ಸಪ್ತಸಾಗರ ವಾರ್ತೆ ವಿಜಯಪುರ, ಆ. 2: ಜಗ ಬೆಳಗಲು ಸೂರ್ಯ, ಬದುಕು ಬೆಳಗಲು ಗುರು ಬೇಕು. ಭೌತಿಕ ಬದುಕನ್ನು ಬೆಳಗಲು ಅಧ್ಯಾತ್ಮ ಬೇಕು. ಅಂದಾಗ ಮಾನವನ ಬಾಳು ಉಜ್ವಲಗೊಳ್ಳಲಿದೆ ಎಂದು ಮ ಘ ಚ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಶ್ರಾವಣ ಮಾಸದ ನಿಮಿತ್ತ ಶುಕ್ರವಾರ ಸಂಜೆ ತಾಲೂಕಿನ ನಾಗಠಾಣ ಗ್ರಾಮದ ಉದಯಲಿಂಗೇಶ್ವರ ಹಿರೇಮಠದಲ್ಲಿ ನಡೆಯುತ್ತಿರುವ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮಳ ಪುರಾಣದಲ್ಲಿ ತೊಟ್ಟಿಲು ಕಾರ್ಯಕ್ರಮವನ್ನು ಉದ್ಧೇಶಿಸಿ ಮಾತನಾಡಿದರು.
‘ನೈತಿಕ ಮೌಲ್ಯಗಳು ಕುಸಿಯುತ್ತಿರುವ ಇಂದಿನ ದಿನಗಳಲ್ಲಿ ಜನತೆಗೆ ಮಾನಸಿಕ ನೆಮ್ಮದಿ ಇಲ್ಲದಂತಾಗಿದೆ. ನೆಮ್ಮದಿಯ ಬದುಕು, ಮಾನವ ಕಲ್ಯಾಣಕ್ಕಾಗಿ ಆಧ್ಯಾತ್ಮಿಕ ಚಿಂತನೆಗಳು, ಧರ್ಮ ಬೋಧನೆಗಳು ಅವಶ್ಯಕ’ ಎಂದು ಹೇಳಿದರು.
ಪ್ರವಚನಕಾರರಾದ ಉಮರಾಣಿಯ ವೇದಮೂರ್ತಿ ಮುರುಗೇಂದ್ರ ಶಾಸ್ತ್ರಿಗಳು ಮಾತನಾಡಿ, ಇಂದು ಮಾನವ ಮಾನವನಾಗಿ ಬದುಕಬೇಕು. ಸತ್ಯ, ಶುದ್ಧ, ಸಾತ್ವಿಕ ಬದುಕು ರೂಪಿಸಲು ಗುರುಗಳ ಮಾರ್ಗದರ್ಶನ ಅವಶ್ಯಕ ಎಂದರು.
ಶಿಕ್ಷಕ ಸಂತೋಷ ಬಂಡೆ ಮಾತನಾಡಿ, ಪ್ರೀತಿ, ಆರೈಕೆ, ರಕ್ಷಣೆ, ಕುಟುಂಬ ಮತ್ತು ಪೀಳಿಗೆಯ ಸಂಕೇತವೇ ತೊಟ್ಟಿಲು ಆಗಿದೆ. ಅದು ಪ್ರತಿಯೊಬ್ಬರ ಭವಿಷ್ಯದ ಬೆಳವಣಿಗೆಗೆ ಆಧಾರವಾಗಿದೆ ಎಂದು ಹೇಳಿದರು.
ಮಠದ ಆವರಣದಲ್ಲಿ ಕಟ್ಟಿದ ಅಲಂಕೃತ ತೊಟ್ಟಿಲಲ್ಲಿ ಮಲ್ಲಮ್ಮಳ ಮೂರ್ತಿ ಇಟ್ಟು ಮಲ್ಲಮ್ಮ ಎಂದು ನಾಮಕರಣ ಮಾಡಲಾಯಿತು. ಮಹಿಳೆಯರು ಸಾಂಪ್ರದಾಯಿಕ ಹಾಡುಗಳನ್ನು ಹಾಡಿ ಕಾರ್ಯಕ್ರಮ ನಡೆಸಿಕೊಟ್ಟರು.
ಶರಣಬಸು ಪೂಜಾರಿ, ಗಾಯಕ ವಿರೂಪಾಕ್ಷಯ್ಯ ಗೌಡಗಾಂವ, ತಬಲಾ ವಾದಕ ಬಸವರಾಜ ಆಳಂದ, ಗ್ರಾಮಸ್ಥರಾದ ಅಶೋಕ ಕತ್ನಳ್ಳಿ, ರಾವುತಪ್ಪ ಬಿಜ್ಜರಗಿ, ಶಂಕರಗೌಡ ಪಾಟೀಲ, ಸಿದ್ದನಗೌಡ ಪಾಟೀಲ, ಬಾಬು ಕೋಲಾರ, ಸುರೇಶ ಕತ್ನಳ್ಳಿ,ಮಹಾದೇವ ಲೋಣಿ,ಮುತ್ತು ಕತ್ನಳ್ಳಿ ಸೇರಿದಂತೆ ಅಪಾರ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡಿದ್ದರು.
ಮಾನವನ ಬಾಳು ಉಜ್ವಲಗೊಳ್ಳಲು ಅಧ್ಯಾತ್ಮ ಬೇಕು-ಚನ್ನಮಲ್ಲಿಕಾರ್ಜುನ ಶ್ರೀಗಳು
