ಸಪ್ತಸಾಗರ ವಾರ್ತೆ ವಿಜಯಪುರ,ಆ. 30:
ನಗರ ಕೇಂದ್ರ ಗ್ರಂಥಾಲಯಕ್ಕೆ ತ್ವರಿತ ಗತಿಯಲ್ಲಿ ಪಠ್ಯಪುಸ್ತಕಗಳನ್ನು ಒದಗಿಸಬೇಕು ಎಂದು ಕರ್ನಾಟಕ ನವ ನಿರ್ಮಾಣ ವೇದಿಕೆ ಘಟಕ ಹಾಗೂ ವಿಜಯಪುರ ಜಿಲ್ಲಾ ಘಟಕ ಇವುಗಳ ಸಂಯುಕ್ತ ಆಶ್ರಯದಲ್ಲಿ ಜಿಲ್ಲಾಧಿಕಾರಿಗಳಿಗೆ ಶನಿವಾರ ಮನವಿ ಸಲ್ಲಿಸಲಾಯಿತು.
ವೇದಿಕೆಯ ರಾಜ್ಯಾಧ್ಯಕ್ಷ ಶೇಷರಾವ ಮಾನೆ ಅವರ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕೆ. ಆನಂದ ಅವರಿಗೆ ಮನವಿ ಸಲ್ಲಿಸಲಾಯಿತು.
ಗೌರವ ಅಧ್ಯಕ್ಷ, ನ್ಯಾಯವಾದಿ ಎಂ.ಎಂ. ಖಲಾಸಿ ಮಾತನಾಡಿ, ಪ್ರಸಕ್ತ ಸಾಲಿಗಾಗಿ ಕರ್ನಾಟಕ ಸರಕಾರವು ಪುಸ್ತಕ ಖರೀದಿಗಾಗಿ ಬಿಡುಗಡೆ ಮಾಡಿದ ಅನುದಾನ ಸದ್ಭಳಕೆಯಾಗದೆ ಜಿಲ್ಲೆಯ ಸಮಸ್ತ ಓದುಗ ಸಮುದಾಯಕ್ಕೆ ಹಾಗೂ ವಿದ್ಯಾರ್ಥಿಗಳಿಗೆ ಪುಸ್ತಕಗಳು ಹಾಗೂ ಸೌಲಭ್ಯಗಳಿಂದ ವಂಚಿತರಾಗಿರುವುದನ್ನು ಖಂಡಿಸಿದರಲ್ಲದೆ ಜಿಲ್ಲಾಧಿಕಾರಿಗಳು ಸಂಬಂಧಪಟ್ಟ ಅಧಿಕಾರಿಗಳ ಮೇಲೆ ವಿಚಾರಗೆ ಒಳಪಡಿಸಿ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಆಗ್ರಹಿಸಿದರು.
ರಾಜ್ಯಾಧ್ಯಕ್ಷ ಶೇಷರಾವ ಮಾನೆ ಮಾತನಾಡಿ, ಈ ಮೊದಲು ಕೇಂದ್ರ ಗ್ರಂಥಾಲಯದಲ್ಲಿ ಸುಮಾರು ೪೦ ಲಕ್ಷಗಳ ಬೆಲೆಬಾಳುವ ಪುಸ್ತಕಗಳು ಸಂಬಂಧಪಟ್ಟ ಅಧಿಕಾರಿಗಳ ನಿರ್ಲಕ್ಷತನದಿಂದ ಹಾಳಗಿದ್ದನ್ನು ಸ್ಮರಿಸಿ ಇಂದು ಮತ್ತೆ ಅದೆ ವಾಡಿಕೆಯನ್ನು ಮುಂದುವರೆಸಿಕೊಂಡು ಬಂದಿದ್ದನ್ನು ಖಂಡಿಸಿ ಸಮರ್ಪಕವಾದ ಪಠ್ಯಪುಸ್ತಕಗಳು ತ್ವರಿತಗತಿಯಲ್ಲಿ ಜಿಲ್ಲಾಡಳಿತವು ಸಮಸ್ತ ಜಿಲ್ಲೆಯ ಸರಕಾರಿ ಹಾಗೂ ಅರೇ ಸರಕಾರಿ ಇಲಾಖೆಗಳು ನಿರ್ಮಿಸಿದ ಖಾಸಗಿ ಗ್ರಂಥಾಲಯಗಳಿಗೂ ತಾರತಮ್ಯ ಎಸಗದೆ ಶಾಲಾ ಕಾಲೇಜು ವಿದ್ಯಾರ್ಥಿಗಳ ಪಠ್ಯಪುಸ್ತಕಗಳು ಗ್ರಂಥಾಲಯಗಳಿಗೆ ಬಿಡುಗಡೆ ಮಾಡಬೇಕು. ಓದುಗ ಸಮುದಾಯಕ್ಕೆ ಗಾಳಿ, ಬೆಳಕು, ನೀರು ಕುಳಿತುಕೊಳ್ಳಲು ಆಸನಗಳು ಶೌಚಾಲಯ ಮುಂತಾದ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಬೇಕೆಂದು ಮನವಿ ಮಾಡಿದರು.
ಪ್ರತಿಭಟನೆಯಲ್ಲಿ ಉಪಾಧ್ಯಕ್ಷ ಎಂ. ವಾಲಿಕಾರ, ಪ್ರಧಾನ ಕಾರ್ಯದರ್ಶಿ ಕೆ.ಕೆ. ಬನ್ನಟ್ಟಿ, ಗುರುರಾಜ ಪಂಚಾಳ, ಪ್ರಕಾಶ ನಡುವಿನಕೇರಿ, ಎನ್.ಐ. ಪಟೇಲ ಮುಂತಾದವರು ಉಪಸ್ಥಿತರಿದ್ದರು.
ಜಿಲ್ಲಾ ಗ್ರಂಥಾಲಯಗಳಿಗೆ ಪಠ್ಯಪುಸ್ತಕ ಒದಗಿಸಲು ಮನವಿ
