ವೀರ ಪರಿವಾರ್ ಸಹಾಯವಾಣಿ ಕೇಂದ್ರ ಉದ್ಘಾಟನೆ

ಸಪ್ತಸಾಗರ ವಾರ್ತೆ, ವಿಜಯಪುರ, ಸೆ.14: ಮಾಜಿ ಸೈನಿಕರಿಗೆ ಹಾಗೂ ಅವರ ಅವಲಂಬಿತರಿಗೆ ವೀರ ಪರಿವಾರ್ ಸಹಾಯವಾಣಿ ಯೋಜನೆ ಜಾರಿಗೆ ಬಂದಿದ್ದು ಅದರ ಸದುಪಯೋಗ ಪಡಿಸಿಕೊಳ್ಳುವಂತೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾಕಾನೂನು ಸೇವೆಗಳ ಪ್ರಾಧಿಕಾರ ಅಧ್ಯಕ್ಷ ಹರೀಶ.ಎ ಹೇಳಿದರು.
ಭಾನುವಾರ ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ, ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಜಿಲ್ಲಾ ವಕೀಲರ ಸಂಘ ಇವರ ಸಂಯುಕ್ತಾಶ್ರಯದಲ್ಲಿ ಮಾಜಿ ಸೈನಿಕರಿಗೆ ಹಾಗೂ ಅವರ ಅವಲಂಬಿತರಿಗೆ ವೀರ ಪರಿವಾರ್ ಸಹಾಯವಾಣಿ ಯೋಜನೆಯ ಕಾನೂನು ಸಲಹಾ ಕೇಂದ್ರ ಉದ್ಘಾಟಿಸಿ ಅವರು ಮಾತನಾಡಿದರು.
ಈ ಯೋಜನೆಯೂ ಕೇಂದ್ರೀಯ ಸೈನಿಕ ಮಂಡಳಿಯ ಸಹಯೋಗದೊಂದಿಗೆ ಮೀಸಲಾದ ಕಾನೂನು ಸೇವಾ ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದೆ. ಇದರಲ್ಲಿ ರಕ್ಷಣಾ ಸಿಬ್ಬಂದಿ, ಮಾಜಿ ಸೈನಿಕರು ಹಾಗೂ ಅವರ ಅವಲಂಬಿತರಿಗಾಗಿ ಈ ಯೊಜನೆ ಇಂದು ರಾಜ್ಯದ ಬಾಗಲಕೋಟೆ, ಬೆಳಗಾವಿ, ಧಾರವಾಡ, ಮಂಗಳೂರು, ಹಾಸನ, ಕಲಬುರಗಿ, ಕೊಡಗು, ಮೈಸೂರು, ಶಿವಮೊಗ್ಗ, ಕಾರವಾರ ಹಾಗೂ ವಿಜಯಪುರ ಜಿಲ್ಲೆಗಳಲ್ಲಿ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಆವರಣಗಳಲ್ಲಿ ಲೋಕಾರ್ಪಣೆ ಮಾಡಲಾಗುತ್ತಿದೆ. ಇಲ್ಲಿ ಕಾನೂನಿನ ತೊಡಕುಗಳಿದ್ದಲ್ಲಿ ಭೇಟಿ ಮಾಡಿ ತಮ್ಮ ಸಮಸ್ಯೆಗಳನ್ನು ಬಗೆಹರಿಕೊಳ್ಳಬಹುದಾಗಿದೆ. ಈ ಯೋಜನೆಯು ಉಚಿತವಾಗಿ ಕಾನೂನಿನ ಅರಿವು ಮತ್ತು ನೆರವಿನ ಸೇವೆಯನ್ನು ಒದಗಿಸುವ ಗುರಿಯನ್ನು ಹೊಂದಿದೆ. ರಾಜ್ಯದಲ್ಲಿ ಲೋಕ ಅದಾಲತ್ ಕಾನೂನು ಮೂಲಕ ನೊಂದವರ, ದುರ್ಬಲ, ಶೋಷಿತ, ಬಡವರು, ಹಿರಿಯ ನಾಗರಿಕರು ಮತ್ತು ಯಾವುದೇ ಕಾನೂನು ತೊಡಕುಗಳಿದ್ದಲ್ಲಿ ಆಸ್ತಿ ವಿವಾದ, ವೈವಾಹಿಕ ಸಮಸ್ಯೆಗಳು, ಆರ್ಥಿಕವಾಗಿ ಸಮರ್ಥರಿಲ್ಲದವರಿಗೆ ಉಚಿತವಾಗಿ ಕಾನೂನು ಸಲಹೆಗಳನ್ನು ನೀಡಲಾಗುತ್ತಿದೆ. ಇಲ್ಲಿ ಸಮನ್ವಯ ಸಂಧಾನ ಮೂಲಕ ತ್ವರಿತವಾಗಿ ಹಾಗೂ ಪರಿಣಾಮಕಾರಿ ಕಾರ್ಯ ನಿರ್ವಹಿಸುತ್ತದೆ. ಇಲ್ಲಿ ಪ್ರತಿಯೊಬ್ಬರೂ ನ್ಯಾಯ ಪಡೆದುಕೊಳ್ಳುವ ಹಕ್ಕನ್ನು ಹೊಂದಿರುತ್ತಾರೆೆ ಹಾಗೂ ಈ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು ಎಂದು ಅವರು ಹೇಳಿದರು.
ಇಂದು ಮೈಸೂರಿನ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ಸಭಾಂಗಣದಲ್ಲಿ ರಕ್ಷಣಾ ಸಿಬ್ಬಂದಿ ಹಾಗೂ ಮಾಜಿ ಸೈನಿಕ ಹಾಗೂ ಅವರ ಕುಟುಂಬ ಸದಸ್ಯರುಗಳಿಗೆ ಉಚಿತ ಕಾನೂನು ಸೇವೆಗಳ ಕ್ಲಿನಿಕ್ ಯೋಜನೆಯನ್ನು ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳು ಹಾಗೂ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯ ನಿರ್ವಾಹಕ ಅಧ್ಯಕ್ಷರಾದ ಅನು ಶಿವರಾಮನ್ ಇಂದು ವರ್ಚುವಲ್ ಮುಖಾಂತರ ಉಚಿತ ಕಾನೂನು ಸಲಹಾ ಕೇಂದ್ರಗಳನ್ನು ಉದ್ಘಾಟಿಸುವ ಮೂಲಕ ಯೋಜನೆಗೆ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಹಿರಿಯ ನ್ಯಾಯಾದೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿಗಳಾದ ಅರವಿಂದ ಹಾಗರಗಿ, ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಉಪನಿರ್ದೆಶಕ ವಿನಯಕುಮಾರ ಪಾಟೀಲ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಡಿ.ಜಿ ಬಿರಾದಾರ, ವಕೀಲರ ಸಂಘದ ಕಾರ್ಯದರ್ಶಿ ಎಸ್.ಎಸ್.ಚೂರಿ, ಪೆನೆಲ್ ವಕೀಲ ಜಾವೀದ ಗುಡಗುಂಟಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸಿಬ್ಬಂದಿಗಳು, ಮಾಜಿ ಸೈನಿಕರು ಹಾಗೂ ಇತರರು ಉಪಸ್ಥಿತರಿದ್ದರು.

Share