ಸಪ್ತಸಾಗರ ವಾರ್ತೆ ವಿಜಯಪುರ, ಸೆ. 4: ಮಹಿಳೆಯರ ಮತ್ತು ಮಕ್ಕಳ ಮೇಲಿನ ದೌರ್ಜನ್ಯಗಳಿಗೆ ಕೊನೆಹಾಕಿ ಸೂಕ್ತ ಭದ್ರತೆ ಒದಗಿಸಲು ಆಗ್ರಹಿಸಿ ಮಹಿಳಾ ಸಾಂಸ್ಕೃತಿಕ ಸಂಘಟನೆ ಪ್ರತಿಭಟನೆ ನಡೆಸಿತು.
ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆಯು ವಿಜಯಪುರದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಅಖಿಲ ಭಾರತ ಸಾಂಸ್ಕೃತಿಕ ಸಂಘಟನೆ ಸಮಿತಿಯ ಕರೆಯ ಮೇರೆಗೆ ಜಿಲ್ಲಾಧಿಕಾರಿಗಳ ಕಚೇರಿ ಎದುರು ಸಾಂಕೇತಿಕ ಪ್ರತಿಭಟನೆ ನಡೆಸಿ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ ಸಂಘಟನೆಯು ದೇಶದಾದ್ಯಂತ ಮಹಿಳೆಯರ ಹಕ್ಕುಗಳಿಗಾಗಿ, ಮಹಿಳೆಯರ ಘನತೆಯ ಬದುಕಿಗಾಗಿ ಶ್ರಮಿಸುತ್ತಿದೆ. ವಿಜಯಪುರ ಜಿಲ್ಲೆಯಲ್ಲಿ ಬಾಲಗರ್ಭಿಣಿಯರ ಸಂಖ್ಯೆ ಹೆಚ್ಚಾಗಿದೆ ಎಂದು ವರದಿಯಾಗಿದೆ, ಅದೇ ರೀತಿ ಇತ್ತೀಚೆಗೆ ೫ ವರ್ಷದ ಹೆಣ್ಣು ಮಗುವಿನ ಮೇಲೆ ತಂದೆಯಿಂದಲೇ ಲೈಂಗಿಕ ದೌರ್ಜನ್ಯ ನಡೆದಿದ್ದು ಇಡೀ ಜಿಲ್ಲೆಯ ಜನತೆ ತಲೆತಗ್ಗಿಸುವಂತಾಗಿದೆ. ಹಳೆಯ ಉಳಿಗಮಾನ್ಯ ವ್ಯವಸ್ಥೆಯ ಪುರುಷ ಪ್ರಧಾನ ಮೌಲ್ಯಗಳ ಜೊತೆಗೆ ಇಂದಿನ ಹೆಣ್ಣು ಬೋಗದ ವಸ್ತು ಎಂಬಂತೆ ಬಿತ್ತರಿಸುವ ಅಶ್ಲೀಲ ಸಿನಿಮಾ ಸಾಹಿತ್ಯ, ಜಾಹೀರಾತುಗಳು, ಪೋನ್, ವೆಬ್‌ಸೈಟ್‌ಗಳು, ಮದ್ಯ ಮಾದಕ ವಸ್ತುಗಳು ಯುವಜನತೆಯನ್ನು ದಾರಿ ತಪ್ಪಿಸುತ್ತಿವೆ. ಸಮಾಜದಲ್ಲಿ ಅಪರಾಧಗಳು ಹೆಚ್ಚುವಂತೆ ಪ್ರೇರಿಪಿಸುವಂತಾಗಿದೆ. ಸಾಮಾಜಿಕ ವಾತಾವರಣದಲ್ಲಿ ಮೌಲ್ಯಗಳು ಕುಸಿಯುತ್ತಿವೆ.
ಮಹಿಳೆಯರ ಜ್ವಲಂತ ಸಮಸ್ಯೆಗಳಾದ ಬಾಲ್ಯ ವಿವಾಹ, ಸ್ತ್ರೀ ಭ್ರೂಣ ಹತ್ಯೆ, ಲಿಂಗ ತಾರತಮ್ಯ, ವರದಕ್ಷಿಣೆ, ಕೌಟುಂಬಿಕ ದೌರ್ಜನ್ಯ, ಅಪೌಷ್ಟಿಕತೆ, ಅಭದ್ರತೆ ಹಾಗೂ ಉದ್ಯೋಗಸ್ಥ ಮಹಿಳೆಯರು ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರವಾಗಿ ಎಲ್ಲಾ ಸ್ತರದ ಮಹಿಳಾ ಸಮುದಾಯವನ್ನು ಸಂಘಟಿಸುತ್ತಿದೆ.
ಮಹಿಳೆ ಮತ್ತು ಮಕ್ಕಳ ಮೇಲೆ ದೇಶಾದ್ಯಂತ ನಡೆಯುತ್ತಿರುವ ಘೋರ ಅತ್ಯಾಚಾರ, ಗುಂಪು ಅತ್ಯಾಚಾರ ಮತ್ತು ಕೊಲೆಗಳು, ಆ ಪ್ರಕರಣಗಳ ತಾರ್ಕಿಕ ಹಂತಕ್ಕೆ ತಲುಪಲು ದೀರ್ಘಕಾಲ ತೆಗೆದುಕೊಳ್ಳುವುದು. ಹಲವು ಪ್ರಕರಣಗಳಲ್ಲಿ ಪ್ರಭಾವೀ ಆರೋಪಿಗಳು ಖುಲಾಸೆಯಾಗಿರುವುದು ಅಥವಾ ನಿಜವಾದ ಆರೋಪಿಗಳು ಸಿಗದೇ ಇರುವುದು ಸಾರ್ವಜನಿಕರಲ್ಲಿ ಸಿಟ್ಟು ಮಡುಗಟ್ಟುವಂತೆ ಮಾಡಿದೆ ಎಂದು ಪ್ರತಿಭಟನೆಕಾರರು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಇಂದಿಗೂ ಕದ್ದು ಮುಚ್ಚಿ ನಡೆಯುತ್ತಿರುವ ಸ್ತ್ರೀ ಭ್ರೂಣ ಹತ್ಯೆಯ ಘಟನೆಗಳು ಸಮಾಜದಲ್ಲಿರುವ ಹಳೆಯ ಮೌಲ್ಯಗಳನ್ನು ಎತ್ತಿ ಹಿಡಿಯುತ್ತವೆ. ೨೦೨೪- ೨೫ರ ಅವಧಿಯಲ್ಲಿ ೭೦೦ಕ್ಕೂ ಹೆಚ್ಚು ಬಾಲ್ಯ ವಿವಾಹಗಳು ವರದಿಯಾಗಿದ್ದು, ಕಳೆದ ಮೂರು ವರ್ಷಗಳಲ್ಲಿ (೨೦೨೩-ಜುಲೈ ೨೦೨೫) ೮೦,೮೧೩ ಬಾಲ ಗರ್ಭಿಣಿ ಪ್ರಕರಣಗಳು (ಆರ್ ಸಿ ಎಚ್ ಪೋರ್ಟಲ್) ಪತ್ತೆಯಾಗಿರುವುದು ಆತಂಕವನ್ನು ಮೂಡಿಸಿದೆ ಎಂದು ಅವರು ಹೇಳಿದರು.
ಇಂತಹ ಗಂಭೀರ ಪರಿಸ್ಥಿತಿಯಲ್ಲಿ ಸರ್ಕಾರವು ಸ್ಪಂದಿಸಬೇಕಾಗಿದೆ. ಹಲವಾರು ಸಾಮಾಜಿಕ ಸಮಸ್ಯೆಗಳ ಪರಿಹಾರಕ್ಕೆ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಬೇಕಾಗಿದೆ. ಈ ಮೇಲೆ ಪ್ರಸ್ತಾಪಿಸಿರುವ ಹಲವಾರು ಸಮಸ್ಯೆಗಳ ಕುರಿತು ರಾಜ್ಯದ ಮಹಿಳೆಯರ ಧ್ವನಿಯಾಗಿ ಮಹಿಳಾ ಸಾಂಸ್ಕೃತಿಕ ಸಂಘಟನೆಯ ರಾಜ್ಯ ಸಮಿತಿಯು ಮಹಿಳೆಯರ ಹಾಗೂ ಮಕ್ಕಳ ಹಕ್ಕೊತ್ತಾಯಗಳನ್ನು ಮಂಡಿಸಿದೆ.
ಮಹಿಳೆಯರ ಮತ್ತು ಮಕ್ಕಳ ಭದ್ರತೆಗೆ ಸೂಕ್ತ ಕ್ರಮ ಕೈಗೊಳ್ಳಿ,
ಸ್ತ್ರೀ ಭ್ರೂಣ ಹತ್ಯೆ ಕಾಯ್ದೆಯನ್ನು (ಪಿಸಿ ಮತ್ತು ಪಿಎನ್ ಡಿಟಿ) ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಿ, ಅಶ್ಲೀಲ ಸಿನಿಮಾ-ಸಾಹಿತ್ಯ-ಪೋರ್ನ್ ಜಾಹಿರಾತುಗಳನ್ನು, ಮದ್ಯ – ಮಾದಕ ವಸ್ತುಗಳನ್ನು ನಿಷೇಧಿಸಿ,
ಬಾಲ್ಯ ವಿವಾಹ , ಅಪ್ರಾಪ್ತ ಗರ್ಭಧಾರಣೆ ತಡೆಗಟ್ಟಲು ಕಠಿಣ ಕ್ರಮ ಕೈಗೊಳ್ಳಿ.
ಮಹಿಳೆಯರ ಮತ್ತು ಮಕ್ಕಳ ಮಾನವ ಕಳ್ಳ ಸಾಗಾಣಿಕೆಯನ್ನು ತಡೆಗಟ್ಟಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಿ.
ಫಾಸ್ಟ್ ಟ್ರ‍್ಯಾಕ್ ನ್ಯಾಯಾಲಯಗಳ ಸಂಖ್ಯೆಗಳನ್ನು ಹೆಚ್ಚಿಸಿ, ಅವುಗಳ ಸರಿಯಾದ ಕಾರ್ಯನಿರ್ವಹಣೆಯನ್ನು ಖಾತ್ರಿಪಡಿಸಿ,
ಶಾಲಾ-ಕಾಲೇಜು ಮತ್ತು ಕಚೇರಿಗಳಲ್ಲಿ ನಮ್ಮ ಕ್ಲಿನಿಕ್ ಪ್ರಾರಂಭಿಸಿ.
ಸಾಮಾಜಿಕ ಮಾಧ್ಯಮಗಳಲ್ಲಿನ (ಶಾರ್ಟ್ಸ್, ರೀಲ್ಸ್, ಇನ್ಸ್ಟಾಗ್ರಾಮ್, ಇತ್ಯಾದಿ) ಅನುಚಿತ ವಿಷಯಗಳಿಗೆ ತಡೆಹಾಕಿ ಹಾಗೂ ಮದ್ಯ-ಮಾದಕ ವಸ್ತುಗಳನ್ನು ನಿಷೇಧಿಸಿ, ಅತ್ಯಾಚಾರಿಗಳಿಗೆ ನಿದರ್ಶನೀಯ ಶಿಕ್ಷೆ ನೀಡಿ, ಯುವತಿಯರಿಗಾಗಿ ಜೂಡೋ-ಕರಾಟೆಯಂತಹ ಆತ್ಮ ರಕ್ಷಣಾ ಕೋರ್ಸ್ ಗಳನ್ನು ಕಡ್ಡಾಯಗೊಳಿಸಿ
ಆಂತರಿಕ ದೂರು ಸಮಿತಿಗಳನ್ನು ಶಾಲೆ, ಕಾಲೇಜು ಹಾಗೂ ಉದ್ಯೋಗದ ಸ್ಥಳಗಳಲ್ಲಿ ಸ್ಥಾಪಿಸಿ, ಕಾರ್ಯನಿರ್ವಹಿಸುವಂತೆ ಕ್ರಮ ಕೈಗೊಳ್ಳಿ.
ಸಮಾನ ಕೆಲಸಕ್ಕೆ ಸಮಾನ ವೇತನ ನೀಡಿ, ಶಿಕ್ಷಣ-ಆರೋಗ್ಯದ ವ್ಯಾಪಾರೀಕರಣವನ್ನು ತಡೆಗಟ್ಟಿ, ಜಸ್ಟಿಸ್ ವರ್ಮ ಸಮಿತಿಯ ವರದಿಯನ್ನು ಸಂಪೂರ್ಣವಾಗಿ ಅನುಷ್ಠಾನಗೊಳಿಸಿ ಹಿರೇ ಮುಂತಾದ ಪ್ರಮುಖ ಬೇಡಿಕೆಗಳನ್ನು ಮಂಡಿಸಿ ಜಾರಿಗೊಳಿಸಲು ಆಗ್ರಹಿಸಿತು.
ಪ್ರತಿಭಟನೆಯಲ್ಲಿ ಎಐಎಮ್‌ಎಸ್‌ಎಸ್ ಜಿಲ್ಲಾಧ್ಯಕ್ಷೆ ಗೀತಾ ಹೆಚ್, ಕಾರ್ಯದರ್ಶಿ ಶಿವಬಾಳಮ್ಮ ಕೊಂಡಗೂಳಿ, ಜಂಟಿ ಕಾರ್ಯದರ್ಶಿ ಶಿವರಂಜನಿ, ನಿವೃತ್ತ ಉಪನ್ಯಾಸಕಿ ಲಲಿತಾ ಬಿಜ್ಜರಗಿ, ಜಿಲ್ಲಾ ಸಮಿತಿ ಸದಸ್ಯೆ ಜ್ಯೋತಿ ಹಚಡದ ಇದ್ದರು.
ಮಹಿಳೆಯರ ಮೇಲಿನ ದೌರ್ಜನ್ಯ ಖಂಡಿಸಿ ಮಹಿಳಾ ಸಾಂಸ್ಕೃತಿಕ ಸಂಘಟನೆ ಪ್ರತಿಭಟನೆ


