ಸಪ್ತಸಾಗರ ವಾರ್ತೆ,ವಿಜಯಪುರ, ಅ. 12:
ನಗರದ ಬಿ.ಎಲ್.ಡಿ.ಇ ಸಂಸ್ಥೆಯ ಪೂಜ್ಯ ಸಂಗನಬಸವ ಮಹಾಸ್ವಾಮೀಜಿ ಪಾಲಿಟೆಕ್ನಿಕ್ ವಿದ್ಯಾಲಯದಲ್ಲಿ ಟೊಯೋಟಾ ಕಿರ್ಲೋಸ್ಕರ್ ಮೋಟಾರ್ಸ್ ವತಿಯಿಂದ ನಡೆದ ಎರಡು ದಿನಗಳ ಪೂಲ್ ಕ್ಯಾಂಪಸ್ ಸಂದರ್ಶನದಲ್ಲಿ 240ಕ್ಕೂ ಹೆಚ್ಚು ಡಿಪ್ಲೋಮಾ ವಿದ್ಯಾರ್ಥಿಗಳು ಭಾಗವಹಿಸಿದರು.
ಅಕ್ಟೋಬರ್ 9 ಮತ್ತು 10ರಂದು ನಡೆದ ಕ್ಯಾಂಪಸ್ ಡ್ರೈವ್ಗೆ ವಿಜಯಪುರ ನಗರ ಹಾಗೂ ಜಿಲ್ಲೆಯ ವಿವಿಧ ಪಾಲಿಟೆಕ್ನಿಕ್ ಕಾಲೇಜುಗಳ 320ಕ್ಕೂ ಹೆಚ್ಚು ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದರು. ಅರ್ಹತೆ ಪಡೆದ 240 ವಿದ್ಯಾರ್ಥಿಗಳು ಲಿಖಿತ ಪರೀಕ್ಷೆ, ತಾಂತ್ರಿಕ ಮೌಲ್ಯಮಾಪನ ಹಾಗೂ ನೇರ ಸಂದರ್ಶನದಲ್ಲಿ ಪಾಲ್ಗೊಂಡರು. ಅಂತಿಮವಾಗಿ ಆಯ್ಕೆಯಾದ ಅಭ್ಯರ್ಥಿಗಳ ಪಟ್ಟಿಯನ್ನು ಕಂಪನಿ ಶೀಘ್ರದಲ್ಲೇ ಪ್ರಕಟಿಸಲಿದೆ.
ಟೊಯೋಟಾ ಕಿರ್ಲೋಸ್ಕರ್ ಮೋಟಾರ್ಸ್ನ ಹಿರಿಯ ವ್ಯವಸ್ಥಾಪಕ ಸ್ವರೂಪ್, ಎಚ್ಆರ್ ವ್ಯವಸ್ಥಾಪಕ ವಿನಯ್ ಹಾಗೂ ನೇಮಕಾತಿ ತಂಡದ ಸದಸ್ಯರು ಆಯ್ಕೆ ಪ್ರಕ್ರಿಯೆ ನಡೆಸಿದರು. ಪ್ರಾಚಾರ್ಯ ಪ್ರಭುದೇವ ಬಿ. ಕಳಸಗೊಂಡ, ಉದ್ಯೋಗಾಧಿಕಾರಿ ಸುಧನ್ವ ವಿ. ಕುಲಕರ್ಣಿ ಸೇರಿದಂತೆ ಉಪನ್ಯಾಸಕರು ಹಾಗೂ ಸಿಬ್ಬಂದಿ ಸಹಕರಿಸಿದರು.
ಸ್ಥಳೀಯ ಹಾಗೂ ಗ್ರಾಮೀಣ ಭಾಗದ ತಾಂತ್ರಿಕ ವಿದ್ಯಾರ್ಥಿಗಳಿಗೆ ಪ್ರತಿಷ್ಠಿತ ಕೈಗಾರಿಕಾ ಸಂಸ್ಥೆಗಳಲ್ಲಿ ಉದ್ಯೋಗಾವಕಾಶ ಕಲ್ಪಿಸುವ ನಿಟ್ಟಿನಲ್ಲಿ ಇಂತಹ ಕ್ಯಾಂಪಸ್ ಡ್ರೈವ್ಗಳನ್ನು ನಿರಂತರವಾಗಿ ಆಯೋಜಿಸುತ್ತಿರುವ ಬಿ.ಎಲ್.ಡಿ.ಇ ಸಂಸ್ಥೆಯ ಅಧ್ಯಕ್ಷ, ಸಚಿವ ಎಂ.ಬಿ. ಪಾಟೀಲ, ಪ್ರಧಾನ ಕಾರ್ಯದರ್ಶಿ ಹಾಗೂ ವಿಧಾನ ಪರಿಷತ್ ಸದಸ್ಯ ಸುನೀಲಗೌಡ ಪಾಟೀಲ ಮತ್ತು ಆಡಳಿತ ಮಂಡಳಿ ನಿರ್ದೇಶಕರು ಮೆಚ್ಚುಗೆ ವ್ಯಕ್ತಪಡಿಸಿ, ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ಟೊಯೋಟಾ ಕ್ಯಾಂಪಸ್ ಡ್ರೈವ್ನಲ್ಲಿ 240 ವಿದ್ಯಾರ್ಥಿಗಳ ಭಾಗಿ


