ರಫ್ತು ಗುಣಮಟ್ಟದ ಒಣದ್ರಾಕ್ಷಿ ಉತ್ಪಾದನೆಗೆ ಮಾರ್ಗಸೂಚಿ:ಅಪಘಾನಿಸ್ತಾನದ ತಳಿ ಆಮದಿಗೆ ಚಿಂತನೆ- ಸಚಿವ ಶಿವಾನಂದ ಪಾಟೀಲ

ಸಪ್ತಸಾಗರ ವಾರ್ತೆ, ವಿಜಯಪುರ, ಜು. 28 : ರಾಸಾಯನಿಕ ಬಳಕೆಗೆ ಬದಲಾಗಿ ವಿಷಮುಕ್ತವಾಗಿ ಹಾಗೂ ಯುರೋಪಿಯನ್ ರಾಷ್ಟ್ರಗಳಿಗೆ ಸಾಗಿಸಲು ರಫ್ತು ಗುಣಮಟ್ಟದ ಒಣ ದ್ರಾಕ್ಷಿ ಬೆಳೆಯಲು ಮಾರ್ಗಸೂಚಿ ರೂಪಿಸುವ ಅಗತ್ಯವಿದೆ. ಜೊತೆಗೆ ಅಧಿಕ ಇಳುವರಿ, ವಿಶಿಷ್ಟ ಸ್ವಾದ ಹೊಂದಿರುವ ಅಪಘಾನಿಸ್ತಾನ ರಾಷ್ಟ್ರದ 5-6 ದ್ರಾಕ್ಷಿ ತಳಿಗಳನ್ನು ಪರಿಚಯಿಸಲು ಯೋಜಿಸುವ ಕುರಿತು ಕೃಷಿ ಮಾರುಕಟ್ಟೆ, ಜವಳಿ, ಸಕ್ಕರೆ ಹಾಗೂ ಕಬ್ಬು ಅಭಿವೃದ್ಧಿ ಸಚಿವ ಶಿವಾನಂದ ಪಾಟೀಲ ನೇತೃತ್ವದಲ್ಲಿ ನಡೆದ ದಕ್ಷಿಣ ಭಾರತದ ದ್ರಾಕ್ಷಿ ಬೆಳೆಗಾರರ ಸಭೆಯಲ್ಲಿ ನಿರ್ಧರಿಸಲಾಯಿತು.
ಭಾನುವಾರ ಸಂಜೆ ನಗರದಲ್ಲಿರುವ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‍ನಲ್ಲಿ ಸಚಿವ ಶಿವಾನಂದ ಪಾಟೀಲ ಅವರನ್ನು ಭೇಟಿ ಮಾಡಿದ ಕರ್ನಾಟಕ, ಮಹಾರಾಷ್ಟ್ರ, ತಮಿಳುನಾಡು, ಆಂಧ್ರಪ್ರದೇಶ ದ್ರಾಕ್ಷಿ ಬೆಳೆಗಾರರ ಸಂಘದ ಪ್ರತಿನಿಧಿಗಳು ಒಣದ್ರಾಕ್ಷಿ ಸುದೀರ್ಘ ಚರ್ಚೆ ನಡೆಸಿದರು.
ಸಭೆಯಲ್ಲಿ ಪಾಲ್ಗೊಂಡಿದ್ದ ರಾಷ್ಟ್ರೀಯ ದ್ರಾಕ್ಷಿ ಬೆಳೆಗಾರರ ಮಹಾಮಂಡಳದ ಅಧ್ಯಕ್ಷ ಸೋಪನ್ ಕಾಂಚನ್ ನೇತೃತ್ವದಲ್ಲಿ ಸಚಿವ ಶಿವಾನಂದ ಪಾಟೀಲ ಅವರನ್ನು ಭೇಟಿಯಾದ ದ್ರಾಕ್ಷಿ ಬೆಳೆಗಾರರು, ದಕ್ಷಿಣ ಭಾರತದ ಕರ್ನಾಟಕ, ಮಹಾರಾಷ್ಟ್ರ, ತಮಿಳುನಾಡು, ಆಂಧ್ರಪ್ರದೇಶ ರಾಜ್ಯಗಳು ದ್ರಾಕ್ಷಿ ಉತ್ಪಾದನೆಯ ಕಣಜ ಎನಿಸಿದೆ. ಆದರೆ ಇಲ್ಲಿ ಉತ್ಪಾದನೆಯಾಗುವ ಒಣದ್ರಾಕ್ಷಿಗೆ ವೈಜ್ಞಾನಿಕ ಮಿತಿ ಮಿತಿಯನ್ನು ಮೀರಿ ರಾಸಾಯನಿಕ ಬಳಕೆ ಮಾಡಲಾಗುತ್ತಿದೆ, ಅಧಿಕ ಉತ್ಪಾದನೆ ಮಾಡಿದರೂ ಗುಣಮಟ್ಟ ಕಾಯ್ದುಕೊಳ್ಳುವಲ್ಲಿ ವಿಫಲವಾಗುತ್ತಿದ್ದೇವೆ ಎಂಬ ಗಂಭೀರ ವಿಷಯದ ಕುರಿತು ದ್ರಾಕ್ಷಿ ಬೆಳೆಗಾರರು ಮುಕ್ತಮನಸ್ಸಿನಿಂದ ಚರ್ಚೆ ನಡೆಸಿದರು.
ಪ್ರಸಕ್ತ ಸಂದರ್ಭದಲ್ಲಿ ಆಫ್ರಿಕನ್ ರಾಷ್ಟ್ರಗಳಲ್ಲಿ ದ್ರಾಕ್ಷಿ ಬೆಳೆಯಲಾಗುತ್ತಿದ್ದರೂ ತಾಂತ್ರಿಕತೆ ಇಲ್ಲದ ಕಾರಣ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅವರು ಪೈಪೋಟಿ ನೀಡಲು ಸಾಧ್ಯವಾಗುತ್ತಿಲ್ಲ. ಇದರ ಲಾಭ ಪಡೆಯಲು ಭಾರತೀಯ ದ್ರಾಕ್ಷಿ ಬೆಳೆಗಾರರಿಗೆ ಸುವರ್ಣಾವಕಾಶವಿದ್ದು, ಈ ನಿಟ್ಟಿನಲ್ಲಿ ಗಂಂಭೀರ ಚಿಂತನೆ ನಡೆಸಿ, ಸದೃಢ ಹೆಜ್ಜೆ ಇರಿಸಬೇಕಿದೆ ಒಣದ್ರಾಕ್ಷಿ ಉದ್ಯಮಿ ಎ.ಎಸ್.ಬಿರಾದಾರ ಸಲಹೆ ನೀಡಿದರು.
ಪ್ರಸಕ್ತ ಸಂದರ್ಭದಲ್ಲಿ ಜಾಗತಿಕ ಮಟ್ಟದಲ್ಲಿ ಆರೋಗ್ಯ ಪೂರಕ ಆಹಾರದ ಕುರಿತು ಹೆಚ್ಚು ಕಾಳಜಿ ಹೆಚ್ಚುತ್ತಿದೆ. ಕೃತಕ ಸಕ್ಕರೆ ಅಂಶ ಸೇರಿಸುವ ರಾಸಾಯನಿಕ ಹೊಂದಿರುವ ಒಣದ್ರಾಕ್ಷಿ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸ್ವೀಕೃತವಾಗುತ್ತಿಲ್ಲ. ಹೀಗಾಗಿ ವಿಷಮುಕ್ತವಾಗಿ ಸಾವಯವದಲ್ಲಿ ನೈಸಗಿರ್ಕ ಸಕ್ಕರೆ ಅಂಶ ಇರುವಂತೆ ಬೆಳೆಯುವ ಕುರಿತು ದ್ರಾಕ್ಷಿ ಬೆಳೆಗಾರರಲ್ಲಿ ಜಾಗೃತಿ ಮೂಡಿಸಬೇಕಿದೆ ಎಂದು ಮಹಾರಾಷ್ಟ್ರದ ದ್ರಾಕ್ಷಿ ಬೆಳೆಗಾರರ ಸಂಘಟನೆ ಉಪಾಧ್ಯಕ್ಷ ಮಾರುತಿ ಚವ್ಹಾಣ ಹೇಳಿದರು.
ರಫ್ತು ಗುಣಮಟ್ಟದ ಒಣದ್ರಾಕ್ಷಿ ಉತ್ಪಾದನೆ ವಿಷಮುಕ್ತ ದ್ರಾಕ್ಷಿ ಬೆಳೆಯುವುದಕ್ಕಾಗಿ ನಿರ್ಧಿಷ್ಟವಾಗಿ ಮಾರ್ಗಸೂಚಿ ರೂಪಿಸಬೇಕಿದೆ. ಮಹಾರಾಷ್ಟ್ರ ಸರ್ಕಾರದ ನೀತಿಗಳು ದ್ರಾಕ್ಷಿ ಬೆಳೆಗಾರರಿಗೆ ಪ್ರೋತ್ಸಾಹದಾಯಕ ಆಗಿಲ್ಲ. ಕರ್ನಾಟಕದಲ್ಲಿ ಇಲ್ಲಿನ ಸರ್ಕಾರದ ನೀತಿಗಳು ದ್ರಾಕ್ಷಿ ಬೆಳೆಗಾರರಿಗೆ ಪ್ರೇರಣಾದಾಯಕವಾಗಿವೆ. ಹೀಗಾಗಿ ಎರಡೂ ರಾಜ್ಯಗಳ ದ್ರಾಕ್ಷಿ ಬೆಳೆಗಾರರ ಶ್ರೇಯಕ್ಕಾಗಿ ವಿಜಯಪುರ ಭಾಗದಲ್ಲಿ ಪ್ರಯೋಗಾಲಯ ಸ್ಥಾಪಿಸಬೇಕು. ರಾಷ್ಟ್ರೀಯ ಸಂಶೋಧನಾ ಕೇಂದ್ರದ ಮಾರ್ಗದರ್ಶನದಲ್ಲಿ ಮಾರ್ಗಸೂಚಿ ರೂಪಿಸಬೇಕು. ಕೃಷಿ ವಿಷಯದಲ್ಲಿ ಪರಿಣಿತಿ ಹೊಂದಿರುವ ನಿವೃತ್ತ ಐಎಎಸ್ ಅಧಿಕಾರಿಯನ್ನು ಸಮನ್ವಯಕ್ಕಾಗಿ ನೇಮಿಸಿಕೊಂಡು, ದ್ರಾಕ್ಷಿ ಬೆಳೆಗಾರರಿಗೆ ಆದಾಯ ಹೆಚ್ಚಿಸುವ ಕುರಿತು ಯೋಜನೆ ರೂಪಿಸಬೇಕು ಎಂದು ಐಐಎಚ್‍ಆರ್ ರೈತ ಪ್ರತಿನಿಧಿ ಡಾ.ಎಸ್.ಡಿ.ಶಿಖಾಮಣಿ, ದ್ರಾಕ್ಷಿ ಬೆಳೆಗಾರರ ಸಂಘಟನೆ ಉಪಾಧ್ಯಕ್ಷ ಅನಿಲ ಮೆಹರೆ ಇತರರು ಸಲಹೆ ನೀಡಿದರು.
ರೈತರಿಗೆ ರಫ್ತು ಗುಣಮಟ್ಟದ ಒಣದ್ರಾಕ್ಷಿ ಉತ್ಪಾದನೆ ಮಾಡುವ ಕುರಿತು ಪ್ರಸಕ್ತ ವರ್ಷದಿಂದಲೇ ಸೂಕ್ತ ಅರಿವು ಮೂಡಿಸಬೇಕು. ಮಾರುಕಟ್ಟೆ ಅವಕಾಶಗಳು, ವಿಷಮುಕ್ತ ಉತ್ಪಾದನೆಗೆ ಪ್ರೋತ್ಸಾಹಿಸಲು ರಿಯಾಯ್ತಿ, ಸರ್ಕಾರದ ತೋಟಗಾರಿಕೆ ಇಲಾಖೆ ಮೂಲಕ ಸಾವಯವ ಒಣದ್ರಾಕ್ಷಿ ಉತ್ಪಾದಕ ರೈತರ ನೋಂದಣಿಯಂಥ ಕೆಲಸಗಳು ನಡೆಸಬೇಕು. ಕೃಷಿ ಮಾರುಕಟ್ಟೆಯಲ್ಲಿ ಒಣದ್ರಾಕ್ಷಿಗೆ ಹೆಚ್ಚು ಪ್ರೋತ್ಸಾಹ ನೀಡಬೇಕು ಎಂದು ಕರ್ನಾಟಕ ರಾಜ್ಯದ ದ್ರಾಕ್ಷಿ ಬೆಳೆಗಾರರ ಸಂಘದ ಬಿ.ಎಂ.ಕೋಕರೆ ಸಚಿವರಿಗೆ ಮನವಿ ಮಾಡಿದರು.
ದ್ರಾಕ್ಷಿ ಬೆಳೆಗಾರರ ಮನವಿ ಆಲಿಸಿದ ಸಚಿವ ಶಿವಾನಂದ ಪಾಟೀಲ, ನಮ್ಮ ಸರ್ಕಾರ ದ್ರಾಕ್ಷಿ ಬೆಳೆಗಾರರ ಹಿತ ರಕ್ಷಣೆಗಾಗಿ ಕೋಲ್ಡ್ ಸ್ಟೋರೇಜ್ ನಿರ್ಮಾಣಕ್ಕೆ ಮುಂದಾಗಿರ. ಒಣದ್ರಾಕ್ಷಿ ಮಾರುಕಟ್ಟೆಗೆ ವಿಶೇಷ ಆದ್ಯತೆ ನೀಡುತ್ತಿದೆ. ದ್ರಾಕ್ಷಿ ಬೆಳೆಗಾರರಿಗೆ ಕಡಿಮೆ ಬಡ್ಡಿದರದ ಸಾಲದ ಸೌಲಭ್ಯ ಸೇರಿದಂತೆ ಇತರೆ ಅನುಕೂಲ ಕಲ್ಪಿಸಿದೆ. ಭವಿಷ್ಯದಲ್ಲಿ ದ್ರಾಕ್ಷಿ ಬೆಳೆಗಾರರ ಬೇಡಿಕೆಗಳಿಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ನೇತೃತ್ವದ ನಮ್ಮ ಸರ್ಕಾರ ಸಕಾರಾತ್ಮವಾಗಿ ಸ್ಪಂದಿಸಲಿದೆ ಎಂದು ಭರವಸೆ ನೀಡಿದರು.
ದ್ರಾಕ್ಷಿ ಬೆಳೆಗಾರರಾದ ಪ್ರಕಾಶ ಗಣಿ, ಮಲ್ಲಿಕಾರ್ಜುನ ತುಂಗಳ ಸೇರಿದಂತೆ ತಮಿಳುನಾಡು, ಆಂಧ್ರಪ್ರದೇಶದ ದ್ರಾಕ್ಷಿ ಬೆಳೆಗಾರರು ಸಭೆಯಲ್ಲಿ ಉಪಸ್ಥಿತರಿದ್ದರು.

Share