ಶ್ರೀ ಕ್ಷೇತ್ರ ಧರ್ಮಸ್ಥಳ ವಿವಾದ: ಸಿಎಂ ಕ್ಷಮೆಯಾಚನೆಗೆ ಆಗ್ರಹ

ಸಪ್ತ ಸಾಗರ ವಾರ್ತೆ ವಿಜಯಪುರ, ಆ. 29:
ಶ್ರೀ ಕ್ಷೇತ್ರ ಧರ್ಮಸ್ಥಳದ ಘನತೆ ಗೌರವಕ್ಕೆ ಮಸಿ ಬಳಿಯುವ ಮೂಲಕ ಹಿಂದೂ ಸಮಾಜಕ್ಕೆ ಅವಮಾನ ಮಾಡುವ ಕಿಡಿಗೇಡಿಗಳ ಷಡ್ಯಂತ್ರವನ್ನು ತಡೆಗಟ್ಟುವಲ್ಲಿ ರಾಜ್ಯ ಸರ್ಕಾರ ವಿಫಲವಾದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಹಾಗೂ ಗೃಹ ಸಚಿವರು ಸಾರ್ವಜನಿಕರ ಕ್ಷಮೆಯಾಚಿಸಬೇಕು ಎಂದು ಬಿಜೆಪಿ ನಗರ ಅಧ್ಯಕ್ಷ ಸಂದೀಪ ಪಾಟೀಲ ಒತ್ತಾಯಿಸಿದ್ದಾರೆ.
ಶ್ರೀ ಕ್ಷೇತ್ರ ಧರ್ಮಸ್ಥಳವು ಕೇವಲ ಕರ್ನಾಟಕವಲ್ಲದೇ ದೇಶಾದ್ಯಂತ ಕೋಟ್ಯಂತರ ಭಕ್ತಾಧಿಗಳನ್ನು ಹೊಂದಿರುತ್ತದೆ. ಈ ಕ್ಷೇತ್ರಕ್ಕೆ ದಿನನಿತ್ಯ ಲಕ್ಷಾಂತರ ಮಂದಿ ಭಕ್ತಾಧಿಗಳು ಆಗಮಿಸುತ್ತಾರೆ. ಹಿಂದೂಗಳಿಗೆ ಇದು ಪ್ರಮುಖ ಧಾರ್ಮಿಕ ಶ್ರದ್ಧೆಯ ಕೇಂದ್ರವಾಗಿರುತ್ತದೆ. ಹಿಂದೂಗಳ ಧಾರ್ಮಿಕ ಭಾವನೆಯನ್ನು ಅಪಮಾನಿಸುವ ದುರುದ್ದೇಶದಿಂದ ಕೆಲವು ಕಿಡಿಗೇಡಿಗಳು ಸುಳ್ಳು ಅಪಪ್ರಚಾರವನ್ನು ಮಾಡುತ್ತಿದ್ದಾರೆ. ಇದರ ಹಿಂದೆ ಹಿಂದೂಗಳ ಶ್ರದ್ಧಾ ಭಕ್ತಿಯನ್ನು ಅತ್ಯಂತ ನಿಕೃಷ್ಟವಾಗಿ ಬಿಂಬಿಸುವ ಹುನ್ನಾರವಿದೆ. ಇಂತಹ ಕಿಡಿಗೇಡಿಗಳಿಗೆ ಕುಮ್ಮಕ್ಕು ನೀಡುವ ಷಡ್ಯಂತ್ರ್ಯವು ನಡೆದಿದೆ ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಭಾರತದ ನ್ಯಾಯ ಸಂಹಿತೆ ಅಡಿಯಲ್ಲಿ ಅನಾಮಿಕ ವ್ಯಕ್ತಿಯೊಬ್ಬ ಯಾವುದೇ ಆಧಾರಗಳಿಲ್ಲದೇ ಮಾಡಿದ ಆರೋಪಕ್ಕೆ ರಾಜ್ಯ ಸರ್ಕಾರವು ಲಕ್ಷಾಂತರ ರೂಪಾಯಿಗಳನ್ನು ವ್ಯಯಿಸಿ ಆತ ಹೇಳಿದ ಕಡೆಗಳಲ್ಲೆಲ್ಲಾ ಗುಂಡಿಗಳನ್ನು ತೋಡಿದೆ. ಆದರೆ, ಈ ಅನಾಮಿಕನ ಹಿಂದಿರುವ ದುಷ್ಕೃತ್ಯಗಳು ಯಾರು? ಮತ್ತು ಅವರು ಮಾಡುತ್ತಿರುವ ಸಂಚುಗಳೇನು ಎಂಬುದನ್ನು ಈವರೆಗೂ ರಾಜ್ಯದ ಜನತೆಗೆ ಕಾಂಗ್ರೆಸ್ ಸರ್ಕಾರ ತಿಳಿಸಿರುವುದಿಲ್ಲ. ಆದುದರಿಂದ ಹಿಂದುಗಳ ಧಾರ್ಮಿಕ ಶ್ರದ್ಧಾ ಕೇಂದ್ರಗಳನ್ನು ಅವಮಾನಿಸುತ್ತಿರುವ ಸಮಾಜ ವಿರೋಧಿ ವ್ಯಕ್ತಿಗಳನ್ನು ಪತ್ತೆ ಹಚ್ಚಿ ಅವರನ್ನು ಶಿಕ್ಷೆಗೆ ಗುರಿಪಡಿಸಬೇಕು. ಕರ್ನಾಟಕದ ಕಾಂಗ್ರೆಸ್ ಸರ್ಕಾರ ಹಿಂದೂಗಳ ಭಕ್ತಿ ಭಾವನೆಗಳಿಗೆ ಧಕ್ಕೆತರುವ ಹುನ್ನಾರವನ್ನು ನಿರಂತರವಾಗಿ ಮಾಡುತ್ತಾ ಬಂದಿದೆ. ಇಂತಹ ದುಷ್ಕೃತ್ಯವನ್ನು ತಡೆಯುವಲ್ಲಿ ವಿಫಲವಾಗಿರುವ ಮುಖ್ಯಮಂತ್ರಿ ಹಾಗೂ ಗೃಹಮಂತ್ರಿಗಳು ರಾಜ್ಯದ ಜನತೆಯ ಕ್ಷಮೆಯಾಚನೆ ಮಾಡಬೇಕೆಂದು ಆಗ್ರಹಿಸಿದ್ದಾರೆ.

Share