ನಾಳೆಯಿಂದ ಸಾರವಾಡದಲ್ಲಿಈಶ್ವರ ಹಾಗೂ ಮಾರುತಿ ದೇವರ ಜಾತ್ರೆ

ಸಪ್ತಸಾಗರ ವಾರ್ತೆ, ವಿಜಯಪುರ, ಆ.13 :
ಜಿಲ್ಲೆಯ ಬಬಲೇಶ್ವರ ತಾಲೂಕಿನ ಸಾರವಾಡ ಗ್ರಾಮದಲ್ಲಿ ಶ್ರೀ ಈಶ್ವರ ಹಾಗೂ ಶ್ರೀ ಮಾರುತಿ ದೇವರ ಜಾತ್ರಾ ಮಹೋತ್ಸವವು ಇದೇ ದಿ.೧೪ ರಿಂದ ಐದು ದಿನಗಳವರೆಗೆ ವಿಜೃಂಭಣೆಯಿಂದ ಜರುಗಲಿದೆ.
ಜಾತ್ರೆಯ ಅಂಗವಾಗಿ ವಿವಿಧ ಸ್ಪರ್ಧೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ದಿ.14 ರಂದು ವಿವಿಧ ವಾದ್ಯ ಮೇಳ ಜಾಗೂ ಪಲ್ಲಕ್ಕಿ ಉತ್ಸವದೊಂದಿಗೆ ಕುಲಕರ್ಣಿ ಅವರ ಮನೆಯಿಂದ ಮಾರುತಿ ದೇವರ ಉತ್ಸವ ಮೂರ್ತಿಯನ್ನು ಮಾರುತಿ ದೇವಸ್ಥಾನಕ್ಕೆ ತಂದು ಬಳಿಕ ಓಕಳಿ ಕಂಬ ನಿಲ್ಲಿಸುವುದರೊಂದಿಗೆ ಜಾತ್ರೆಗೆ ವಿದ್ಯುಕ್ತವಾಗಿ ಚಾಲನೆ ದೊರೆಯುವುದು. ಸಂಜೆ ಪಲ್ಲಕ್ಕಿ ಉತ್ಸವ ಹಾಗೂ ರಾತ್ರಿ ಜೈ ಹನುಮಾನ ನಾಟ್ಯ ಸಂಘದವರಿಂದ ಬಯಲಾಟ ನಡೆಯಲಿದೆ. ಅದೇ ದಿನ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿಯನ್ನೂ ಏರ್ಪಡಿಸಲಾಗಿದೆ. ೧೫ ರಂದು ಬೆಳಿಗ್ಗೆ ಮತ್ತು ಸಂಜೆ ಪಲ್ಲಕ್ಕಿ ಉತ್ಸವ. ರಾತ್ರಿ ಆದಿಶಕ್ತಿ ಗಜಾನನ ತರುಣ ಮಂಡಳಿಯವರಿಂದ ಧರ್ಮದ ನುಡಿ ಬೆಂಕಿಯ ಕುಡಿ ಎಂಬ ಸಾಮಾಜಿಕ ನಾಟಕ ಪ್ರದರ್ಶನಗೊಳ್ಳುವುದು. ೧೬ ರಂದು ಬೆಳಿಗ್ಗೆ ಸಂಜೆ ಪಲ್ಲಕ್ಕಿ ಉತ್ಸವ ರಾತ್ರಿ ಅರವತ್ತು ಹಳ್ಳಿಯ ಅರಸ ನಾಟಕ ಪ್ರದರ್ಶನವಿರುತ್ತದೆ.
೧೭ ರಂದು ಬೆಳಿಗ್ಗೆ ೯ಕ್ಕೆ ಎತ್ತಿನ ಗಾಡಿ ಸ್ಪರ್ಧೆ, ೧೦ಕ್ಕೆ ಶ್ರೀಮತಿ ವಿದ್ಯಾಶ್ರೀ ಮಸಬಿನಾಳ ಹಾಗೂ ಮದರಿ ಭಾಗಣ್ಣ ಕಲಾವಿದರಿಂದ ಗೀಗೀ ಪದಗಳು. ಮಧ್ಯಾಹ್ನ ೧೨ಕ್ಕೆ ನಂದಿಕೋಲ ಮೆರವಣಿಗೆಯೊಂದಿಗೆ ಶ್ರೀ ಈಶ್ವರ ದೇವಸ್ಥಾನಕ್ಕೆ ಹಿಟ್ಟಕ್ಕಿ ತರುವುದು. ಸಂಜೆ ೪ಕ್ಕೆ ದದಾಮಟ್ಟಿಯಿಂದ ರಥೋತ್ಸವದ ಹಗ್ಗವನ್ನು ತರುವುದು. ಸಂಜೆ ೬ಕ್ಕೆ ಶ್ರೀ ಜಗಳೂರಿನಸಾರಂಗಪ್ಪಯ್ಯಮಹಾಸ್ವಾಮಿಗಳ ಸಾನಿಧ್ಯದಲ್ಲಿ ಪುರವಂತರ ಮೇಳದೊಂದಿಗೆ ರಥೋತ್ಸವ ಜರುಗುವುದು ನಂತರ ಅನ್ನಸಂತರ್ಪಣೆ. ರಾತ್ರಿ ೧೦.೩೦ಕ್ಕೆ ಹಳೆಯ ವಿದ್ಯಾರ್ಥಿ ಬಳಗದಿಂದ ರಸಮಂಜರಿ ಕಾರ್ಯಕ್ರಮ. ದಿ. ೧೮ರಂದು ನೂತನವಾಗಿ ನಿರ್ಮಾಣಗೊಂಡ ಶ್ರೀ ಸದಾಶಿವ ಮುತ್ಯಾನ ಕಟ್ಟಡದ ಕಳಸಾರೋಹಣ. ಬೆಳಿಗ್ಗೆ ೯ಕ್ಕೆ ಭಾರ ಎತ್ತುವ ಸ್ಪರ್ಧೆ. ನಂತರ ಶ್ರೀ ಈಶ್ವರ ದೇವರ ಪಲ್ಲಕ್ಕಿಯು ಎಡಿ ಈಶ್ವರ ದೇವಸ್ಥಾನಕ್ಕೆ ಹೋಗಿ ಬರುವುದು. ಆ ಬಳಿಕ ಪಲ್ಲಕ್ಕಿ ಉತ್ಸವ. ಮಧ್ಯಾಹ್ನ ಶ್ರೀ ಮಾರುತಿ ದೇವರ ಓಕಳಿ ನಂತರ ಪಲ್ಲಕ್ಕಿ ಉತ್ಸವ. ಸಂಜೆ ೪ಕ್ಕೆ ಪ್ರಸಿದ್ದ ಜಟ್ಟಿಗಳಿಂದ ಕುಸ್ತಿ. ರಾತ್ರಿ ೧೦.೩೦ಕ್ಕೆ ಶ್ರೀಮತಿ ಯಲ್ಲವ್ವ ಲೋಕಾಪುರ ತಂಡದ ಕಲಾವಿದರಿಂದ ಶ್ರೀಕೃಷ್ಣ ಪಾರಿಜಾತ ಬಯಲಾಟವಿರುತ್ತದೆ. ದಿ. ೨೦ ರಂದು ಶ್ರಾವಣಮಾಸದ ಪುರಾಣ ಮಂಗಲೋತ್ಸವ ನಡೆಯಲಿದೆ.
ಜಾತ್ರೆಯ ಸಂದರ್ಭದಲ್ಲಿ ಪ್ರತಿದಿನ ಕುದುರೆ ಕುಣಿತ, ಗೊಂಬೆ ಕುಣಿತ ಹಾಗೂ ಇತರ ಮನರಂಜನೆ ಕಾರ್ಯಕ್ರಮಗಳು ನಡೆಯಲಿವೆ.
ಭಕ್ತಾದಿಗಳು ಈ ಜಾತ್ರಾ ಮಹೋತ್ಸವದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ಶ್ರೀ ಈಶ್ವರ ಹಾಗೂ ಶ್ರೀ ಮಾರುತಿ ದೇವಸ್ಥಾನ ಸೇವಾ ಸಮಿತಿ ಹಾಗೂ ಜಾತ್ರಾ ಕಮೀಟಿ ಪ್ರಕಟಣೆಯಲ್ಲಿ ಕೋರಿದೆ.

Share