ಸಪ್ತಸಾಗರ ವಾರ್ತೆ ವಿಜಯಪುರ, ಆ. 18: ಹಲವಾರು ಸಮಾಜಮುಖಿ ಕಾರ್ಯ ಚಟುವಟಿಕೆಗಳನ್ನು ಕೈಗೊಳ್ಳಲು ಸ್ಥಾಪನೆಯಾಗಿರುವ ಶರತ್ ಪಾಟೀಲ ಫೌಂಡೇಶನ್ ಹಾಗೂ ನನನ್ನ ಗಿಡ ನನ್ನ ಭೂಮಿ ಸಂಘಟನೆ ವತಿಯಿಂದ ನಗರದ ಆಶ್ರಮ ರಸ್ತೆಯಲ್ಲಿರುವ ಜಾಗೆಯಲ್ಲಿ 1001 ಸಸಿ ನೆಡುವ ಪರಿಸರಮುಖಿ ಕಾರ್ಯಕ್ರಮ ನಡೆಯಿತು.
ಸಸಿ ನೆಡುವ ಕಾರ್ಯಕ್ಕೆ ಚಾಲನೆ ನೀಡಿದ ಖ್ಯಾತ ಚಿಂತಕ ಹಾಗೂ ಯುವ ಬ್ರಿಗೇಡ್ ಸಂಸ್ಥಾಪಕ ಅಧ್ಯಕ್ಷ ಚಕ್ರವರ್ತಿ ಸೂಲಿಬೆಲೆ ಮಾತನಾಡಿ, ಪರಿಸರ ರಕ್ಷಣೆ ಪ್ರತಿಯೊಬ್ಬರ ಹೊಣೆಗಾರಿಕೆ, ನಮ್ಮನ್ನು ಸಲುಹುತ್ತಿರುವ ಪರಿಸರ ನಮಗೆ ಬೆಲೆ ಕಟ್ಟಲಾಗದ ಪ್ರಾಣವಾಯು, ಆಹಾರ ನೀಡುತ್ತಿದೆ. ಒಂದು ಆಕ್ಸಿಜನ್ ಸಿಲಿಂಡರ್ ಬೆಲೆ ಎಷ್ಟೊಂದು ನಿಮಗೆ ಗೊತ್ತಿರಬಹುದು. ಆದರೆ ಗಿಡಮರಗಳು ನಮಗೆ ಉಚಿತವಾಗಿ ಆಕ್ಸಿಜನ್ ನೀಡುತ್ತವೆ. ಆದರೆ ನಾವುಗಳು ಪರಿಸರಕ್ಕೆ ಪ್ರತಿಯಾಗಿ ಪರಿಸರ ಮಾಲಿನ್ಯ ಮಾಡುತ್ತಿದ್ದೇವೆ. ಸಕಾರಣವಿಲ್ಲದೇ ಗಿಡ ಮರ ಕತ್ತರಿಸುತ್ತಿದ್ದೇವೆ. ಹೀಗಾಗಿ ಗಿಡ ಮರಗಳನ್ನು ನೆಡುವುದು, ಪೋಷಿಸುವುದು ನಮ್ಮ ದೈನಂದಿನ ಜೀವನದ ಭಾಗವಾಗಬೇಕು ಎಂದರು.
ಪರಿಸರ ರಕ್ಷಣೆ ಪವಿತ್ರ ಕರ್ತವ್ಯ ದಲ್ಲಿ ಪ್ರತಿಯೊಬ್ಬರು ಸ್ವಯಂ ಪ್ರೇರಣೆಯಿಂದ ಭಾಗವಹಿಸಬೇಕು ಎಂದರು.
ಕಾರ್ಯಕ್ರಮದ ರೂವಾರಿ ಶರತ್ ಪಾಟೀಲ ಮಾತನಾಡಿ, ಪರಿಸರ ರಕ್ಷಣೆ ಜಾಗೃತಿಯ ಉದ್ದೇಶಕ್ಕಾಗಿ ಒಂದು ಸಾವಿರ ಸಸಿ ನೆಡುವ ಕಾರ್ಯ ಮಾಡಲಾಗುತ್ತಿದೆ. ಪರಿಸರ ರಕ್ಷಣೆ ಒಂದು ಪವಿತ್ರ ಕಾಯಕ. ಪರಿಸರ ರಕ್ಷಣೆಯಲ್ಲಿಯೇ ಜೀವ ಸಂಕುಲದ ಉಳಿವು ಅಡಗಿದೆ. ಹೀಗಾಗಿ ನಮ್ಮ ಫೌಂಡೇಶನ್ ವತಿಯಿಂದ ಪರಿಸರ ಹಾಗೂ ಸಮಾಜ ಸೇವೆಯ ಅನೇಕ ಕಾರ್ಯಕ್ರಮಗಳನ್ನು ಸಂಘಟಿಸುವ ಗುರಿ ಹೊಂದಲಾಗಿದೆ ಎಂದರು.
ಯುವ ಭಾರತ ಸಂಸ್ಥಾಪಕ ಅಧ್ಯಕ್ಷ ಉಮೇಶ ಕಾರಜೋಳ ಮಾತನಾಡಿದರು.
ಮೇಯರ್ ಎಂ.ಎಸ್. ಕರಡಿ, ಪಾಲಿಕೆ ಸದಸ್ಯ ಕಿರಣ ಪಾಟೀಲ, ವಿಜಯಕುಮಾರ ಮುರಗಾನೂರ, ರಾಜು ಜಾಧವ , ಶಶಾಂಕ ಕದ್ರಿ, ಬಸವರಾಜ ಬೈಚಬಾಳ, ಕರಣ ಪವಾರ, ವಿನಿತ ವಣರೊಟ್ಟಿ, ನಮನ ದುಭೆ, ಪ್ರಸಾದ ರೆಡ್ಡಿ ಉಪಸ್ಥಿತರಿದ್ದರು.
1001 ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ
