7ನೇ ಕರ್ನಾಟಕ ರಾಜ್ಯ ರೋಪ್ ಸ್ಕಿಪ್ಪಿಂಗ್ ಚಾಂಪಿಯನ್‌ಶಿಪ್ ಕ್ರೀಡಾಕೂಟ

ಸಪ್ತಸಾಗರ ವಾರ್ತೆ, ವಿಜಯಪುರ, ಸೆ. 3:
ಬಬಲೇಶ್ವರ ತಾಲೂಕಿನ ಕೃಷ್ಣಾನಗರದ ದಿ. ಶ್ರೀ ಬಿ.ಟಿ. ಪಾಟೀಲ್ ಮೆಮೋರಿಯಲ್ ನಂದಿ ಅಂತರರಾಷ್ಟ್ರೀಯ ವಸತಿ ಶಾಲೆಯು ರೋಪ ಸ್ಕಿಪ್ಪಿಂಗ್ ಅಸೋಸಿಯೇಶನ್ ಆಫ್ ಕರ್ನಾಟಕ ಇವರ ಸಹಯೋಗದೊಂದಿಗೆ ಇತೀಚೆಗೆ 7ನೇ ಕರ್ನಾಟಕ ರಾಜ್ಯ ರೋಪ್ ಸ್ಕಿಪ್ಪಿಂಗ್ ಚಾಂಪಿಯನ್‌ಶಿಪ್ ಕ್ರೀಡಾಕೂಟವನ್ನು ನಂದಿ ಅಂತರರಾಷ್ಟ್ರೀಯ ವಸತಿ ಶಾಲೆಯ ರೋಪ ಸ್ಕಿಪ್ಪಿಂಗ್ ತರಬೇತುದಾರ ವಿಶ್ವನಾಥ ಸಿದ್ದಾಪೂರ ನೇತೃತ್ವದಲ್ಲಿ ನಂದಿ ಸಹಕಾರಿ ಸಕ್ಕರೆ ಕಾರ್ಖಾನೆಯ ಕೆ.ಎಚ್. ಪಾಟೀಲ ಸಭಾಭವನದಲ್ಲಿ ಏರ್ಪಡಿಸಿತ್ತು.
ವಿವಿಧ ಜಿಲ್ಲೆಗಳಿಂದ ಸುಮಾರು 210 ವಿದ್ಯಾರ್ಥಿಗಳು ರೋಪ ಸ್ಕಿಪ್ಪಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಿದ್ದರು. ನಂದಿ ಅಂತರರಾಷ್ಟ್ರೀಯ ವಸತಿ ಶಾಲೆಯ ಅಧ್ಯಕ್ಷ ಬಿ.ಡಿ. ಪಾಟೀಲರು ದೀಪಜ್ಯೋತಿ ಬೆಳಗುವುದರ ಮೂಲಕ ಕ್ರೀಡೆಗೆ ಚಾಲನೆ ನೀಡಿದರು.
ಕಾರ್ಖಾನೆಯ ಉಪಾಧ್ಯಕ್ಷ ಹಾಗೂ ಶಾಲೆಯ ನಿರ್ದೇಶಕ ಎ.ಪಿ. ಲೆಂಕೆನ್ನವರ, ಸಂಜಯಗೌಡ ಪಾಟೀಲ, ಶ್ರೀನಿವಾಸ ನಿಡೋಣಿ, ಈರನಗೌಡ ನ್ಯಾಮಗೌಡ, ಶಾಲೆಯ ಪಾಲಕರು ಹಾಗೂ ರೋಪ ಸ್ಕಿಪ್ಪಿಂಗ್ ಅಸೋಸಿಯೇಶನ್ ಅಧ್ಯಕ್ಷ ಹನುಮಂತ ಜಾಲಿಹಾಳ ಹಾಗೂ ಸದಸ್ಯ ಹನುಮಂತ ಮ್ಯಾಗೇರಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಶಾಲೆಯ ಪ್ರಾಚಾರ್ಯ ಅನಿಲಕುಮಾರ ಬೆನಕಟ್ಟಿ, ಕಾರ್ಯದರ್ಶಿ ಆನಂದ ಬಿದರಿ ಹಾಗೂ ಶಿಕ್ಷಕ ಮತ್ತು ಶಿಕ್ಷಕೇತರ ಸಿಬ್ಬಂದಿ ವರ್ಗ ಸೇರಿ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದರು. ಈ ಸ್ಪರ್ಧೆಯಲ್ಲಿ ಓವರಆಲ್ ಚಾಂಪಿಯನ್ ಶಿಪ್ ಆಗಿ ರಾಯಚೂರ ಜಿಲ್ಲೆಯ ವಿದ್ಯಾಜ್ಯೋತಿ ಇಂಗ್ಲೀಷ ಮೀಡಿಯಂ ಸ್ಕೂಲ ಗಬ್ಬೂರ ಹೊರಹೊಮ್ಮಿದರೆ, ದ್ವಿತೀಯ ಹಾಗೂ ತೃತೀಯ ಸ್ಥಾನವನ್ನು ಅನುಕ್ರಮವಾಗಿ ಶ್ರೀ ಬಿ.ಟಿ. ಪಾಟೀಲ ಮೆಮೋರಿಯಲ್ ನಂದಿ ಅಂತರರಾಷ್ಟ್ರೀಯ ವಸತಿ ಶಾಲೆ ಕೃಷ್ಣಾನಗರ ಹಾಗೂ ಧಾರವಾಡ ಇಂಟರನ್ಯಾಷನಲ್ ಸ್ಕೂಲ್ ಧಾರವಾಡ ಅವರು ಪಡೆದರು.
ಡೆಮೋ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಶ್ರೀ ಬಿ.ಟಿ. ಪಾಟೀಲ ಮೆಮೋರಿಯಲ್ ನಂದಿ ಅಂತರರಾಷ್ಟ್ರೀಯ ವಸತಿ ಶಾಲೆ ಕೃಷ್ಣಾನಗರ ಪಡೆದರೆ, ದ್ವಿತೀಯ ಹಾಗೂ ತೃತೀಯ ಸ್ಥಾನವನ್ನು ಅನುಕ್ರಮವಾಗಿ ಧಾರವಾಡ ಇಂಟರನ್ಯಾಷನಲ್ ಸ್ಕೂಲ್ ಧಾರವಾಡ ಹಾಗೂ ರಾಯಚೂರ ಜಿಲ್ಲೆಯ ವಿದ್ಯಾಜ್ಯೋತಿ ಇಂಗ್ಲೀಷ ಮೀಡಿಯಂ ಸ್ಕೂಲ್ ಗಬ್ಬೂರ ಇವರು ಪಡೆದು ವಿಜೃಂಭಿಸಿದರು.

Share