ಸಪ್ತಸಾಗರ ವಾರ್ತೆ ವಿಜಯಪುರ, ಆ. 24:
ವಿಜಯಪುರ ಜಿಲ್ಲೆಗೆ ಸರ್ಕಾರಿ ವೈದ್ಯಕೀಯ ಕಾಲೇಜು ಸೂಕ್ತವಾಗುತ್ತದೆ. ಪಿಪಿಪಿ ಮಾದರಿ ಕಾಲೇಜ್ ಬೇಡ ಎಂದು ಶ್ರೀ ತುಳಸಿಗಿರೀಶ್ ಫೌಂಡೇಶನ್ ಅಧ್ಯಕ್ಷ ಡಾ. ಬಾಬುರಾಜೇಂದ್ರ ನಾಯಿಕ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಮುಂಗಾರು ಅಧಿವೇಶನದಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ ಅವರು ವಿಜಯಪುರ ಜಿಲ್ಲೆಗೆ ವೈದ್ಯಕೀಯ ಕಾಲೇಜನ್ನು ಖಾಸಗಿ ಮತ್ತು ಸಾರ್ವಜನಿಕ ಸಹಭಾಗಿತ್ವದಲ್ಲಿ ಸ್ಥಾಪನೆ ಮಾಡುವುದಾಗಿ ಘೋಷಣೆ ಮಾಡಿರುವುದು ದುರದೃಷ್ಟಕರ.
ಇಡೀ ರಾಜ್ಯದಲ್ಲಿ ಅಚ್ಚುಕಟ್ಟಾಗಿ ರೋಗಿಗಳ ಸೇವೆಗೆ ಹೆಸರುವಾಸಿಯಾಗಿರುವ ನಮ್ಮ ವಿಜಯಪುರದ ಸರ್ಕಾರಿ ಆಸ್ಪತ್ರೆಯಲ್ಲಿ ಖಾಸಗಿ ಸಹಭಾಗಿತ್ವವಾದರೆ ಇದರಿಂದ ಸಾರ್ವಜನಿಕರಿಗೆ ಅನುಕೂಲಕ್ಕಿಂತ ಅನಾನುಕೂಲಗಳೇ ಜಾಸ್ತಿ ಎಂಬುದನ್ನು ಸರ್ಕಾರ ಅರ್ಥ ಮಾಡಿಕೊಳ್ಳಬೇಕು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವೈದ್ಯಕೀಯ ಶಿಕ್ಷಣ ಎಂಬುದು ಜನರ ಆರೋಗ್ಯ ರಕ್ಷಣೆಗೆ ಇರುವಂತದ್ದು ಹೊರತು ಖಾಸಗಿಯವರ ಅಭಿವೃದ್ಧಿಗಾಗಿ ಅಲ್ಲ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಒಬ್ಬ ವೈದ್ಯನಾಗಿ ಪಿಪಿಪಿ ಮಾದರಿ ನಿರ್ಣಯದ ಘೋಷಣೆಯನ್ನು ನಾನು ಖಂಡಿಸುತ್ತೇನೆ. ವಿಜಯಪುರ ಜಿಲ್ಲೆಗೆ ಸಂಪೂರ್ಣ ಸರ್ಕಾರಿ ಸ್ವಾಮ್ಯದ ವೈದ್ಯಕೀಯ ಕಾಲೇಜು ನಿರ್ಮಾಣವಾದರೆ ವಿಜಯಪುರ ಜಿಲ್ಲೆಯ ಜನರ ಕನಸಿಗೆ ಬೆಲೆ ಕೊಟ್ಟಂತೆ ಆಗುತ್ತದೆ. ಸರ್ಕಾರ ಪಿಪಿಪಿ ಮಾದರಿ ವೈದ್ಯಕೀಯ ಕಾಲೇಜು ಕೈ ಬಿಡಬೇಕು. ಪೂರ್ಣ ಪ್ರಮಾಣದ ಸರ್ಕಾರಿ ಸ್ವಾಮ್ಯದ ವೈದ್ಯಕೀಯ ಕಾಲೇಜ್ ಸ್ಥಾಪನೆ ಮಾಡಲು ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಇದರ ವಿರುದ್ಧ ಹೋರಾಟಕ್ಕೆ ಸಿದ್ಧವಾಗಬೇಕಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
ವಿಜಯಪುರಕ್ಕೆ ಪಿಪಿಪಿ ಮಾದರಿ ಸರ್ಕಾರಿ ವೈದ್ಯಕೀಯ ಕಾಲೇಜ್ ಬೇಡ : ಡಾ. ಬಾಬುರಾಜೇಂದ್ರ ನಾಯಿಕ
