ಪ್ರಧಾನಮಂತ್ರಿ ಸುರಕ್ಷಿತ ಮಾತೃತ್ವ ಅಭಿಯಾನ ಸಮರ್ಪಕ ಅನುಷ್ಠಾನಕ್ಕೆ ಡಿಸಿ ಆನಂದ ಸೂಚನೆ

ಸಪ್ತ ಸಾಗರ ವಾರ್ತೆ ವಿಜಯಪುರ, ಆ. 22: ಆರೋಗ್ಯ ಸೌಕರ್ಯ ಮತ್ತು ವಿವಿಧ ಆರೋಗ್ಯ ಸೌಲಭ್ಯ ಒದಗಿಸಿ ಜಿಲ್ಲೆಯಲ್ಲಿ ಗರ್ಭಿಣಿ ಮಹಿಳೆಯರಿಗೆ ಆರೋಗ್ಯ ಸುರಕ್ಷತೆಗೆ ಅಗತ್ಯ ಆರೋಗ್ಯ ತಿಳುವಳಿಕೆ ಮೂಡಿಸಿ, ರಾಷ್ಟ್ರೀಯ ಆರೋಗ್ಯ ಅಭಿಯಾನ ಮತ್ತು ಪ್ರಧಾನಮಂತ್ರಿ ಸುರಕ್ಷಿತ ಮಾತೃತ್ವ ಅಭಿಯಾನ ಯೋಜನೆಯ ಸಮರ್ಪಕ ಅನುಷ್ಠಾನಗೊಳಿಸುವಂತೆ ಜಿಲ್ಲಾಧಿಕಾರಿ ಡಾ. ಆನಂದ.ಕೆ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರ ಸಂಜೆ ನಡೆದ ಜಿಲ್ಲಾ ಮಟ್ಟದ ಆರೋಗ್ಯ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಗರ್ಭಿಣಿ ಮಹಿಳೆಯರ ಆರೋಗ್ಯ ತಪಾಸಣೆ 12 ರಿಂದ 14 ಬಾರಿ ನಿಯಮಿತವಾಗಿ ಕೈಗೊಳ್ಳಬೇಕು. ಅನೀಮಿಯಾ, ಅಧಿಕ ರಕ್ತದೊತ್ತಡ, ಮಾನಸಿಕ ಆರೋಗ್ಯ ಮತ್ತು ವಿವಿಧ ಆರೋಗ್ಯ ಸಮಸ್ಯೆಗಳನ್ನು ಆರಂಭಿಕ ಹಂತದಲ್ಲಿ ಗುರುತಿಸಿ ಉಚಿತ ಆರೋಗ್ಯ ಚಿಕಿತ್ಸೆ ಒದಗಿಸಬೇಕು. ಜಿಲ್ಲೆಯಲ್ಲಿ ತಾಯಿ-ಮಕ್ಕಳ ಆರೋಗ್ಯ ರಕ್ಷಣೆಯಲ್ಲಿ ಆರ್.ಸಿ.ಹೆಚ್. ಪೋರ್ಟಲ್ ಮೂಲಕ ಗರ್ಭಿಣಿ ಮಹಿಳೆಯರಿಗೆ ಕಾಲ-ಕಾಲಕ್ಕೆ ಆರೋಗ್ಯದ ಕುರಿತಾಗಿ ತಿಳಿವಳಿಕೆ ನೀಡುವಂತೆ ಅವರು ಸೂಚನೆ ನೀಡಿದರು.
ಹೆರಿಗೆಯ ನಂತರ ಮಗುವಿಗೆ ಒಂದು ವರ್ಷ ತುಂಬುವವರೆಗೆ ಪಡೆದುಕೊಳ್ಳಬೇಕಾದ ಆರೋಗ್ಯ ಚಿಕಿತ್ಸೆ, ಔಷಧೋಪಚಾರ, ಲಸಿಕೆ ಸೌಲಭ್ಯಗಳ ಮಾಹಿತಿಯನ್ನು ಒದಗಿಸಬೇಕು. ಆರೋಗ್ಯ ಸೇವಾ ಸೌಲಭ್ಯಗಳ ಮಾಹಿತಿ ನೀಡಬೇಕು. ಗರ್ಭಿಣಿಯರ ಮಹಿಳೆಯರ ಅಗತ್ಯ ಮಾಹಿತಿಯನ್ನು ನಿಯಮಿತವಾಗಿ ನೋಂದಣಿ ಮಾಡಬೇಕು. ಆಶಾ ಕಾರ್ಯಕರ್ತೆಯರ ಮನೆ ಮನೆಗೆ ಭೇಟಿ ನೀಡಿ, ಸಕಾಲದಲ್ಲಿ ಆರೋಗ್ಯ ಸೇವೆ ನೀಡಬೇಕು. ನಿರ್ಲಕ್ಷ್ಯವಹಿಸಬಾರದು ಎಂದು ಸೂಚಿಸಿದರು.
ಗುಣಾತ್ಮಾಕ ಆರೋಗ್ಯ ಸೇವೆ, ಪ್ರಸವ ಪೂರ್ವ ಆರೈಕೆ, ಗಂಡಾಂತರ ಗರ್ಭಿಣಿ ಹೆರಿಗೆಗಳನ್ನು ಗುರುತಿಸಿ ಅವರಿಗೆ ಪ್ರಸೂತಿ ತಜ್ಞ ವೈದ್ಯರಿಂದ ಚಿಕಿತ್ಸೆ ಹಾಗೂ ಆಪ್ತ ಸಮಾಲೋಚನೆ ಮೂಲಕ ಶೇ.100ರಷ್ಟು ಹೆರಿಗೆಗಳನ್ನು ಆರೋಗ್ಯ ಸಂಸ್ಥೆಗಳಲ್ಲಿ ಮಾಡಲಾಗುತ್ತಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಸಂಪತ್ ಗುಣಾರಿ ಅವರು ಸಭೆಗೆ ಮಾಹಿತಿ ನೀಡಿದರು.
ಸುಸಜ್ಜಿತ ಸರಕಾರಿ ಆಸ್ಪತ್ರೆಗಳ ಹಾಗೂ ಅಲ್ಲಿ ನೀಡುವ ಗುಣಮಟ್ಟದ ಆರೋಗ್ಯ ಸೇವೆಗಳು, ಪ್ರಸವ ಪೂರ್ವ ಮತ್ತು ಪ್ರಸವೋತ್ತರ ಆರೈಕೆ ಮೂಲಕ ಜಿಲ್ಲೆಯಲ್ಲಿ ತಾಯಿ-ಶಿಶು ಮರಣ ಆಗದಂತೆ ಸಹಕಾರಿಯಾಗಿದೆಂದು ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿ ಪರಶುರಾಮ ಹಿಟ್ನಳ್ಳಿ ಅವರು ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಶಸ್ತ್ರಚಿಕಿತ್ಸಕ ಶಿವಾನಂದ ಮಾಸ್ತಿಹೊಳಿ, ಮಹಾನಗರ ಪಾಲಿಕೆಯ ಮುಖ್ಯ ವೈದ್ಯಾಧಿಕಾರಿ ಎಸ್.ಎಲ್ ಲಕ್ಕಣ್ಣವರ, ಎಲ್ಲ ತಾಲೂಕಾ ಆರೋಗ್ಯಾಧಿಕಾರಿಗಳು, ಮುಖ್ಯ ಆಡಳಿತ ವೈದ್ಯಾಧಿಕಾರಿಗಳು ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿ ಇದ್ದರು.

Share