ಸಪ್ತಸಾಗರ ವಾರ್ತೆ, ವಿಜಯಪುರ,ಆ. 28:
ಜಿಲ್ಲೆಗೆ ಖಾಸಗಿ ಸಹಭಾಗಿತ್ವದಲ್ಲಿ ಆರಂಭಗೊಳ್ಳಲಿರುವ ವೈದ್ಯಕೀಯ ಮಹಾ ವಿದ್ಯಾಲಯಕ್ಕೆ ತೀವ್ರ ವಿರೋಧ ವ್ಯಕ್ತವಾಗಿದ್ದು, ಗುರುವಾರ ನಗರದ ಅಂಬೇಡ್ಕರ್ ಭವನದಲ್ಲಿ ಜಿಲ್ಲೆಯ ಸಾಹಿತಿಗಳು, ಚಿಂತಕರು, ದಲಿತ ಮತ್ತು ಕನ್ನಡಪರ ಹೋರಾಟಗಾರರು, ಕಾರ್ಮಿಕ, ವಿದ್ಯಾರ್ಥಿ ಯುವಜನ ಮಹಿಳಾ ಸಂಘಟನೆಯ ಮುಖಂಡರುಗಳು ಸಭೆ ಸೇರಿ ಖಾಸಗಿ ಸಹಭಾಗಿತ್ವವನ್ನು ವಿರೋಧಿಸಬೇಕು ಇದರ ವಿರುದ್ದ ಹೋರಾಟ ಮಾಡಬೇಕು ಎಂದು ಒಮ್ಮತದಿಂದ ನಿರ್ಧರಿಸಲಾಯಿತು.
ಇದೇ ಸಂದರ್ಭದಲ್ಲಿ ಜಿಲ್ಲೆಯ ವಿವಿಧ ಸಂಘಟನೆಗಳನ್ನೊಳಗೊಂಡ ‘ಸರಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಗಾಗಿ ಹೋರಾಟ ಸಮಿತಿ, ವಿಜಯಪುರ’ ಸಮಿತಿಯನ್ನು ರಚಿಸಲಾಯಿತು. ಈ ಸಮಿತಿಯ ನೇತೃತ್ವದಲ್ಲಿ ನಿರಂತರ ಹೋರಾಟ ಮಾಡುವುದಾಗಿ ಸಭೆಯಲ್ಲಿ ನಿರ್ಧರಿಸಲಾಯಿತು.
ನಂತರ ಜಿಲ್ಲಾಧಿಕಾರಿಗಳ ಕಛೇರಿ ಎದುರು ಜಮಾಯಿಸಿದ ಹೋರಾಟಗಾರರು ವಿಜಯಪುರ ಜಿಲ್ಲೆಗೆ ಪಿಪಿಪಿ ಮಾದರಿ ಸರಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆ ಬೇಡ. ಸಂಪೂರ್ಣವಾಗಿ ಸರ್ಕಾರಿ ಸ್ವಾಮ್ಯದ ವೈದ್ಯಕೀಯ ಕಾಲೇಜು ಸ್ಥಾಪಿಸಬೇಕು. ಸರ್ಕಾರ ಈಗಾಗಲೇ ಘೋಷಿಸಿದ ಪಿಪಿಪಿ ಮಾದರಿ ವೈದ್ಯಕೀಯ ಕಾಲೇಜು ಸ್ಥಾಪನೆ ಮಾಡುವುದನ್ನು ಕೈ ಬಿಡಬೇಕು ಎಂದು ಪ್ರತಿಭಟನೆಕಾರರು ಒತ್ತಾಯಿಸಿದರು.
ಈ ಕುರಿತು ಅಪರ ಜಿಲಾಧಿಕಾರಿ ಸೋಮಲಿಂಗ ಗೆಣ್ಣೂರು ಅವರ ಮೂಲಕ ರಾಜ್ಯಪಾಲರು ಹಾಗೂ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ಈ ಪ್ರತಿಭಟನೆಯಲ್ಲಿ ಹಿರಿಯ ಪತ್ರಕರ್ತ ಅನಿಲ ಹೊಸಮನಿ, ರೈತ ಮುಖಂಡ ಅರವಿಂದ ಕುಲಕರ್ಣಿ, ಬಿ.ಭಗವಾನರೆಡ್ಡಿ, ಮಲ್ಲಿಕಾರ್ಜುನ ಕೆಂಗನಾಳ, ಸಂಗಮೇಶ ಸಗರ, ದಲಿತ ವಿದ್ಯಾರ್ಥಿ ಪರಿಷತ್ನ ಶ್ರೀನಾಥ ಪೂಜಾರಿ, ಅಕ್ಷಯ ಅಜಮನಿ, ಕರ್ನಾಟಕ ರಕ್ಷಣಾ ವೇದಿಕೆಯ ಜಗದೀಶ ಸೂರ್ಯವಂಶಿ, ಮಲ್ಲಿಕಾರ್ಜುನ ಬಟಗಿ, ಮಹಿಳಾ ಸಂಘಟನೆಯ ಮುಖಂಡರಾದ ಗೀತಾ ಹೆಚ್. ಸುನಿತಾ ಮೋರೆ, ಡಾ. ನಾಸೀರ, ಅನೌಪಚಾರಿಕ ಶಿಕ್ಷಣ ಸಂಸ್ಥೆಯ ಫಾದರ್ ಕೆವಿನ್, ನಿವೃತ್ತ ಉಪನ್ಯಾಸಕ ಲಲಿತಾ ಬಿಜ್ಜರಗಿ, ವಕೀಲರಾದ ಎಮ್.ಎ. ಬಗಲಿ ಮಾತನಾಡಿ, ಸರಕಾರಿ ವೈದ್ಯಕೀಯ ಕಾಲೇಜು ಆರಂಭಿಸಬೇಕು ಮತ್ತು ಉದ್ದೇಶಿತ ಖಾಸಗಿ ಸಹಭಾಗಿತ್ವವನ್ನು ತೀವ್ರವಾಗಿ ಖಂಡಿಸಿದರು. ಜಿಲ್ಲೆಯ ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದಾಗಿ ಈ ಸ್ಥಿತಿ ಬಂದಿದೆ ಎಂದರು.
ಪ್ರತಿಭಟನೆಯಲ್ಲಿ ಶಿವಬಾಳಮ್ಮ ಕೊಂಡಗೂಳಿ, ಮಹಾದೇವಿ ಧರ್ಮಶೆಟ್ಟಿ, ಸಿ.ಬಿ.ಪಾಟೀಲ, ಬಾಬುರಾವ್ ಬೀರಕಬ್ಬಿ, ಮಲ್ಲಿಕಾರ್ಜುನ ಬಟಗಿ, ಮೀನಾಕ್ಷಿ, ಸಿದ್ದರಾಮ ಹಿರೇಮಠ, ಶ್ರೀಕಾಂತ ಕೊಂಡಗೂಳಿ, ಸಿದ್ದಲಿಂಗ ಬಾಗೇವಾಡಿ ಮುಂತಾದವರು ಉಪಸ್ಥಿತರಿದ್ದರು.
ಖಾಸಗಿ ಸಹಭಾಗಿತ್ವದ ವೈದ್ಯಕೀಯ ಕಾಲೇಜು ವಿರೋಧಿಸಿ ಹೋರಾಟ ಸಮಿತಿ ಅಸ್ತಿತ್ವಕ್ಕೆ


