ಬಸವನಬಾಗೇವಾಡಿಯಲ್ಲಿ ವ್ಯಸನ ಮುಕ್ತ ದಿನಾಚರಣೆ

ಸಪ್ತಸಾಗರ ವಾರ್ತೆ, ವಿಜಯಪುರ, ಆ. 1: ದುರ್ವ್ಯಸನಗಳು ಹಾಗೂ ದುಶ್ಚಟಗಳ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಿ, ಮನಸ್ಸು ಪರಿವರ್ತಿಸಿ, ಜನರಲ್ಲಿನ ದುಶ್ಚಟಗಳನ್ನೇ ತಮ್ಮ ಜೋಳಿಗೆಯಲ್ಲಿ ಭಿಕ್ಷೆಯ ರೂಪದಲ್ಲಿ ಸಂಗ್ರಹಿಸಿ ವ್ಯಸನಮುಕ್ತ ಸಮಾಜ ನಿರ್ಮಾಣಕ್ಕೆ ಶ್ರಮಿಸಿದವರು ಡಾ. ಮಹಾಂತ ಶಿವಯೋಗಿಗಳು ಎಂದು ಅಥಣಿಯ ಮೋಟಗಿಮಠದ ಪ್ರಭು ಚನ್ನಬಸವ ಸಾಮೀಜಿ ಹೇಳಿದರು.
ಜಿಲ್ಲೆಯ ಬಸವನಬಾಗೇವಾಡಿ ಪಟ್ಟಣದಲ್ಲಿ ತಾಲೂಕಾ ಆಡಳಿತದ ವತಿಯಿಂದ ಹಮ್ಮಿಕೊಂಡಿದ್ದ ಮಹಾಂತ ಶಿವಯೋಗಿಗಳ ಜಯಂತಿಯ ಪ್ರಯುಕ್ತ ವ್ಯಸನ ಮುಕ್ತ ದಿನಾಚರಣೆಯ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಬಾಗಲಕೋಟೆಯ ಜಮಖಂಡಿ ತಾಲೂಕಿನ ಹಿಪ್ಪರಗಿ ಗ್ರಾಮದಲ್ಲಿ ಜನಿಸಿದ ಮಹಾಂತ ಶ್ರೀಗಳು 10 ನೇ ವಯಸ್ಸಿನಲ್ಲಿ ಸನ್ಯಾಸತ್ವ ಸ್ವೀಕರಿಸಿದ ಪೂಜ್ಯರು
ವ್ಯಸನ ಮುಕ್ತ ಸಮಾಜದ ನಿರ್ಮಾಣಕ್ಕೆ ವಿದ್ಯಾರ್ಥಿಗಳು ಮತ್ತು ಯುವಕರು ಮುಂದಾಗಬೇಕು. ಕುತೂಹಲಕ್ಕಾಗಿ ಯಾರೊಬ್ಬರೂ ಮಾದಕ ದ್ರವ್ಯ ಬಳಸಬಾರದು. ಮಾನಸಿಕ ಅಸ್ವಸ್ಥರನ್ನು ಗುರುತಿಸಿ ಚಿಕಿತ್ಸೆ ನೀಡಿ ಸಮಾಜದ ಮುಖ್ಯವಾಹಿನಿಗೆ ತರುವಂತೆ ಮಾಡುವುದು ಗುರುತರ ನಾಗರಿಕ ಸಮಾಜದ ಕರ್ತವ್ಯ. ಖಿನ್ನತೆಯಿಂದ ಮಾನಸಿಕ ದುಃಖ ಉಂಟಾಗಿ ವ್ಯಕ್ತಿಯ ಸಾಮರ್ಥ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುವ ಸಾಧ್ಯತೆ ಇದೆ ಎಂದರು.
ರಾಷ್ಟ್ರೀಯ ಬಸವಸೈನ್ಯದ ಸಂಸ್ಥಾಪಕ ಅಧ್ಯಕ್ಷ ಶಂಕರಗೌಡ ಬಿರಾದಾರ ಮಾತನಾಡಿ, ಮಹಾಂತ ಶಿವಯೋಗಿಗಳು ಹಲವು ಸಮಾಜಮುಖಿ ಕಾರ್ಯಗಳನ್ನು ನಿರಂತರ ಅನ್ನ ದಾಸೋಹ, ವಚನ ಮಾಂಗಲ್ಯ, ದೇವದಾಸಿ ವಿಮೋಚನಾ ಸಂಸ್ಥೆ, ದೇವದಾಸಿಯರ ಮಕ್ಕಳಿಗೆ ಟ್ರಸ್ಟ್‌ ಸ್ಥಾಪನೆ, ನಿರುದ್ಯೋಗಿಗಳಿಗೆ ಮತ್ತು ವಿಧವೆಯರಿಗೆ ಕಾಯಕ ಸಂಜೀವಿನಿ ಸಂಸ್ಥೆ ಸ್ಥಾಪನೆ, ನಿಸರ್ಗ ಚಿಕಿತ್ಸೆ, ಯೋಗ ಕೇಂದ್ರ ಸ್ಥಾಪನೆ, ಶಾಖಾ ಮಠಗಳಿಗೆ ಪ.ಜಾತಿ ಮತ್ತು ಪಂಗಡಗಳ ಯುವಕರಿಗೆ ಧರ್ಮ ಸಂಸ್ಕಾರ ನೀಡಿ ಪಟ್ಟಾಭಿಷೇಕ ಮಾಡಿದ್ದು, ಮಹಿಳಾ ಸಾಧಕಿಯರಿಗೆ ಜಂಗಮ ದೀಕ್ಷೆ ನೀಡಿ ಮಠಾಧಿಕಾರಿಯನ್ನಾಗಿ ಮಾಡಿದ್ದು, ಮಠದ ನೂರಾರು ಎಕರೆ ಭೂಮಿಯನ್ನು ಆಯಾ ಗ್ರಾಮಗಳ ರೈತರಿಗೆ ಕೃಷಿ ಮಾಡಿ ಬದುಕಲು ನೀಡಿದ್ದು ಮುಂತಾದ ಹಲವು ಸಮಾಜಮುಖಿ ಕಾರ್ಯಗಳನ್ನು ಮಾಡಿದವರು ಮಹಾಂತ ಸ್ವಾಮಿಗಳು. ಅವರ ಹಾಕಿಕೊಟ್ಟ ಮಾರ್ಗದಲ್ಲಿ ನಾವೆಲ್ಲರೂ ನಡೆಯಬೇಕು ಎಂದು ಹೇಳಿದರು.
ತಾಲೂಕಾ ದಂಡಾಧಿಕಾರಿ ವೈ.ಎಸ್. ಸೋಮನಕಟ್ಟಿ ಅವರು ಮಾತನಾಡಿ, ಡಾ.ಮಹಾಂತ ಶಿವಯೋಗಿ ಅವರ ಜನ್ಮದಿನ ಆಗಸ್ಟ್ 1. ರಾಜ್ಯ ಸರ್ಕಾರವು ರಾಜ್ಯಾದ್ಯಂತ ವ್ಯಸನ ಮುಕ್ತ ದಿನವನ್ನಾಗಿ ಆಚರಿಸಲು ನಿರ್ಧರಿಸಿ ಆದೇಶಿಸಿದ್ದು, ಕರ್ನಾಟಕ ರಾಜ್ಯವನ್ನು ವ್ಯಸನ ಮುಕ್ತ ರಾಜ್ಯವಾಗಿ ಮಾಡಲು ಸಾರ್ವಜನಿಕರು ಹಾಗೂ ಯುವಜನತೆ ವ್ಯಸನಗಳಿಂದ ಮುಕ್ತವಾಗಲು ಈ ದಿನಾಚರಣೆಯು ಪ್ರೇರಣೆಯಾಗಲಿದೆ ಎಂದರು.
ಈ ಸಂದರ್ಭದಲ್ಲಿ ತಾಲೂಕ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಶಿವಾನಂದ ಮಂಗಾನವರ, ಬಸವರಾಜ ಹಾರಿವಾಳ, ಪುರಸಭೆ ಅಧ್ಯಕ್ಷೆ ಜಗದೇವಿ ಗುಂಡಳ್ಳಿ, ರವಿ ರಾಠೋಡ, ವೀರೇಶ ಗುಡಿಮನಿ, ಸಂಗಮೇಶ ಜಾಲಗೇರಿ,ಎಸ್.ಎಸ್. ಅವಟಿ, ಬಸವರಾಜ ಅಳ್ಳಗಿ, ಡಿಎಸ್ಪಿ ಬಾಲಪ್ಪ ನಂದಗಾವಿ, ಪೊಲೀಸ್ ಇನ್ಸಪೆಕ್ಟರ್ ಗುರುಶಾಂತ ದಶ್ಯಾಳ ಸೇರಿದಂತೆ ವಿವಿಧ ಶಾಲಾ ಮಕ್ಕಳು, ಶಿಕ್ಷಕರು ಹಾಜರಿದ್ದರು.

Share this