ಸಪ್ತಸಾಗರ ವಾರ್ತೆ, ಆ. 20:
ಪರಿಶಿಷ್ಟ ಜಾತಿ ಒಳ ಮೀಸಲಾತಿ ಜಾರಿಗೆ ಸಂಬಂಧಿಸಿದಂತೆ ಕರ್ನಾಟಕ ಸರ್ಕಾರದ ಸಚಿವ ಸಂಪುಟ ಕೈಗೊಂಡ ನಿರ್ಧಾರವನ್ನು ಆಮ್ ಆದ್ಮಿ ಪಕ್ಷದ ಜಿಲ್ಲಾಧ್ಯಕ್ಷ ಬೋಗೇಶ ಸೋಲಾಪುರ ಸ್ವಾಗತಿಸಿದ್ದಾರೆ.
ಈ ನಿರ್ಧಾರವು ಎಡಗೈ-ಬಲಗೈ ಸಮುದಾಯಗಳಿಗೆ ಶೇ. 6 ರಷ್ಟು ಹಾಗೂ ಕೊರಚ, ಕೊರಮ, ಭೋವಿ, ಲಂಬಾಣಿ ಜಾತಿಗಳನ್ನು ಒಳಗೊಂಡ ಸ್ಪ್ರಶ್ಯ ಗುಂಪುಗಳಿಗೆ ಶೇ. 5 ರಷ್ಟು ಮೀಸಲಾತಿಯನ್ನು ಒದಗಿಸುವ ಮೂಲಕ ಸಾಮಾಜಿಕ ನ್ಯಾಯ ಮತ್ತು ಸಮಾನತೆಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಚಿವ ಸಂಪುಟದ ಈ ನಿರ್ಧಾರವು 35 ವರ್ಷಗಳ ಹೋರಾಟಕ್ಕೆ ಕಡೆಗೂ ಜಯ ಸಿಕ್ಕಿದ್ದು, ಮಂತ್ರಿಮಂಡಲ ಒಪ್ಪಿಗೆ ನೀಡಿರುವುದು ಸ್ವಾಗತಾರ್ಹ ಸಂಗತಿ ಎಂದು ತಿಳಿಸಿದ್ದಾರೆ.
ಈ ಮೂಲಕ ಎಲ್ಲಾ ಹೋರಾಟಗಾರರಿಗೂ ಆಮ್ ಆದ್ಮಿ ಪಕ್ಷದ ವತಿಯಿಂದ ಅಭಿನಂದನೆಗಳು ಸಲ್ಲಿಸುತ್ತಿದೆ. ಸದಾಶಿವ ಆಯೋಗದ ವರದಿಯನ್ನು ಯಥಾವತ್ತಾಗಿ ಅಳವಡಿಸದ ಕಾರಣದಿಂದ ಅಲೆಮಾರಿ ಹಾಗೂ ಇನ್ನಿತರ ಧ್ವನಿ ಇಲ್ಲದ ಸಣ್ಣ ಸಣ್ಣ ಜಾತಿಗಳಿಗೆ ಒಳ ಮೀಸಲಾತಿ ಲಾಭ ದಕ್ಕುವುದಿಲ್ಲವೆಂಬ ಭಾವನೆಯೂ ಸಹ ಇದೆ.ದೀರ್ಘಕಾಲದಿಂದ ಬಾಕಿ ಇದ್ದ ಸಾಮಾಜಿಕ ನ್ಯಾಯದ ಬೇಡಿಕೆಗೆ ಸ್ಪಂದಿಸುವ ಮಹತ್ವದ ಕ್ರಮ ಇದಾಗಿದೆ ಎಂದು ಹೇಳಿದ್ದಾರೆ.
ಒಳ ಮೀಸಲಾತಿಯ ಜಾರಿಯು ಎಡಗೈ, ಬಲಗೈ ಮತ್ತು ಸ್ಪ್ರಶ್ಯ ಎಂದು ವರ್ಗೀಕರಿಸಿ ಈ ಸಮುದಾಯಗಳಿಗೆ ಶಿಕ್ಷಣ ಮತ್ತು ಉದ್ಯೋಗ ಕ್ಷೇತ್ರದಲ್ಲಿ ಸಮಾನ ಅವಕಾಶಗಳನ್ನು ಒದಗಿಸುವ ಮೂಲಕ ಸಾಮಾಜಿಕ ಸಮತೋಲನವನ್ನು ಸಾಧಿಸಲು ಸಹಕಾರಿಯಾಗಲಿದೆ. ಈ ಐತಿಹಾಸಿಕ ಕ್ರಮಕ್ಕಾಗಿ ರಾಜ್ಯ ಸರ್ಕಾರವನ್ನು ನಾವು ಅಭಿನಂದಿಸುತ್ತೇವೆ, ಎಂದು ಅವರು ಹೇಳಿದರು.
ಈ ನಿರ್ಧಾರವು ರಾಜ್ಯದ ವಿವಿಧ ಸಮುದಾಯಗಳಿಗೆ ನ್ಯಾಯಯುತ ಪ್ರಾತಿನಿಧ್ಯವನ್ನು ಒದಗಿಸುವ ದಿಶೆಯಲ್ಲಿ ಒಂದು ಪ್ರಗತಿಶೀಲ ಹೆಜ್ಜೆಯಾಗಿದ್ದು, ಇದರಿಂದ ಸಾಮಾಜಿಕ ಮತ್ತು ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ ಉತ್ತೇಜನ ಸಿಗಲಿದೆ ಎಂದು ಆಮ್ ಆದ್ಮಿ ಪಾರ್ಟಿಯು ವಿಶ್ವಾಸ ವ್ಯಕ್ತಪಡಿಸಿದೆ. ಈ ಕ್ರಮವನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಸರ್ಕಾರದೊಂದಿಗೆ ಸಹಕರಿಸಲು ಎಎಪಿ ಬದ್ಧವಾಗಿದೆ ಎಂದು ಸೋಲಾಪುರ ತಿಳಿಸಿದ್ದಾರೆ.
ಮುಂಬರುವ ದಿನಗಳಲ್ಲಿ ಬಾಕಿ ಇರುವ ಎಲ್ಲಾ ನೇಮಕಾತಿಗಳು, ಮುಂಬಡ್ತಿಗಳು ವೇಗದಲ್ಲಿ ಆಗಬೇಕು. ಪರಿಶಿಷ್ಟ ಜಾತಿ ಹಾಗೂ ಪಂಗಡಗಳು ಸಾಮಾಜಿಕವಾಗಿ, ಆರ್ಥಿಕವಾಗಿ ಹಾಗೂ ಶೈಕ್ಷಣಿಕವಾಗಿ ಸಬಲೀಕರಣಗೊಳ್ಳಲು ಸರ್ಕಾರವು ಪರಿಶಿಷ್ಟರಿಗೆ ಮೀಸಲಿಟ್ಟಿರುವ ಹಣವನ್ನು ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರದಲ್ಲಿ ಆಮೂಲಾಗ್ರವಾಗಿ ಬದಲಾವಣೆಗಳನ್ನು ತರಲು ಬಳಸಬೇಕಿದೆ. ಈ ಸಮಾಜದ ಮಕ್ಕಳಿಗೆ ವಿಶ್ವ ಗುಣಮಟ್ಟದ ಆಧುನಿಕ ಸರ್ಕಾರಿ ಶಿಕ್ಷಣ ವ್ಯವಸ್ಥೆಯನ್ನು ಕಲ್ಪಿಸುವಂತಹ ಯೋಜನೆಗಳು ಜಾರಿಯಾಗಬೇಕಿದೆ ಎಂದು ಸೋಲಾಪುರ ತಿಳಿಸಿದ್ದಾರೆ.
ಒಳ ಮೀಸಲಾತಿ ಕುರಿತು ಸಚಿವ ಸಂಪುಟ ನಿರ್ಧಾರ: ಆಮ್ ಆದ್ಮಿ ಪಾರ್ಟಿ ಸ್ವಾಗತ
