ಸಪ್ತಸಾಗರ ವಾರ್ತೆ ವಿಜಯಪುರ, ಸೆ. 16:
ಮುಸುಕುಧಾರಿ ದರೋಡೆಕೋರರ ಗುಂಪೊಂದು ಜಿಲ್ಲೆಯ ಚಡಚಣ ಪಟ್ಟಣದ ಎಸ್ ಬಿ ಐ ಬ್ಯಾಂಕಿಗೆ ಮಂಗಳವಾರ ರಾತ್ರಿ 8ಗಂಟೆ ಸುಮಾರಿಗೆ ನುಗ್ಗಿ ನಗದು, ಚಿನ್ನಾಭರಣ ದೋಚಿಕೊಂಡು ಪರಾರಿಯಾಗಿದೆ.
ಐದಕ್ಕೂ ಹೆಚ್ಚು ಮುಸುಕುಧಾರಿ ದರೋಡೆಕೋರರಿಂದ ಈ ಕೃತ್ಯ ನಡೆದಿದ್ದು, ಮಿಲಿಟರಿ ಮಾದರಿ ಬಟ್ಟೆಯಲ್ಲಿ ಕೈಯಲ್ಲಿ ಕಂಟ್ರಿ ಪಿಸ್ತೂಲ್ ಹಾಗೂ ಮಾರಕಾಸ್ತ್ರಗಳನ್ನು ತೋರಿಸಿ ಎಸ್ ಬಿ ಐ ಬ್ಯಾಂಕ್ ನಲ್ಲಿನ ಮ್ಯಾನೇಜರ್, ಕ್ಯಾಶಿಯರ್ ಹಾಗೂ ಇತರೆ ಸಿಬ್ಬಂದಿಗಳಿಗೆ ಹೆದರಿಸಿ ಕೈಕಾಲು ಕಟ್ಟಿ ಕೂಡಿ ಹಾಕಿ ದರೋಡೆ ನಡೆಸಲಾಗಿದೆ.
ಬ್ಯಾಂಕಿನಲ್ಲಿದ್ದ ಎಷ್ಟು ಹಣ, ಎಷ್ಟು ಚಿನ್ನಾಭರಣ ದೋಚಿರುವ ಬಗ್ಗೆ ನಿಖರವಾಗಿ ತಿಳಿದು ಬಂದಿಲ್ಲ. ಪೋಲಿಸ್ ತನಿಖೆಯಿಂದ ಇದು ಗೊತ್ತಾಗಬೇಕಾಗಿದೆ. ಸುದ್ದಿ ಕೇಳಿದ ತಕ್ಷಣ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಹಾಗೂ ಇತರ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಬ್ಯಾಂಕ್ ದರೋಡೆ ಸುದ್ದಿ ಕಾಡ್ಗಿಚ್ಚಿನಂತೆ ಹರಡಿ ಬ್ಯಾಂಕ್ ಮುಂದೆ ಸ್ಥಳೀಯರು ಅಧಿಕ ಸಂಖ್ಯೆಯಲ್ಲಿ ಜಮಾಯಿಸಿದರು.
ಪೊಲೀಸರು ತನಿಖೆ ಕಾರ್ಯ ಮುಂದುವರಿಸಿದ್ದಾರೆ.
ಕೆಲವು ತಿಂಗಳುಗಳ ಹಿಂದೆ ಬಸವನಬಾಗೇವಾಡಿ ತಾಲೂಕಿನ ಮನಗೂಳಿಯಲ್ಲಿ ನಡೆದ ಬ್ಯಾಂಕ್ ದರೋಡೆ ಜನರ ಮನಸ್ಸಿನಿಂದ ಇನ್ನೂ ಮಾಸದಿರುವಾಗಲೇ ಜಿಲ್ಲೆಯಲ್ಲಿ ಮತ್ತೊಂದು ಬ್ಯಾಂಕ್ ಪ್ರಕರಣ ನಡೆದಿರುವುದು ಜನರಲ್ಲಿ ಆತಂಕ ಮೂಡಿಸಿದೆ.
ಚಡಚಣದಲ್ಲಿ ಎಸ್ ಬಿ ಐ ಬ್ಯಾಂಕ್ ದರೋಡೆ
