ರೈತರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ತಹಸೀಲ್ದಾರರಿಗೆ ಮನವಿ

ಸಪ್ತಸಾಗರ ವಾರ್ತೆ, ಚಡಚಣ, ಸೆ. 1 : ತಾಲೂಕಿನಲ್ಲಿ ರೈತರಿಗೆ ಸರಿಯಾಗಿ ರಸ ಗೊಬ್ಬರ ಸಿಗದೇ ಸಂಕಷ್ಟದಲ್ಲಿದ್ದಾರೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ತಹಸೀಲ್ದಾರ್ ಎಸ್. ಬಿ. ಇಂಗಳೆ ಅವರಿಗೆ ಮನವಿ ಸಲ್ಲಿಸಿದರು.
ಜಿಲ್ಲಾಧ್ಯಕ್ಷ ಸಂಗಮೇಶ ಸಗರ ಮನವಿ ಸಲ್ಲಿಸಿ ಮಾತನಾಡಿ, ತಾಲೂಕಿನಲ್ಲಿ ಕಾಳ ಸಂತೆಯಲ್ಲಿ ಗೊಬ್ಬರವನ್ನು ಹೆಚ್ಚಿನ ದರಕ್ಕೆ ಮಾರಾಟ ಮಾಡಿಕೊಳ್ಳುತ್ತಿದ್ದಾರೆ. ಜೊತೆಗೆ ಲಿಂಕ್ ಗೊಬ್ಬರ ಕಡ್ಡಾಯವಾಗಿ ತೆಗೆದುಕೊಳ್ಳಬೇಕು ಎಂದು ರೈತರಿಂದ 1500 ರೂ ರಿಂದ 2000 ರೂ ವರೆಗೆ ಕೇಳುತ್ತಿದ್ದಾರೆ. ಹೆಚ್ಚಿಗೆ ಕೇಳಿದರೆ ಗೊಬ್ಬರ ಇಲ್ಲ ಎಂದು ಮರಳಿ ಕಳಿಸುತ್ತಿದ್ದಾರೆ ಎಂದರು.
ಈ ವರ್ಷದಲ್ಲಿ ಎಷ್ಟು ಗೊಬ್ಬರ ಬಂದಿದೆ. ಯಾವ ಅಂಗಡಿಯವರಿಗೆ ಕೊಟ್ಟಿದ್ದೀರಿ. ಅಂಗಡಿಯ ಮುಂಭಾಗದಲ್ಲಿ ದರ ಹಾಗೂ ಸ್ಟಾಕ್ ಲಿಸ್ಟ್ ಕಡ್ಡಾಯವಾಗಿ ಹಾಕಬೇಕು. ಜೊತೆಗೆ ಕಳಪೆ ಮಟ್ಟದ ಗೊಬ್ಬರ ಹಾಗೂ ಕೀಟನಾಶಕ ನೆರೆಯ ಮಹಾರಾಷ್ಟ್ರದಿಂದ ಮಾರಾಟ ಮಾಡಲಾಗುತ್ತಿದೆ. ಇದು ಅಲ್ಲದೆ ಉಪ್ಪಿನ ಜೊತೆ ಬಣ್ಣ ಮಿಕ್ಸ್ ಮಾಡಿ ಗೊಬ್ಬರವೆಂದು 2000 ರೂ. ಕ್ಕೆ ಮಾರಾಟ ಮಾಡಲಾಗುತ್ತಿದೆ ಎಂದು ರೈತರು ಹೇಳುತ್ತಿದ್ದಾರೆ. ಕೂಡಲೇ ಅಂತವರ ಮೇಲೆ ಸೂಕ್ತ ಕಾನೂನು ಕ್ರಮ ಕೈಕೊಳ್ಳಬೇಕು ಎಂದು ಆಗ್ರಹಿಸಿದರು.
ಈ ವೇಳೆ ಮುಖಂಡರಾದ ಮಹದೇವ ಬನಸೋಡೆ ಹಾಗೂ ವಸಂತ ಬೈರಾಮಡಿ ಮಾತನಾಡಿ, ಕಳೆದ 4-5 ವರ್ಷಗಳಲ್ಲಿ ಈ ಭಾಗದ ರೈತರು ವಿಮೆ ತುಂಬಿ ಸಾಕಷ್ಟು ಪ್ರಮಾಣದಲ್ಲಿ ಬೆಳೆ ನಷ್ಟಗೊಂಡರೂ ಪರಿಹಾರ ಬಂದಿಲ್ಲ ಹಾಗೂ ಈ ಸಲ ಅತೀ ಹೆಚ್ಚು ಮಳೆ ಆಗಿರುವುದರಿಂದ ರಾಜ್ಯ ಮತ್ತು ಕೇಂದ್ರ ವಿಪತ್ತು ನಿರ್ವಹಣಾ ಅಡಿಯಲ್ಲಿ ಪರಿಹಾರ ನೀಡಬೇಕು ಎಂದರು.
ಹಿರಿಯರಾದ ಮುರುಗೇಂದ್ರ ಶಿಂಪಿ ಅವರು ಮಾತನಾಡಿ, ತಾಲೂಕಿನಲ್ಲಿ ರೈತರ ಜಮೀನಿನಲ್ಲಿಯ ಮೋಟರಗಳನ್ನು ಕಳವು ಮಾಡುತ್ತಿರುವ ಖದೀಮರನ್ನು ಹಿಡಿದು ತಕ್ಕ ಶಿಕ್ಷೆ ಕೊಡಬೇಕು. ಸಾಕಷ್ಟು ಪ್ರಕರಣಗಳು ಬೆಳಕಿಗೆ ಬಂದರೂ ಇಲಾಖೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದರು.
ಈ ಮೇಲಿನ ಎಲ್ಲಾ ಬೇಡಿಕೆಗಳನ್ನು ಶೀಘ್ರದಲ್ಲಿ ಈಡೇರಿಸದಿದ್ದರೆ ಚಡಚಣ ತಾಲೂಕು ಬಂದ್ ಮಾಡಿ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ತಹಸೀಲ್ದಾರ್ ಎಸ್. ಬಿ. ಇಂಗಳೆ, ಪಿ. ಎಸ್. ಐ. ಪ್ರವೀಣಕುಮಾರ ಹಾಗೂ ಕೃಷಿ ಅಧಿಕಾರಿ ಇದ್ದರು
ಈ ವೇಳೆ ಮುರುಗೇಶ ಸಿಂಪಿ, ವಸಂತ ಬೈರಾಮಡಿ, ಮಹಾದೇವ ಬನಸೋಡೆ ,
ಪ್ರಕಾಶ ಭತಗುಣಕಿ, ಸೋಮಶೇಖರ ಬಡಿಗೇರ, ಶಕೀಲ್ ಕಾಟಿಕ್, ಮಹಾದೇವ ಸಿಂಧೆ, ರಮೇಶ ಬತಗುಣಕಿ, ಸಾಯಿನಾಥ ಬನಸೂಡೆ, ಉಜ್ವಲ ಡೊಳ್ಳಿ, ಪ್ರಭಾಕರ್ ನಿರಾಳೆ, ಅಂಬರೀಶ ಬೈರಗೊಂಡ, ರಮೇಶ ನಾವಿ, ಸೈದು ಕೊಡವನ, ಮುರ್ತುಜ ನದಾಫ, ಮಾಳಪ್ಪ ನಾವಿ, ದ್ಯಾಮಗೊಂಡ ಕಾಂಬಳೆ, ಆಂಜನೇಯ ಜಡಪೇಕರ,
ರಾಮಣ್ಣ ತೇಲಿ, ತಿಪ್ಪಣ್ಣ ವಾಗ್ಮೊರೆ,
ದಯಾನಂದ ಶಿಂಧೆ ಸೇರಿದಂತೆ ನೂರಾರು ರೈತರು ಉಪಸ್ಥಿತರಿದ್ದರು.

Share