ದೋಷರಹಿತ-ಅಪಘಾತ ರಹಿತ ಹೆಸ್ಕಾಂಗೆ ಕ್ರಮ- ಅಧ್ಯಕ್ಷ ಸೈಯ್ಯದ ಅಜೀಮಪೀರ ಎಸ್.ಖಾದ್ರಿ

ಸಪ್ತಸಾಗರ ವಾರ್ತೆ,ವಿಜಯಪುರ, ಜು. 25:
ಮುಖ್ಯಮಂತ್ರಿಗಳು, ಉಪ ಮುಖ್ಯಮಂತ್ರಿಗಳು ಹಾಗೂ ಇಂಧನ ಸಚಿವರ ಮಾರ್ಗದರ್ಶನದಲ್ಲಿ ಈಗಾಗಲೇ ಇರುವ ಸಂಪನ್ಮೂಲಗಳ ಸದ್ಬಳಕೆ ಮಾಡಿಕೊಂಡು ಇರುವ ಸಣ್ಣ ಪುಟ್ಟ ಸಮಸ್ಯೆಗಳನ್ನು ಪರಿಹರಿಸಿ ದೋಷರಹಿತ, ಅಪಘಾತ ರಹಿತ ಹೆಸ್ಕಾಂವನ್ನಾಗಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸಲಾಗುತ್ತಿದೆ ಎಂದು ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ನಿಯಮಿತ ಅಧ್ಯಕ್ಷ, ಮಾಜಿ ಶಾಸಕ ಸೈಯ್ಯದ ಅಜೀಮಪೀರ ಎಸ್.ಖಾದ್ರಿ ಅವರು ಹೇಳಿದರು.
ನಗರದ ಬಿಡಿಎ ಕಚೇರಿಯ ಹತ್ತಿರವಿರುವ ಹೆಸ್ಕಾಂ ಅಧೀಕ್ಷಕ ಅಭಿಯಂತರರ ಕಚೇರಿ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಹೆಸ್ಕಾಂ ವ್ಯಾಪ್ತಿಯ 7 ಜಿಲ್ಲೆಗಳಲ್ಲಿ ಪ್ರವಾಸ ಕೈಗೊಂಡು ಹೆಸ್ಕಾಂ ಇಲಾಖೆ ಪ್ರಗತಿ ಪರಿಶೀಲನೆ ನಡೆಸಿ, ಅಧಿಕಾರಿಗಳೊಂದಿಗೆ ಚರ್ಚಿಸಿ ವ್ಯಾಪ್ತಿಯಲ್ಲಿರುವ ಸಮಸ್ಯೆಗಳನ್ನು ಸರಿಪಡಿಸಿ ಸಮರ್ಪಕ ವಿದ್ಯುತ್ ಪೂರೈಕೆಗೆ ಕ್ರಮ ವಹಿಸಲಾಗುತ್ತಿದೆ ಎಂದು ಅವರು ಹೇಳಿದರು.
ಕಳೆದ 2023ನೇ ಸಾಲಿನವರೆಗೆ 10 ಸಾವಿರ ರೂ. ಹಣ ತುಂಬಿ ಆರ್.ಆರ್.ನಂಬರ್ ಪಡೆದ 15200 ರೈತರಿಗೆ ಪಂಪಸೆಟ್‍ಗಳಿಗೆ ಸಂಪರ್ಕ ಕಲ್ಪಿಸುವ ಕಾರ್ಯ ಪ್ರಗತಿಯಲ್ಲಿದ್ದು, 50 ರೂ. ಹಣ ತುಂಬಿ ಆರ್.ಆರ್.ನಂಬರ್ ಪಡೆದ 23 ಸಾವಿರ ರೈತರಿಗೆ ಐಪಿ ಸೆಟ್ ಕಲ್ಪಿಸುವ ಟೆಂಡರ್ ಪ್ರಗತಿಯಲ್ಲಿದೆ. ಗೃಹ ಜ್ಯೋತಿ ಸೇರಿದಂತೆ ರೈತರು, ಸಾರ್ವಜನಿಕರಿಗೆ ಸಮರ್ಪಕವಾಗಿ ವಿದ್ಯುತ್ ಒದಗಿಸಲಾಗುವುದು ಎಂದು ತಿಳಿಸಿದರು.
ರೈತರ ಬೇಡಿಕೆಯಂತೆ ಗ್ರಾಮೀಣ ಭಾಗದಲ್ಲಿ ಹಗಲು ವೇಳೆಯಲ್ಲಿ 7 ಗಂಟೆ ನಿರಂತರ ತ್ರಿಫೇಸ್ ವಿದ್ಯುತ್ ಪೂರೈಕೆ ಕಾರ್ಯಕ್ಕೆ ಈಗಾಗಲೇ ರಾಜ್ಯದ ದೊಡ್ಡಬಳ್ಳಾಪುರ ಹಾಗೂ ಗದಗ ಜಿಲ್ಲೆಯ ಮೂಸಿಗೆರಿಯಲ್ಲಿ ಜಿಲ್ಲೆಯಲ್ಲಿ ಕುಸುಮಸಿಯಡಿಯಲ್ಲಿ ಚಾಲನೆ ನೀಡಲಿದ್ದು, ಶೀಘ್ರದಲ್ಲೇ ರಾಜ್ಯದ ಇತರೆ ಜಿಲ್ಲೆಗಳಲ್ಲಿಯೂ ಸಹ ಸೋಲಾರದಿಂದ ಉತ್ಪಾದಿಸಲಾದ ವಿದ್ಯುತ್ ಪಡೆದುಕೊಂಡು ಹಗಲು ವೇಳೆಯಲ್ಲಿ 7 ಗಂಟೆ ವಿದ್ಯುತ್ ಒದಗಿಸಲು ಕ್ರಮ ವಹಿಸಲಾಗುವುದು ಎಂದು ಅವರು ಹೇಳಿದರು.

ಭೂಗರ್ಭ ಕೇಬಲ್ ಅಳವಡಿಕೆ ಮಂಜೂರಾತಿ

ವಿಜಯಪುರ ನಗರದಲ್ಲಿ ಭೂಗರ್ಭ (ಅಂಡರ್‍ ಗ್ರೌಂಡ್ ಕೇಬಲ್ ಅಳವಡಿಕೆ) ಕೇಬಲ್ ಅಳವಡಿಕೆಗೆ ಇಂಧನ ಇಲಾಖೆಯಿಂದ ಮಂಜೂರಾತಿ ದೊರೆತಿದ್ದು, ಶೀಘ್ರದಲ್ಲೇ ಕಾಮಗಾರಿ ಆರಂಭಿಸಲಾಗುವುದು. ಕಳೆದ 20 ರಿಂದ 30 ವರ್ಷ ಹಳೆಯದಾದ ಅಪಾಯಕಾರಿಯಾದ ವಿದ್ಯುತ್ ಕಂಬಗಳಿಂದ ಯಾವುದೇ ಅಪಘಾತಗಳು ಸಂಭವಿಸದಂತೆ ನೋಡಿಕೊಳ್ಳಲು ಈಗಾಗಲೇ ಇಂತಹ ಪೋಲ್ಸ್‍ಗಳನ್ನು ಗುರುತಿಸಿ ತೆರವುಗೊಳಿಸಿ ಬದಲಿ ಕಂಬಗಳ ಅವಳಡಿಕೆ ಹಾಗೂ ಅಪಾಯಕಾರಿಯಾದ ವಿದ್ಯುತ್ ಟ್ರಾನ್ಸಾಫಾರ್ಮರ್ಗಳಿದ್ದಲ್ಲಿ ಇದನ್ನು ಶಿಫ್ಟ್ ಮಾಡಲು ಈಗಾಗಲೇ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದ್ದು, ಹೆಸ್ಕಾಂ ವ್ಯಾಪ್ತಿಯಲ್ಲಿ ವಿದ್ಯುತ್ ಅವಘಡ ಸಂಭವಿಸಿದ್ದಲ್ಲಿ ತಕ್ಷಣವೇ ಹೆಸ್ಕಾಂ ಅಧಿಕಾರಿಗಳು ಸ್ಪಂದಿಸಿ ಅಗತ್ಯ ಕ್ರಮ ವಹಿಸಲಿದ್ದಾರೆ ಎಂದು ಅವರು ಹೇಳಿದರು. ಸ್ಮಾರ್ಟ್ ಮೀಟರ್ ಅಳವಡಿಕೆಗೆ ಚೆಸ್ಕಾಂ ಹಾಗೂ ಬೆಸ್ಕಾಂನಲ್ಲಿ ಈಗಾಗಲೇ ಚಾಲನೆ ನೀಡಲಾಗಿದ್ದು, ಈ ಭಾಗದಲ್ಲಿ ಸ್ಮಾರ್ಟ್ ಮೀಟರ್ ಅಳವಡಿಸುವ ಪ್ರಸ್ತಾವನೆ ಇದ್ದು, ಈ ಕುರಿತು ಸರ್ಕಾರದ ಮಟ್ಟದಲ್ಲಿ ಕ್ರಮ ವಹಿಸಲಾಗುವುದು. ಹೆಸ್ಕಾಂ ವ್ಯಾಪ್ತಿಯ 7 ಜಿಲ್ಲೆಗಳಲ್ಲಿ 350 ಲೈನ್‍ಮನ್ ನೇಮಕಾತಿ ಪ್ರಕ್ರಿಯೆಯಲ್ಲಿದ್ದು, ನೇಮಕಾತಿ ಪ್ರಕ್ರಿಯೆಯನ್ನು ಪಾರದರ್ಶಕವಾಗಿ ನಡೆಸಲಾಗುವುದು. ಮೆರಿಟ್ ಹಾಗೂ ಕೌನ್ಸಿಲಿಂಗ್ ಮೂಲಕ ಆಯ್ಕೆ ಪ್ರಕ್ರಿಯೆ ನಡೆಸಿ, ನೇಮಕಾತಿಯಾದವರಿಗೆ ಅಗತ್ಯವಿರುವ ಕಡೆ ನಿಯೋಜಿಸಲಾಗುವುದು ಎಂದು ಅವರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಹೆಸ್ಕಾಂ ಅಧೀಕ್ಷಕ ಅಭಿಯಂತರ ಸಿದ್ಧಪ್ಪ ಬಿಂಜಗೇರಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

Share