ಸಪ್ತಸಾಗರ ವಾರ್ತೆ,ವಿಜಯಪುರ,ಆ. ೨೪:
ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಡಿಯಲ್ಲಿ ಜಿಲ್ಲೆಯಲ್ಲಿರುವ ಸರ್ಕಾರಿ ವಸತಿ ನಿಲಯಗಳ ನಿರ್ವಹಣೆ, ಮೂಲಸೌಕರ್ಯಗಳ ಸುಧಾರಣೆ ಹಾಗೂ ಇತರೆ ಚಟುವಟಿಕೆಗಳ ಕಾರ್ಯಕ್ರಮಗಳಿಗಾಗಿ ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ಹಾಸ್ಟೆಲ್ ಮೆಂಟರ್ ಗಳನ್ನಾಗಿ ಜಿಲ್ಲಾಧಿಕಾರಿಗಳು ನೇಮಕ ಮಾಡಿದ್ದಾರೆ.
ಜಿಲ್ಲೆಯ ವಿನೂತನ ಅಭಿಯಾನ ಕಾರ್ಯಕ್ರಮಕ್ಕೆ ನೇಮಕವಾದ ಹಾಸ್ಟೆಲ್ ಮೆಂಟರ್ ಈಗಾಗಲೇ ಜಿಲ್ಲೆಯ ವಿವಿಧ ವಸತಿ ನಿಲಯಗಳಿಗೆ ಭೇಟಿ ನೀಡಿ, ವಿದ್ಯಾರ್ಥಿಗಳ ಶೈಕ್ಷಣಿಕ, ವೈಯಕ್ತಿಕ ಹಾಗೂ ಉಜ್ವಲ ಭವಿಷ್ಯದ ಬೆಳವಣಿಗೆಗಾಗಿ ಮಾರ್ಗದರ್ಶನ ನೀಡುವ ವಿನೂತನ ಕಾರ್ಯಕ್ರಮ ಆರಂಭಗೊಃಡು,ವಸತಿ ನಿಲಯದ ವಿದ್ಯಾರ್ಥಿಗಳ ಜೀವನದಲ್ಲಿ ಈ ವಿನೂತನ ಅಭಿಯಾನ ಹೊಸ ಆಶಾಕಿರಣ ಮೂಡಿಸಿದೆ. ಜಿಲ್ಲಾಧಿಕಾರಿಗಳು ರೂಪಿಸಿದ ಈ ವಿನೂತನ ಕಾರ್ಯಕ್ಕೆ ನಿಲಯದ ವಿದ್ಯಾರ್ಥಿಗಳ ಪೋಷಕರು ಹಾಗೂ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.
ಪ್ರತಿವಾರ ಕನಿಷ್ಠ ಒಂದು ಬಾರಿ ವಸತಿ ನಿಲಯಗಳಿಗೆ ಭೇಟಿ ನೀಡುವುದರೊಂದಿಗೆ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸುವ ಮೂಲಕ ಪರೀಕ್ಷಾ ಸಿದ್ಧತೆಗೆ ಮನೋಸ್ಥೈರ್ಯ ತುಂಬಿ,ಸತತ ಅಧ್ಯಯನಶೀಲರಾಗಿ ಭವಿಷ್ಯ ಸುಂದರಗೊಳಿಸಿಕೊಳ್ಳುವ ನಿಟ್ಟಿನಲ್ಲಿ ಅಧಿಕಾರಿಗಳು ವಿವಿಧ ವಿಷಯ, ವಿಭಾಗಗಳಲ್ಲಿ ಅವರು ಹೊಂದಿರುವ ಜ್ಞಾನ ತಮ್ಮ ದೈನಂದಿನ ವೃತ್ತಿ ಬದುಕಿನ ಅಪಾರ ಅನುಭವವನ್ನು ಭೇಟಿ ಸಂದರ್ಭದಲ್ಲಿ ಮಕ್ಕಳೊಂದಿಗೆ ಹಂಚಿಕೊಳ್ಳುವುದರಿಂದ ಮಕ್ಕಳು ಪ್ರೇರೆಣೆ ಹೊಂದಿ, ಸಾಧನೆಗೆ ಇದೊಂದು ಮೈಲುಗಲ್ಲು ಆಗಲಿದೆ ಎಂದು ಜಿಲ್ಲಾಧಿಕಾರಿ ಡಾ. ಆನಂದ ಕೆ ಅವರು ತಿಳಿಸಿದ್ದಾರೆ.
ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳನ್ನು ಗುರುತಿಸಿ, ಅವರಿಗೆ ಪರಿಹಾರ ಬೋಧನೆಗೆ ಹೆಚ್ಚುವರಿ ಕಲಿಕಾ ಸೌಲಭ್ಯ ಕಲ್ಪಿಸುವುದು. ವಿದ್ಯಾರ್ಥಿಗಳ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ವಸತಿ ನಿಲಯದಲ್ಲಿ ಪ್ರತಿ ತಿಂಗಳಿಗೊಮ್ಮೆ ಆರೋಗ್ಯ ಶಿಬಿರ ಏರ್ಪಡಿಸುವುದು, ಗುಣಮಟ್ಟದ ಆಹಾರ ಪೂರೈಕೆ, ಶುದ್ಧ ಕುಡಿಯುವ ನೀರು ಪೂರೈಸುವುದು, ನೀರು ಶುದ್ಧೀಕರಣ ವ್ಯವಸ್ಥೆ, ಲೈಬ್ರರಿ ಪಠ್ಯ ಸಾಮಗ್ರಿಗಳ ವ್ಯವಸ್ಥೆ ಬಗ್ಗೆ ಕ್ರಮ ವಹಿಸುವುದು, ಒಟ್ಟಾರೆ ನಿಲಯಗಳ ವಿದ್ಯಾರ್ಥಿಗಳ ಶೈಕ್ಷಣಿಕ ಗುಣಮಟ್ಟ ವೃದ್ಧಿಗೆ ಸೂಕ್ತ ಮಾರ್ಗದರ್ಶನ-ಪ್ರೋತ್ಸಾಹದೊಂದಿಗೆ ವಿನೂತನ ಕಾರ್ಯಕ್ರಮಗಳು-ಸೌಲಭ್ಯಗಳ ಮೇಲ್ವಿಚಾರಣೆ ವಹಿಸಲು ಈಗಾಗಲೇ ಸೂಚಿಸಿ ಆದೇಶಿಸಲಾಗಿದೆ.
ಅಧಿಕಾರಿಗಳು ಭೇಟಿ ನೀಡಿ, ಕೈಗೊಂಡಿರುವ ಕ್ರಮಗಳ ಕುರಿತು ವೈಯಕ್ತಿಕವಾಗಿ ಗಮನಹರಿಸಿ, ಈ ಕುರಿತು ವಿಡಿಯೋ ಚಿತ್ರೀಕರಣ ಮತ್ತು ಛಾಯಾಚಿತ್ರದೊಂದಿಗೆ ವರದಿಯನ್ನು ಕಡ್ಡಾಯವಾಗಿ ಸಲ್ಲಿಸುವಂತೆ ಜಿಲ್ಲಾಧಿಕಾರಿಗಳು ಕಟ್ಟುನಿಟ್ಟಾಗಿ ಸೂಚಿಸಿದ್ದಾರೆ.
ಹಾಸ್ಟೆಲ್ ಮೆಂಟರ್ ಗಳ ನೇಮಿಸಿ ಡಿಸಿ ಆದೇಶ
