ಸಪ್ತಸಾಗರ ವಾರ್ತೆ,ವಿಜಯಪುರ, ಜು. 26:
ಕಾರ್ಗಿಲ್ ಪರಂಪರೆಯು ಪ್ರತಿ ವಿದ್ಯಾರ್ಥಿಗೆ ಭಾರತೀಯ ಸೈನಿಕರ ಧೈರ್ಯ, ತ್ಯಾಗ, ಬಲಿದಾನ, ಸಾಹಸದ ಮಹತ್ವವನ್ನು ತಿಳಿಸುತ್ತದೆ. ಭಾವೈಕ್ಯತೆಗಾಗಿ ಇಂದಿನ ಮಕ್ಕಳು ಏಕತೆ, ಗೌರವದ ಪ್ರಜ್ಞೆಯನ್ನು ಬೆಳೆಸಿಕೊಳ್ಳಬೇಕು ಎಂದು ಶಿಕ್ಷಕ ಸಂತೋಷ ಬಂಡೆ ಹೇಳಿದರು.
ಶನಿವಾರ ತಾಲೂಕಿನ ನಾಗಠಾಣ ಗ್ರಾಮದ ಶ್ರೀ ಮಲ್ಲಿಕಾರ್ಜುನ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ ‘ಕಾರ್ಗಿಲ್ ವಿಜಯೋತ್ಸವ-2025 ಹುತಾತ್ಮ ವೀರಯೋಧರಿಗೆ ನಮನ ಕಾರ್ಯಕ್ರಮ’ದಲ್ಲಿ ಅವರು ಮಾತನಾಡಿದರು.
ಕಾರ್ಗಿಲ್ ಯುದ್ಧ ವೀರರ ಕಥೆಗಳು ರಾಷ್ಟ್ರಕ್ಕಾಗಿ ತ್ಯಾಗ, ಧೈರ್ಯ ಮತ್ತು ಸಮರ್ಪಣೆಯ ಅತ್ಯುನ್ನತ ಆದರ್ಶಗಳನ್ನು ಸಾರುತ್ತವೆ. ನಮ್ಮ ರಾಷ್ಟ್ರರಕ್ಷಣೆಗಾಗಿ ತಮ್ಮ ಪ್ರಾಣವನ್ನೇ ಅರ್ಪಿಸಿದ ವೀರಯೋಧರ ಧೈರ್ಯ, ದೇಶಪ್ರೇಮ ಎಂದೆಂದಿಗೂ ಸ್ಫೂರ್ತಿ. ನಮ್ಮ ಸೈನಿಕರು ಧೈರ್ಯ-ದೇಶಭಕ್ತಿಯ ಪ್ರತೀಕ ಎಂದು ಹೇಳಿದರು.
ಅತಿಥಿ ವಿಶ್ವನಾಥ ಕಲಗೊಂಡ ಮಾತನಾಡಿ, ಕಾರ್ಗಿಲ್ ವಿಜಯ ದಿವಸ ಕೇವಲ ನೆನಪಿನ ಸಂಕೇತವಲ್ಲ, ಬದಲಾಗಿ ಪ್ರತಿಯೊಬ್ಬ ವಿದ್ಯಾರ್ಥಿಯಲ್ಲಿ ರಾಷ್ಟ್ರ ನಿರ್ಮಾಣದ ಗುಣಗಳನ್ನು ಬೆಳೆಸುವ ಕರೆಯಾಗಿದೆ. ಕಾರ್ಗಿಲ್ ಯುದ್ಧದ ನೈಜ ಕಥೆಗಳನ್ನು ಕಲಿಯುವ ಮೂಲಕ, ನಾವು ಸಮಾಜದ ಜವಾಬ್ದಾರಿಯುತ ವ್ಯಕ್ತಿಗಳಾಗಿ ಬೆಳೆಯಬೇಕು ಎಂದರು.
ಮುಖ್ಯ ಶಿಕ್ಷಕ ಸುರೇಶಗೌಡ ಬಿರಾದಾರ ಮಾತನಾಡಿ, ಕಾರ್ಗಿಲ್ ಯುದ್ಧದಲ್ಲಿ ಭಾರತೀಯ ಸೈನಿಕರು ಕೆಚ್ಚೆದೆಯಿಂದ ಹೋರಾಡಿ ನಮ್ಮ ದೇಶದ ಘನತೆ, ಸಾಹಸವನ್ನು ಎತ್ತಿ ಹಿಡಿದಿದ್ದಾರೆ. ಅವರ ತ್ಯಾಗ, ಬಲಿದಾನ, ದೇಶಪ್ರೇಮ ಖಂಡಿತ ಎಲ್ಲ ಭಾರತೀಯರಿಗೂ ದಾರಿದೀಪ ಎಂದು ಹೇಳಿದರು.
ಸಂಸ್ಥೆಯ ಅಧ್ಯಕ್ಷ ಶಂಕರ ಹುಣಶ್ಯಾಳ, ಕಾರ್ಯದರ್ಶಿ ಸುನಂದಾ ಹುಣಶ್ಯಾಳ, ಅರಿವು ಕೇಂದ್ರದ ಗ್ರಂಥಪಾಲಕ ಮಂಜುನಾಥ ಗಂಗನಳ್ಳಿ ಹಾಗೂ ಶಿಕ್ಷಕರಾದ ಎಂ.ಎಸ್. ಪಾಪನಾಳಮಠ, ಸಚೀನ ಅವಟಿ, ನವೀನ ಬಂಡೆನ್ನವರ, ಜಯಶ್ರೀ ಬಂಗಾರಿ, ಲಕ್ಷ್ಮೀ ಮಸೂತಿ, ಸ್ನೇಹಾ ಹಕ್ಕಿ, ಜಯಶ್ರೀ ಬಿರಾದಾರ, ಶೃತಿ ಪೂಜಾರಿ, ರೇಣುಕಾ ಭಜಂತ್ರಿ, ಸಿದ್ದು ರತ್ನಾಕರ, ಸರೋಜಿನಿ ಕಟ್ಟಿಮನಿ, ರಾಜಶೇಖರ ಶಿರಶ್ಯಾಡ, ಅಲ್ಲಾಭಕ್ಷ ಇನಾಮದಾರ ಸೇರಿದಂತೆ ಅನೇಕ ಶಿಕ್ಷಕರು ಹಾಗೂ ಮಕ್ಕಳು ಭಾಗವಹಿಸಿದ್ದರು.
ನಮ್ಮ ಸೈನಿಕರು ಧೈರ್ಯ-ದೇಶಭಕ್ತಿಯ ಪ್ರತೀಕ-ಸಂತೋಷ ಬಂಡೆ
