ಸಪ್ತಸಾಗರ ವಾರ್ತೆ ವಿಜಯಪುರ,ಆ. 26:
ನಗರದಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ವೈದ್ಯಕೀಯ ಕಾಲೇಜು ಪಾಪನಿಗೆ ಸರ್ಕಾರ ನಿರ್ಧರಿಸಿರುವುದನ್ನು ಎಐಡಿಎಸ್ಓ ತೀವ್ರವಾಗಿ ಖಂಡಿಸುತ್ತದೆ.
ಕಳೆದ 15 ವರ್ಷಗಳಿಂದ AIDSO ವಿದ್ಯಾರ್ಥಿ ಸಂಘಟನೆ ವತಿಯಿಂದ ಜಿಲ್ಲೆಯಲ್ಲಿ ಸರ್ಕಾರಿ ಮೆಡಿಕಲ್ ಕಾಲೇಜು ಸ್ಥಾಪನೆಯಾಗಬೇಕೆಂದು ಹೋರಾಟ ನಡೆಸಿಕೊಂಡು ಬಂದಿದೆ., ಜನರ ಹೋರಾಟದ ಫಲವಾಗಿ ಇಂದು ಜಿಲ್ಲೆಯ ಸರ್ಕಾರಿ ಆಸ್ಪತ್ರೆಯ ಆವರಣದಲ್ಲಿ ಮೆಡಿಕಲ್ ಕಾಲೇಜು ಸ್ಥಾಪನೆ ಮಾಡಲು ಸರ್ಕಾರ ನಿರ್ಧರಿಸಿದ್ದು ಸ್ವಾಗತಾರ್ಹ. ಆದರೆ ಇದರಲ್ಲಿ ಖಾಸಗಿ ಸಹಭಾಗಿತ್ವ AIDSO ಸಂಘಟನೆಯು ಒಪ್ಪುವುದಿಲ್ಲ. ಈಗಾಗಲೇ ಜಿಲ್ಲೆಯಲ್ಲಿ ಖಾಸಗಿ ಮೆಡಿಕಲ್ ಕಾಲೇಜುಗಳಿದ್ದು, ಇದಕ್ಕೆ ಲಕ್ಷಾಂತರ ಶುಲ್ಕ ಕಟ್ಟಲು ಸಾಧ್ಯವಾಗದೇ ಸಾವಿರಾರು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ತಮ್ಮ ಕನಸನ್ನು ತೊರೆದಿದ್ದಾರೆ. ಶಿಕ್ಷಣ ಎನ್ನುವುದು ಕೆಲವೇ ಜನರ ಸ್ವತ್ತಾಗದೆ ಎಲ್ಲರ ಸ್ವತ್ತಾಗಬೇಕು. ಎಲ್ಲ ವರ್ಗದ ವಿದ್ಯಾರ್ಥಿಗಳಿಗೆ ಶಿಕ್ಷಣ ಸಿಗಬೇಕಾದರೆ, ಸರ್ಕಾರವೇ ಸಂಪೂರ್ಣ ಆರ್ಥಿಕ ಜವಾಬ್ದಾರಿ ತೆಗೆದುಕೊಳ್ಳಬೇಕು. ಆಗ ಮಾತ್ರ ಬಡವರು, ಕಾರ್ಮಿಕರ, ರೈತರ ಮಕ್ಕಳಿಗೆ ಶಿಕ್ಷಣ ಸಿಗುತ್ತದೆ ಎಂದು ಸಂಘಟನೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ವಿಜಯಪುರ ಜಿಲ್ಲೆಯು ನಿರಂತರವಾಗಿ ಬರಗಾಲಕ್ಕೆ ತುತ್ತಾಗುತ್ತಾ ಬಂದಿದ್ದು ಬಹುತೇಕ ಗ್ರಾಮೀಣ ಮತ್ತು ಬಡ ವಿದ್ಯಾರ್ಥಿಗಳು ಕಷ್ಟ ಪಟ್ಟು ಅಭ್ಯಾಸ ಮಾಡಿ ಮುಂದೆ ಬರಬೇಕೆಂದರೆ ಉನ್ನತ ಶಿಕ್ಷಣ ಪಡೆಯಲು ಇಡೀ ಜಿಲ್ಲೆಯಲ್ಲಿ ಒಂದೇ ಒಂದು ಸರಕಾರಿ ವೈದ್ಯಕೀಯ ಕಾಲೇಜು ಇಲ್ಲ. ಖಾಸಗಿ ಕಾಲೇಜುಗಳಲ್ಲಿ ಡೋನೆಶನ್ ಕೊಟ್ಟು ಕಲಿಯುವದಂತೂ ನಮ್ಮ ಜಿಲ್ಲೆಯ ಬಡ ಜನಗಳಿಗೆ, ರೈತ ಮತ್ತು ಕೂಲಿಕಾರ್ಮಿಕರ ಮಕ್ಕಳಿಗೆ ಖಂಡಿತ ಸಾಧ್ಯವಿಲ್ಲ. ಆದ್ದರಿಂದ ಸರಕಾರವು ವಿಶೇಷ ಮುತುವರ್ಜಿವಹಿಸಿ ವಿಜಯಪುರ ಜಿಲ್ಲೆಗೆ ಒಂದು ಸರ್ಕಾರಿ ಮೆಡಿಕಲ್ ಕಾಲೇಜು ಸ್ಥಾಪನೆ ಮಾಡಬೇಕೆಂದು ಒತ್ತಾಯಿಸುತ್ತದೆ ಎಂದು ಸಂಘಟನೆ ತಿಳಿಸಿದೆ.
ವಿಜಯಪುರದಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಎಐಡಿಎಸ್ಒ ವಿರೋಧ
