ಯೋಜನೆಗಳ ಜಾರಿಗೆ ಅನುದಾನ ನೀಡದ ಸರ್ಕಾರ: ಕಾರಜೋಳ ಟೀಕೆ

ಸಪ್ತಸಾಗರ ವಾರ್ತೆ, ವಿಜಯಪುರ, ಆ. 8: ಸಾಮಾಜಿಕ ಯೋಜನೆಗಳ ಜಾರಿಗೆ ಕಾಂಗ್ರೆಸ್ ಸರ್ಕಾರ ಸಂಪೂರ್ಣ ಉದಾಸೀನ ತೋರುತ್ತಿದೆ. ಸಾಮಾಜಿಕ ಯೋಜನೆಗಳನ್ನು ಅನುಷ್ಠಾನಗೊಳಿಸುವ ಅನೇಕ ನಿಗಮಗಳಲ್ಲಿ ಭ್ರಷ್ಟಾಚಾರ ದೊಡ್ಡ ಮಟ್ಟದಲ್ಲಿ ನಡೆದಿದೆ. ಗಂಗಾ ಕಲ್ಯಾಣ, ಸ್ವಯಂ ಉದ್ಯೋಗಕ್ಕಾಗಿ ನೇರ ಸಾಲ ಯೋಜನೆ ಸೇರಿದಂತೆ ಯಾವ ಯೋಜನೆಗಳಿಗೂ ಸಮರ್ಪಕವಾಗಿ ಅನುದಾನವನ್ನೇ ಸರ್ಕಾರ ಬಿಡುಗಡೆ ಮಾಡಿಲ್ಲ. ಸರ್ಕಾರ ಕೂಡಲೇ ಈ ಯೋಜನೆಗಳಿಗೆ ಸಂಬಂಧಿಸಿದಂತೆ ಶ್ವೇತಪತ್ರ ಹೊರಡಿಸಬೇಕು ಎಂದು ಬಿಜೆಪಿ ರಾಜ್ಯ ಎಸ್.ಸಿ. ಮೋರ್ಚಾ ಪ್ರಧಾನಕಾರ್ಯದರ್ಶಿ ಉಮೇಶ ಕಾರಜೋಳ ಸರ್ಕಾರಕ್ಕೆ ಸವಾಲು ಹಾಕಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ಮೂಲಕ ಸರ್ಕಾರಕ್ಕೆ ಸವಾಲು ಹಾಕಿರುವ ಅವರು, ಎಸ್.ಸಿ.ಎಸ್.ಪಿ ಮತ್ತು ಟಿ.ಎಸ್.ಪಿ ಯೋಜನೆಯ ಹಣವನ್ನು ಸರ್ಕಾರ ಗ್ಯಾರಂಟಿ ಯೋಜನೆಗಳಿಗೆ ಮೀಸಲಿರಿಸುವ ಮೂಲಕ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಜನರಿಗೆ ರಾಜ್ಯ ಸರ್ಕಾರ ದ್ರೋಹ ಬಗೆಯುತ್ತಿದೆ, ಸರಿಸುಮಾರು ೩೬,೦೦೦ ಕೋಟಿ ರೂ. ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ದುರಪಯೋಗಮಾಡಿ ದಲಿತರಿಗೆ ಅನ್ಯಾಯ ಮಾಡುತ್ತಿದೆ. ಒಂದೆಡೆ ಅಹಿಂದ ವರ್ಗದ ಬಗ್ಗೆ ಸುಳ್ಳು ಕಾಳಜಿ ತೋರುವ ಸಿದ್ಧರಾಮಯ್ಯ ಅಹಿಂದ ವರ್ಗದ ಆಶೀರ್ವಾದಿಂದ ಅಧಿಕಾರಕ್ಕೆ ಬಂದು, ಈಗ ದಲಿತರ ತಟ್ಟೆಯಲ್ಲಿರುವ ಊಟವನ್ನು ಕಸಿಯುತ್ತಿದ್ದಾರೆ ಎಂದು ಕಾರಜೋಳ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕುರಿತು ಅನೇಕ ಸವಾಲುಗಳನ್ನು ಕೇಳಿರುವ ಅವರು, ಯಾವ ಯಾವ ಯೋಜನೆಯ ಅಡಿ ಎಷ್ಟು ಅನುದಾನವನ್ನು ದಲಿತರ ಶ್ರೇಯೋಭಿವೃದ್ಧಿಗೆ ಬಳಸಿದ್ದೀರಿ. ಈ ಹಿಂದೆ ನಮ್ಮ ಸರ್ಕಾರ ಅವಧಿಯಲ್ಲಿ ೪ ಸಾವಿರ ಎಕೆರೆಯಷ್ಟು ಭೂ ಒಡೆತನ ಯೋಜನೆಯಡಿ ದಲಿತರಿಗೆ ಮಂಜೂರು ಮಾಡಿದ್ದೇವೆ. ನಿಮ್ಮಸರಕಾರ ಅಧಿಕಾರಕ್ಕೆ ಬಂದ ನಂತರ ಭೂ ಒಡೆತನ ಯೋಜನೆಯಡಿ ಗಂಗಾ ಕಲ್ಯಾಣ ಯೋಜನೆಅಡಿ ಉದ್ಯಮ ಶಿಲತಾ ಅಭಿವೃದ್ದಿ ಯೋಜನೆಯಡಿ, ಸ್ವಯಂಉದ್ಯೋಗ ನೇರ ಸಾಲ ಯೋಜನೆಗಳು ಮೈಕ್ರೊ ಕ್ರೆಡಿಟ (ಪ್ರೇರಣಾ ಯೋಜನೆ) ಯಾವ ದಲಿತರಿಗೆಲ್ಲಾ ಈ ಯೋಜನೆಗಳಲ್ಲಿ ಅನುದಾನ ನೀಡಿದ್ದೀರಿ ಎಂಬುದರ ಬಗ್ಗೆ ಬಹಿರಂಗ ಮಾಹಿತಿ ನೀಡಿ ಎಂದು ಸವಾಲು ಹಾಕಿದ್ದಾರೆ.
ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಸದಸ್ಯರುಗಳಿಗೆ (ಕಾಂಗ್ರೆಸ್ ಕಾರ್ಯಕರ್ತರಿಗೆ) ಗೌರವ ಧನವನ್ನು ಯಾವ ಯೋಜನೆಯ ಹಣ ಎಂದು ಸಹ ಬಹಿರಂಗಗೊಳಿಸುವಂತೆ ಒತ್ತಾಯಿಸಿದ್ದಾರೆ.

Share