ಗಣೇಶ ಮೂರ್ತಿ ವಿಸರ್ಜನೆ : ಪಾಲಿಕೆಯಿಂದ ವಾರ್ಡಗಳಲ್ಲಿ ಕೃತಕ ವಿಸರ್ಜನಾ ಹೊಂಡಗಳ ನಿರ್ಮಾಣ

ಸಪ್ತಸಾಗರ ವಾರ್ತೆ ವಿಜಯಪುರ, ಆ. 24: ಜಿಲ್ಲೆಯಲ್ಲಿ ಆಗಸ್ಟ್ ತಿಂಗಳಲ್ಲಿ ಆಚರಿಸಲಾಗುವ ಗಣೇಶ ಹಬ್ಬದ ಸಂದರ್ಭದಲ್ಲಿ ಗಣೇಶ ಮೂರ್ತಿಗಳ ವಿಸರ್ಜನೆಗಳಾಗಿ ಮಹಾನಗರ ಪಾಲಿಕೆ ವತಿಯಿಂದ ನಗರದ ವಿವಿಧ ವಾರ್ಡಗಳಲ್ಲಿ ಕೃತಕ ವಿಸರ್ಜನಾ ಹೊಂಡಗಳನ್ನು ಹಾಗೂ ಸಂಚಾರಿ ಗಣೇಶ ವಿಸರ್ಜನಾ ವಾಹನಗಳ ನಿಯೋಜನೆ ಮಾಡಲಾಗಿದ್ದು, ಸಾರ್ವಜನಿಕರು ಕೃತಕ ಹೊಂಡಗಳಲ್ಲಿ ಗಣೇಶ ಮೂರ್ತಿಗಳನ್ನು ವಿಸರ್ಜನೆ ಮಾಡುವ ಮೂಲಕ ಪರಿಸರ ಸ್ನೇಹಿ ಗಣೇಶ ಹಬ್ಬ ಆಚರಣೆ ಮಾಡಬೇಕು ಎಂದು ಮಹಾನಗರ ಪಾಲಿಕೆ ಆಯುಕ್ತರು ಮನವಿ ಮಾಡಿಕೊಂಡಿದ್ದಾರೆ.
ಗಣೇಶ ಹಬ್ಬದ ಸಂದರ್ಭದಲ್ಲಿ ಪ್ಲಾಸ್ಟರ್ ಆಪ್ ಪ್ಯಾರೀಸ್‌ನಿಂದ ತಯಾರಿಸಿದ ಅಥವಾ ರಸಾಯನಿಕ ಬಣ್ಣ ಲೇಪಿತ ವಿಗ್ರಹಗಳನ್ನು ನೀರಿನಲ್ಲಿ ವಿಸರ್ಜನೆ ಮಾಡಿದಾಗ ನೀರು ಕಲುಷಿತಗೊಂಡು ಹಲವಾರು ಮಾರಕ ರೋಗಗಳು ಹರಡುವುದರೊಂದಿಗೆ ಭವಿಷ್ಯದ ಪೀಳಿಗೆ ನಾಶಕ್ಕೆ ಕಾರಣವಾಗುತ್ತದೆ. ಈ ನಿಟ್ಟಿನಲ್ಲಿ ಸರ್ಕಾರವು ಈ ಪ್ಲಾಸ್ಟರ್ ಆಪ್ ಪ್ಯಾರೀಸ್‌ನಿಂದ ತಯಾರಿಸಿದ ಗಣಪತಿ ವಿಗ್ರಹಗಳನ್ನು ಜಲ ಮಾಲಿನ್ಯ (ತಡೆ ಮತ್ತು ನಿಯಂತ್ರಣ) ಕಾಯ್ದೆ ೧೯೭೪ ರ ಕಲಂ ೩೩(ಅ)ರಂತೆ ಯಾವುದೇ ಜಲಗಳಲ್ಲಿ, ನದಿ, ಕಾಲುವೆ, ಭಾವಿಗಳಲ್ಲಿ ವಿಸರ್ಜಿಸುವುದು ಸಂಪೂರ್ಣವಾಗಿ ನಿಷೇಧಿಸಿದೆ. ಆದ್ದರಿಂದ ವಿಜಯಪುರ ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿನ ಪ್ರತಿ ವರ್ಷದಂತೆ, ಈ ವರ್ಷವು ವಿವಿಧ ವಾರ್ಡಗಳಲ್ಲಿನ ಪರಿಸರ ಸ್ನೇಹಿ ಗಣೇಶ ಮೂರ್ತಿಗಳನ್ನು ವಿಸರ್ಜಿಸಲು, ಕೃತಕ ವಿಸರ್ಜನಾ ಹೊಂಡಗಳನ್ನು ನಿರ್ಮಿಸಲಾಗಿರುತ್ತದೆ ಹಾಗೂ ಸಂಚಾರಿ ಗಣೇಶ ವಿಸರ್ಜನಾ ವಾಹನಗಳನ್ನು ನಿಯೋಜಿಸಲಾಗಿದ್ದು ಸಾರ್ವಜನಿಕರು ಇದರ ಸದುಪಯೋಗವನ್ನು ಪಡೆದುಕೊಳ್ಳುವಂತೆ ಅವರು ಪ್ರಕಟಣೆಯಲ್ಲಿ ಕೋರಿದ್ದಾರೆ.

Share