ಜೀವನದ ಮೌಲ್ಯ ಕಲಿಸುವ ಪವಿತ್ರ ಸಂಬಂಧವೇ ವಿವಾಹ -ಚನ್ನಮಲ್ಲಿಕಾರ್ಜುನ ಶ್ರೀಗಳು

ಸಪ್ತಸಾಗರ ವಾರ್ತೆ, ವಿಜಯಪುರ, ಆ. 9: ವಿವಾಹವು ದೈವಿಕ ಮತ್ತು ಪವಿತ್ರ ಸಂಬಂಧವಾಗಿದ್ದು, ಅದು ಜೀವನದ ಮೌಲ್ಯಗಳನ್ನು ಕಲಿಸುತ್ತದೆ ಎಂದು ಮ ಘ ಚ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಶುಕ್ರವಾರ ಸಂಜೆ ತಾಲೂಕಿನ ನಾಗಠಾಣ ಗ್ರಾಮದ ಉದಯಲಿಂಗೇಶ್ವರ ಮಠದಲ್ಲಿ ಶ್ರಾವಣ ಮಾಸದ ಪ್ರಯುಕ್ತ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಪುರಾಣದಲ್ಲಿ ‘ಹೇಮರೆಡ್ಡಿ ಮಲ್ಲಮ್ಮಳ ವಿವಾಹ ಮಹೋತ್ಸವ ಹಾಗೂ ವರಮಹಾಲಕ್ಷ್ಮಿ ಪೂಜಾ ಸಮಾರಂಭ’ ವನ್ನು ಉದ್ಧೇಶಿಸಿ ಅವರು ಮಾತನಾಡಿದರು.
ವಿವಾಹವು ಸಮಾಜದಲ್ಲಿ ಬಹಳ ಮಹತ್ವದ ಸ್ಥಾನ ಪಡೆದಿದೆ. ಇದು ಇಬ್ಬರು ವ್ಯಕ್ತಿಗಳ ನಡುವಿನ ಬದ್ಧತೆಯನ್ನು ಸಂಕೇತಿಸುತ್ತದೆ ಮತ್ತು ಜೀವನದುದ್ದಕ್ಕೂ ಜೊತೆಯಾಗಿರಲು ಅವರು ಮಾಡುವ ಒಪ್ಪಂದವಾಗಿದೆ. ಇದು ದಾಂಪತ್ಯ ಜೀವನಕ್ಕೆ ಕಾಲಿಡುವ ಪ್ರಮುಖ ಹಂತವಾಗಿದೆ ಎಂದು ಹೇಳಿದರು.
ಶಿಕ್ಷಕ ಸಾಹಿತಿ ಸಂತೋಷ ಬಂಡೆ ಉಪನ್ಯಾಸ ನೀಡುತ್ತಾ ಮಾತನಾಡಿ, ವಿವಾಹವು ವ್ಯಕ್ತಿಗಳಿಗೆ ಸಂತೋಷ, ನೆಮ್ಮದಿ, ಸಂತೃಪ್ತಿಯನ್ನು ನೀಡಿ, ಇದು ಜೀವನದ ಕಷ್ಟಗಳನ್ನು ಎದುರಿಸಲು ಧೈರ್ಯ ನೀಡುತ್ತದೆ. ಶಿವ-ಪಾರ್ವತಿ, ರಾಮ-ಸೀತೆ, ಕೃಷ್ಣ-ರುಕ್ಮಿಣಿರಂತಹ ವಿವಾಹಗಳು ಪ್ರೀತಿ, ನಿಷ್ಠೆ, ಕರ್ತವ್ಯ ಮತ್ತು ಬದ್ಧತೆಯಂತಹ ಮೌಲ್ಯಗಳನ್ನು ಪ್ರತಿಬಿಂಬಿಸುತ್ತವೆ ಎಂದು ಹೇಳಿದರು.
ಉಮರಾಣಿಯ ವೇದಮೂರ್ತಿ ಮುರುಗೇಂದ್ರ ಶಾಸ್ತ್ರಿಗಳು ಪುರಾಣ ಕಾರ್ಯಕ್ರಮ ನಡೆಸಿಕೊಟ್ಟರು. ಹೇಮರೆಡ್ಡಿ ಮಲ್ಲಮ್ಮಳ ಮದುವೆ ಹಾಗೂ ವರಮಹಾಲಕ್ಷ್ಮಿ ಪೂಜಾ ವಿಧಿ ವಿಧಾನವನ್ನು ತದ್ದೇವಾಡಿಯ ಪ್ರಭಾಕರ ಶಾಸ್ತ್ರಿ ಜರುಗಿಸಿದರು.
ಶರಣಬಸು ಪೂಜಾರಿ, ಗಾಯಕ ವಿರೂಪಾಕ್ಷಯ್ಯ ಗೌಡಗಾಂವ, ತಬಲಾ ವಾದಕ ಬಸವರಾಜ ಆಳಂದ, ಗ್ರಾಮಸ್ಥರಾದ ಅಶೋಕ ಕತ್ನಳ್ಳಿ, ರಾವುತಪ್ಪ ಬಿಜ್ಜರಗಿ, ಶಂಕರಗೌಡ ಪಾಟೀಲ, ಸಿದ್ದನಗೌಡ ಪಾಟೀಲ, ಬಾಬು ಕೋಲಾರ, ಸುರೇಶ ಕತ್ನಳ್ಳಿ, ಮಹಾದೇವ ಲೋಣಿ, ಮುತ್ತು ಕತ್ನಳ್ಳಿ, ಹಣಮಂತ ಬಕಾಟಿ ಸೇರಿದಂತೆ ಅಪಾರ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡಿದ್ದರು.

Share