ಸಪ್ತಸಾಗರ ವಾರ್ತೆ, ವಿಜಯಪುರ,ಆ.1 : ಸತತ ಎರಡು ವರ್ಷಗಳ ದಲಿತ ವಿದ್ಯಾರ್ಥಿ ಪರಿಷತ್ ನ ಹೋರಾಟದ ಫಲವಾಗಿ ಅಕ್ಕ ಮಹಾದೇವಿ ಮಹಿಳಾ ವಿಶ್ವವಿದ್ಯಾಲಯದಲ್ಲಿ ಸಮಾಜ ಕಲ್ಯಾಣ ಇಲಾಖೆಯಡಿ ಎಸ್ಸಿ, ಎಸ್ಟಿ ವಿದ್ಯಾರ್ಥಿನಿಯರಿಗೆ ವಸತಿ ನಿಲಯ ಆರಂಭವಾಗಿದ್ದು ಸಂತೋಷದ ಸಂಗತಿಯಾಗಿದೆ ಎಂದು ಪರಿಷತ್ ಸಂಸ್ಥಾಪಕ ಅಧ್ಯಕ್ಷ ಶ್ರೀನಾಥ ಪೂಜಾರಿ ಹರ್ಷ ವ್ಯಕ್ತಪಡಿಸಿದರು.
ಮಹಿಳಾ ವಿಶ್ವವಿದ್ಯಾಲಯದ ಅವರಣದ ನೂತನವಾಗಿ ಆರಂಭವಾದ ಎಸ್ಸಿ, ಎಸ್ಟಿ ಮಹಿಳಾ ವಸತಿ ನಿಲಯಕ್ಕೆ ಚಾಲನೆ ನೀಡುವ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, ಈ ಮಹಿಳಾ ವಸತಿ ನಿಲಯಕ್ಕಾಗಿ ಸತತ ಎರಡು ವರ್ಷಗಳಿಂದ ಹೋರಾಟ ಮಾಡಿ, ವಿಶ್ವವಿದ್ಯಾಲಯದ ಆಡಳಿತ ಮಂಡಳಿಯ ಜೊತೆಗೆ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಗೆ ಆಗ್ರಹಿಸಲಾಗಿತ್ತು. ಇಂದು ಬಹು ದಿನಗಳ ಬೇಡಿಕೆ ಈಡೇರಿದೆ. ಮುಂದಿನ ದಿನಗಳಲ್ಲಿ ವಸತಿ ನಿಲಯಕ್ಕೆ ಬೇಕಾದ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತಂದು ಮತ್ತಷ್ಟು ಅಭಿವೃದ್ಧಿ ಪಡಿಸಲು ಎಲ್ಲರೂ ಜೊತೆಗೂಡಿ ಪ್ರಯತ್ನಿಸಿಸೋಣ ಎಂದು ಹೇಳಿದರು.
ಈ ವೇಳೆ ಮಾತನಾಡಿದ ವಿಶ್ವ ವಿದ್ಯಾಲಯದ ಕುಲಪತಿ ಪ್ರೊ. ವಿಜಯಾ ಕೋರಿಶಟ್ಟಿ ಅವರು, ಸಾವಿತ್ರಿಬಾಯಿ ಫುಲೆ ಅವರ ವಿಚಾರಗಳನ್ನು ವಿದ್ಯಾರ್ಥಿನಿಯರು ಮೈಗೂಡಿಸಿಕೊಂಡು ಉತ್ತಮ ಶಿಕ್ಷಣ ಪಡೆದು ಉನ್ನತ ಮಟ್ಟಕ್ಕೆ ಬೆಳೆಯಬೇಕು. ಜೊತೆಗೆ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ತೋರಿದ ಮಾರ್ಗದಲ್ಲಿ ಸಾಗಿದರೆ ಅವರು ಕಂಡ ಮಹಿಳಾ ಸಬಲೀಕರಣ ಕನಸು ನನಸಾಗಲು ಸಾಧ್ಯ ಎಂದರು.
ಈ ವೇಳೆ ವಿಶ್ವ ವಿದ್ಯಾಲಯದ ಕುಲಸಚಿವ ಶಂಕರಗೌಡ ಸೋಮನಾಳ, ಸಮಾಜ ಕಲ್ಯಾಣ ಇಲಾಖೆಯ ತಾಲ್ಲೂಕು ಸಹಾಯಕ ನಿರ್ದೇಶಕ ಬಿ. ಜೆ. ಇಂಡಿ, ವಿಶ್ವವಿದ್ಯಾಲಯದ ಎಸ್ಸಿ,ಎಸ್ಟಿ ವಿಭಾಗದ ಡಾ. ಹನಮಂತಯ್ಯ ಪೂಜಾರಿ, ಸಮಾಜ ಕಲ್ಯಾಣ ಇಲಾಖೆಯ ವಸತಿ ವಾರ್ಡನ್ ಶಕುಂತಲಾ ರಜಪೂತ, ಪರಿಷತ್ತಿನ ರಾಜ್ಯ ಸಂಚಾಲಕ ಬಾಲಾಜಿ ಕಾಂಬಳೆ, ಜಿಲ್ಲಾ ಸಂಚಾಲಕ ಅಕ್ಷಯಕುಮಾರ ಅಜಮನಿ, ಸಹ ಸಂಚಾಲಕ ಮಹಾದೇವ ಚಲವಾದಿ, ಮುಖಂಡರಾದ ಸಂದೇಶ್ ಅಲ್ಲದೇ ವಸತಿ ನಿಲಯ ಸಿಬ್ಬಂದಿಗಳು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಡಿವಿಪಿ ಹೋರಾಟದ ಫಲಶೃತಿ : ಮಹಿಳಾ ವಿಶ್ವವಿದ್ಯಾಲಯದಲ್ಲಿ ನೂತನ ವಸತಿ ನಿಲಯ ಆರಂಭ
