ಸಪ್ತಸಾಗರ ವಾರ್ತೆ, ವಿಜಯಪುರ, ಜು. 30:
ಜಿಲ್ಲೆಯ ರೈತರು ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಮೂಲಕ ನೀಡುವ ಶೂನ್ಯ ಬಡ್ಡಿ ದರದ ಸಾಲದ ಸದ್ಬಳಕೆ ಮಾಡಿಕೊಂಡು ಆರ್ಥಿಕವಾಗಿ ಸದೃಢರಾಗಬೇಕು. ಅದರಿಂದ ರೈತರೇ ಸಾಲ ನೀಡುವಂತೆ ಅಂದರೆ ಜಿಲ್ಲಾ ಕೇಂದ್ರ ಬ್ಯಾಂಕ್ ನಲ್ಲಿ ಲಕ್ಷಾಂತರ ರೂ. ಠೇವಣಿ ಇಡುವಂತೆ ಆರ್ಥಿಕ ಉನ್ನತಿ ಸಾಧಿಸಬೇಕು ಎಂದು ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷರೂ ಆಗಿರುವ ಜವಳಿ, ಕೃಷಿ ಮಾರುಕಟ್ಟೆ, ಸಕ್ಕರೆ ಹಾಗೂ ಕಬ್ಬು ಅಭಿವೃದ್ಧಿ ಸಚಿವ ಶಿವಾನಂದ ಪಾಟೀಲ ರೈತರಿಗೆ ಕಿವಿ ಮಾತು ಹೇಳಿದರು.
ಬುಧವಾರ ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿ ತಾಲೂಕಿನ ಪಡಗಾನೂರ ಗ್ರಾಮದಲ್ಲಿನ ವಿವಿಧೋದ್ದೇಶಗಳ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿ ಸಂಘದ ಅಮೃತ ಮಹೋತ್ಸವ ಹಾಗೂ ಇದರ ಸವಿನೆನಪಿಗಾಗಿ ನಿರ್ಮಿಸಿರುವ ನೂತನ ಕಟ್ಟಡ ಲೋಕಾರ್ಪಾಣೆ ಮಾಡಿ ಮಾತನಾಡಿ, ಶಾಕಸರಾದ ರಾಜುಗೌಡ ಪಾಟೀಲ ಅವರೊಂದಿಗೆ ಜಂಟಿಯಾಗಿ ಸಮಾರಂಭಕ್ಕೆ ಚಾಲನೆ ನೀಡಿ ಮಾತಗನಾಡಿದ ಸಚಿವರು, ಸಹಕಾರಿ ರಂಗದಲ್ಲಿರುವ ಇರುವವರು ಪ್ರಾಮಾಣಿಕರಾಗಿದ್ದರೆ ಮಾತ್ರ ಸಹಕಾರಿ ಕ್ಷೇತ್ರ ಉಳಿಯಲು ಸಾಧ್ಯ ಎಂದರು.
ಕೇವಲ ಎರಡು ದಶಕಗಳ ಹಿಂದೆ 16 ಲಕ್ಷ ರೂ. ಹಾನಿಯಲ್ಲಿದ್ದ ಪಡಗಾನೂರ ವಿವಿಧೋದ್ದೇಶಗಳ ಪ್ರಾಥಮಿಕ ಗ್ರಾಮೀಣ ಸಹಕಾರಿ ಸಂಘ, ಇದೀಗ 13.52 ಕೋಟಿ ರೂ. ಲಾಭದಲ್ಲಿದೆ. 60 ಲಕ್ಷ ರೂ. ಡುದಿಯುವ ಬಂಡವಾಳ 6 ಕೋಟಿ ರೂ.ಗೆ ಬೆಳೆದಿದೆ. ಇದಕ್ಕೆಲ್ಲ ಸಮಾಜಮುಖಿ, ಧಾರ್ಮಿಕ ಚಿಂತನೆಯ ದಾನ ಗುಣದ ಹಣಮಂತ್ರಾಯ ಅವರ ಪಾರದರ್ಶಕ ಆಢಳಿತವೇ ಕಾರಣ ಎಂದರು.
ಸದಾ ಸಮಾಜಮುಖಿ ಚಿಂತನೆ ಮಾಡುವ ಹಣಮಂತ್ರಾಯ ಅವರು ತಮ್ಮ ಪತ್ನಿ ಇಂದಿರಾಬಾಯಿ ಅವರ ಹೆಸರಿನಲ್ಲಿ ಲಕ್ಷಾಂತರ ರೂ. ಬೆಲೆ ಬಾಳುವ ನಿವೇಶನವನ್ನು ಸಂಘದ ಕಟ್ಟಡ ನಿರ್ಮಾಣಕ್ಕೆ ದಾನ ನೀಡಿದ್ದು, ಇದೀಗ ಸ್ವಂತ ಕಟ್ಟಡ ಹೊಂದಲು ಸಾಧ್ಯವಾಗಿದೆ. ಇಂದಿರಾಬಾಯಿ-ಹಣಮಂತ್ರಾಯಗೌಡ ಅವರ ಆದರ್ಶ ದಾಂಪತ್ಯ, ಸಮಾಜಮುಖಿ ಗುಣಗಳು ಇಂದಿನ ಜನರಿಗೆ ಮಾದರಿಯಾಗಲಿ ಎಂದು ಆಶಿಸಿದರು.
ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ ನೀಡುವ ಜೊತೆಗೆ, ಸಮಗ್ರ ಕೃಷಿಗಾಗಿ ಹೈನೋದ್ಯಮ ಆಋಂಭಿಸಲು ರೈತರಿಗೆ ಶೇ.3 ರ ಬಡ್ಡಿ ದರದಲ್ಲಿ ಸಾಲ ನೀಡುತ್ತಿದೆ. ರೈತರು ತೋಟದಲ್ಲಿ ಮನೆಗಳನ್ನು ನಿರ್ಮಿಸಿಕೊಳ್ಳಲು ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ರೈತರ ಸಾಮಥ್ರ್ಯಕ್ಕೆ ಅನುಗುಣವಾಗಿ 15 ಲಕ್ಷ ರೂ. ವರೆಗೆ ಸಾಲ ನೀಡುವ ಯೋಜನೆ ಜಾರಿಗೆ ತಂದಿದೆ. ಜಿಲ್ಲೆಯ ರೈತರು ಇದರ ಸದ್ಬಳಕೆ ಮಾಡಿಕೊಂಡು ರೈತರು ಆರ್ಥಿಕವಾಗಿ ಸಶಕ್ತರಾಗಬೇಕು ಎಂದು ಸಲಹೆ ನೀಡಿದರು.
ಜಿಲ್ಲೆಯ ರೈತರು ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಹಾಗೂ ಗ್ರಾಮೀಣ ಸಹಕಾರಿ ಬ್ಯಾಂಕ್ಗಳ ಮೂಲಕ ರೈತರು ಪಡೆದ ಸಾಲವನ್ನು 2017-18 ಹಾಗೂ 2018-19 ರಲ್ಲಿ ಸರ್ಕಾರ ಸಾಲ ಮನ್ನಾ ಯೋಜನೆಯಲ್ಲಿ ಕೋಟ್ಯಂತರ ರೂ. ಸಾಲ ಮನ್ನಾ ಮಾಡಿದೆ. ನಮ್ಮ ಬ್ಯಾಂಕ್ ಸಾಲ ನೀಡಿದ್ದರಿಂದಲೇ ರೈತರಿಗೆ ಸಾಲಮನ್ನಾ ಯೋಜನೆ ಲಾಭ ಸಿಗುವಂತಾಗಿದೆ ಎಂಬುದು ಗಮನೀಯ ಎಂದರು.
ಜಿಲ್ಲೆಯ ರೈತರು ಒಬ್ಬರು ಬೆಳೆದ ಬೆಳೆಯನ್ನೇ ಎಲ್ಲರೂ ಬೆಳೆದು ಮಾರುಕಟ್ಟೆಗೆ ಕೊಂಡೊಯ್ದಾಗ ಬೆಲೆ ಕುಸಿತವಾಗಿ, ಕೃಷಿ ಉತ್ಪನ್ನಗಳಿಗೆ ಸೂಕ್ತ ಬೆಲೆ ಸಿಗದೇ ಆರ್ಥಿಕ ಹಾನಿ ಅನುಭವಿಸಬೇಕಾಗುತ್ತದೆ. ವೈಜ್ಞಾನಿಕವಾಗಿ ಕೃಷಿ ಮಾಡಬೇಕು. ಆರ್ಥಿಕ ಸಬಲೀಕರಣಕ್ಕೆ ಸಹಕಾರಿ ಆಗಬಲ್ಲ ಬೆಳೆಗಳನ್ನು ಬೆಳೆಯಬೇಕು. ಏಕ ಬೆಳೆ ಪದ್ಧತಿಯ ಬದಲಾಗಿ ಬಹು ಬೆಳೆಯ ಪದ್ಧತಿಗಳನ್ನು ಅಳವಡಿಸಿಕೊಳ್ಳಬೇಕು. ಆಗಲೇ ರೈತರು ಆರ್ಥಿಕವಾಗಿ ಸದೃಢರಾಗಲು ಸಾಧ್ಯ ಎಂದು ಸಲಹೆ ನೀಡಿದರು.
ಕಡಗಂಚಿ ಶ್ರೀವೀರಭದ್ರ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು, ವಿಡಿಸಿಸಿ ಬ್ಯಾಂಕ್ ನಿರ್ದೇಶಕರೂ ಆಗಿರುವ ಪಡಗಾನೂರ ವಿವಿಧೋದ್ದೇಶಗಳ ಪ್ರಾಥಮಿಕ ಗ್ರಾಮೀಣ ಸಹಕಾರಿ ಸಂಘದ ಅಧ್ಯಕ್ಷ ಹಣಮಂತ್ರಾಯಗೌಡ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ದೇವರಹಿಪ್ಪರಗಿ ಶಾಕಸರಾದ ರಾಜುಗೌಡ ಪಾಟೀಲ ಜ್ಯೋತಿ ಬೆಳಗಿಸಿದರು.
ಅಯ್ಯಪ್ಪಯ್ಯ ಹಿರೇಮಠ, ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಉಪಾಧ್ಯಕ್ಷರಾದ ರಾಜಶೇಖರ ಗುಡದಿನ್ನಿ, ನಿರ್ದೇಶಕರಾದ ಚಂದ್ರಶೇಖರಗೌಡ ಪಾಟೀಲ ಮನಗೂಳಿ, ಸುರೇಶ ಬಿರಾದಾರ, ಬಿ.ಎಸ್.ಪಾಟೀಲ ಯಾಳಗಿ, ಗುರುಶಾಂತ ನಿಡೋಣಿ, ಕಲ್ಲನÀಗೌಡ ಪಾಟೀಲ, ಮುಖ್ಯ ಕಾರ್ಯನಿವಾಹಕ ಅಧಿಕಾರಿ ಎಸ್.ಎ.ಡವಳಗಿ, ವಿವಿಧ ಅಧಿಕಾರಿಗಳಾದ ಕೆ.ಎಚ್.ವಡ್ಡರ್, ಜೆ.ಬಿ.ಪಾಟೀಲ, ಎಸ್.ಜಿ.ಬಡಾನವರ, ಲೀಲಾವತಿಗೌಡ, ಪಡಗಾನೂರ ವಿವಿಧೋದ್ದೇಶಗಳ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿ ಬ್ಯಾಂಕ್ ನಿರ್ದೇಶಕರಾದ ಪಾಂಡಪ್ಪಗೌಡ ಪಾಟೀಲ, ಅಪ್ಪಾಸಾಹೇಬ ಗಬ್ಬೂರ, ವಿಠ್ಠಲ ಕಬ್ಬಿನ, ಶಿವಕಾಂತಮ್ಮ ಹಿರೇಮಠ, ಇಂದಿರಾಬಾಯಿ ಕಬ್ಬಿನ, ರಾಯಗೊಂಡಪ್ಪ ಬನಗೊಂಡ, ಮುತ್ತಪ್ಪ ಚಿಗರಿ, ಸೋಮರಾಯ ಮುರಾಳ, ಬಾಬು ರಾಠೋಡ, ಎ.ಬಿ.ಖಂಡೇಕರ, ಸಿಇಒ ಶಂಕರಗೌಡ ಪಾಟೀಲ ಸೇೀರಿದಂತೆ ಇತರರು ವೇದಿಕೆ ಮೇಲಿದ್ದರು.
ಕಾರ್ಯಕ್ರಮಕ್ಕೆ ಆಗಮಿಸಿದ ಸಚಿವ ಶಿವಾನಂದ ಪಾಟೀಲ ಸೇರಿದಂತೆ ಗಣ್ಯರನ್ನು ಪಡಗಾನೂರ ಗ್ರಾಮಸ್ಥರು ಡೊಳ್ಳು ಹಾಗೂ ಜನಪದ ವಾದ್ಯ ಮೇಳಗಳೊಂದಿಗೆ ಭವ್ಯವಾಗಿ ಸ್ವಾಗಸಿದ್ದು ವಿಶೇಷವಾಗಿತ್ತು.
ಆರ್.ಎಂ.ಬಣಗಾರ ನಿರೂಪಿಸಿದರು. ಪಡಗಾನೂರ ಬ್ಯಾಂಕಿನ ಉಪಾಧ್ಯಕ್ಷರಾದ ನಿಂಗನಗೌಡ ಪಾಟೀಲ ವಂದಿಸಿದರು.
ತೋಟದ ಮನೆ ನಿರ್ಮಾಣಕ್ಕೆ, ಹೈನೋದ್ಯಮಕ್ಕೆ ವಿಡಿಸಿಸಿ ಬ್ಯಾಂಕ್ ಸಾಲ: ಸಚಿವ ಶಿವಾನಂದ
