂಪಸ್ ಸಂದರ್ಶನ ಸಂದರ್ಭದಲ್ಲಿ ಆರಂಭದಲ್ಲಿ ಪಾಲಿಟೆಕ್ನಿಕ್ ಪ್ರಾಚಾರ್ಯ ಪ್ರಭುದೇವ ಬಿ. ಕಳಸಗೊಂಡ, ಉದ್ಯೋಗಾಧಿಕಾರಿ ಸುಧನ್ವ ವಿ. ಕುಲಕರ್ಣಿ, ಸಂತೋಷ ಹಿರೇಮಠ, ಪಾಂಡುರಂಗ ಅಸ್ಲಂಕರ್, ಈರೇಶ ಪಾಟೀಲ ಹಾಗೂ ಸಂಸ್ಥೆಯ ಎಲ್ಲಾ ವಿಭಾಗದ ಮುಖ್ಯಸ್ಥರು ಮತ್ತು ಉಪನ್ಯಾಸಕ ಸಿಬ್ಬಂದಿ ಉಪಸ್ಥಿತರಿದ್ದರು.
ನೇರ ಸಂದರ್ಶನದ ಮೂಲಕ ಉದ್ಯೋಗ ಪಡೆದ ಎಲ್ಲಾ 23 ಸಾಧಕ ವಿದ್ಯಾರ್ಥಿಗಳಿಗೆ ಬಿ.ಎಲ್.ಡಿ.ಇ. ಸಂಸ್ಥೆಯ ಅಧ್ಯಕ್ಷ ಮತ್ತು ಸಚಿವ ಸನ್ಮಾನ್ಯ ಎಂ. ಬಿ. ಪಾಟೀಲರು, ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಮತ್ತು ವಿಧಾನ ಪರಿಷತ ಶಾಸಕ ಸುನೀಲಗೌಡ ಪಾಟೀಲ, ಆಡಳಿತ ಮಂಡಳಿಯ ನಿರ್ದೇಶಕರು, ವಿದ್ಯಾಲಯದ ಪ್ರಾಚಾರ್ಯರು, ಬೋಧಕ, ಬೋಧಕರ ಹೊರತಾದ ಸಿಬ್ಬಂದಿ ವರ್ಗದವರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. ಅಲ್ಲದೇ, ಆಯ್ಕೆಯಾದ ವಿದ್ಯಾರ್ಥಿಗಳ ಮುಂದಿನ ಭವಿಷ್ಯಕ್ಕೆ ಶುಭ ಹಾರೈಸಿದ್ದಾರೆ.
ಉದ್ಯೋಗ ಮೇಳದಲ್ಲಿ ಬಿಎಲ್ಡಿಇ ಕಾಲೇಜಿನ 23 ವಿದ್ಯಾರ್ಥಿಗಳು ಆಯ್ಕೆ


