ಸಪ್ತಸಾಗರ ವಾರ್ತೆ, ವಿಜಯಪುರ, ಸೆ. 19: ಮಹಿಳೆಯರು ಕೀಳರಿಮೆ ಬೆಳೆಸಿಕೊಳ್ಳಬೇಡಿ. ಧನಾತ್ಮಕ ಚಿಂತೆನಗಳನ್ನು ಅಳವಡಿಸಿಕೊಂಡು ಬದುಕಬೇಕೆಂದು ಕಾನೂನು ಮಹಾವಿದ್ಯಾಲಯದ ಪ್ರಾಧ್ಯಾಪಕಿ ಉಜ್ವಲ ಎ. ಸರನಾಡಗೌಡ ಸಲಹೆ ನೀಡಿದರು.
ನಗರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಸ್ನಾತಕ ಅಧ್ಯಯನ ವಿಭಾಗ ೨೦೨೫-೨೬ನೇ ಸಾಲಿನ ಪ್ರಥಮ ವರ್ಷದ ವಿದ್ಯಾರ್ಥಿನಿಯರ ಸ್ವಾಗತ ಸಮಾರಂಭದಲ್ಲಿ ಮಾತನಾಡಿದರು.
ವಿದ್ಯಾರ್ಥಿಗಳು ಕೌಟುಂಬಿಕ ಸಮಸ್ಯೆಗಳನ್ನು ನಿಭಾಯಿಸುವ ಜತೆಗೆ ಉತ್ತಮ ಜೀವನ ಕಟ್ಟಿಕೊಳ್ಳಿ. ಆ ಮೂಲಕವೇ ಮಹಿಳಾ ಸಬಲೀಕರಣ ಆರಂಭವಾಗುತ್ತದೆ. ವಿದ್ಯಾರ್ಥಿ ಜೀವನದಲ್ಲಿ ಕಠಿಣ ಪರಿಶ್ರಮ ಮತ್ತು ನಿರಂತರತೆ ಕಾಯ್ದುಕೊಳ್ಳುವುದು ಮುಖ್ಯ. ಕೀಳರಿಮೆ ಹೊಂದಬೇಡಿ. ಬಲಿಷ್ಠವಾಗಿ ವರ್ತಿಸುವುದನ್ನು ರೂಢಿಸಿಕೊಳ್ಳಿ. ಧನಾತ್ಮಕ ಚಿಂತನೆ ಮಾಡಿ. ಸಮಾಜದಲ್ಲಿನ ಪರಿವರ್ತನೆ ಸದಾ ಗಮನಿಸಿ. ಶಿಸ್ತು, ತಾಳ್ಮೆ, ಸಂಯಮದೊಂದಿಗೆ ಗುರಿ ಸಾಧಿಸಿ ಎಂದು ಕಿವಿಮಾತು ಹೇಳಿದರು.
ಕುಲಸಚಿವ ಶಂಕರಗೌಡ ಸೋಮನಾಳ ಮಾತನಾಡಿ, ಹೆಣ್ಣು ಮಕ್ಕಳ ಬದುಕು ಮಹಿಳಾ ಸಬಲೀಕರಣದ ಮೇಲೆ ನಿಂತಿದೆ. ವಿದ್ಯಾರ್ಥಿನಿಯರು ಸಾಧ್ಯವಾದಷ್ಟು ಮೊಬೈಲ್ ಬಳಕೆ ಕಡಿಮೆ ಮಾಡಿ. ಪುಸ್ತಕ ಓದಿ. ಆಕರ್ಷಣೆಗಳಿಂದ ದೂರವಿದ್ದು, ಸಾಧನೆಯತ್ತ ಚಿತ್ತ ಹೊಂದಿ ಎಂದು ತಿಳಿವಳಿಕೆ ಹೇಳಿದರು.
ಮೌಲ್ಯಮಾಪನ ಕುಲಸಚಿವ ಪ್ರೊ.ಬಸವರಾಜ ಲಕ್ಕಣ್ಣವರ ಮಾತನಾಡಿ, ಜೀವನದಲ್ಲಿ ಎಲ್ಲರಿಗೂ ಸಮಸ್ಯೆಗಳು ಎದುರಾಗುತ್ತವೆ. ಅವುಗಳನ್ನು ಮೆಟ್ಟಿ ಮುಂದೆ ಸಾಗುವವರು ಗುರಿ ತಲುಪುತ್ತಾರೆಂದು ಅಭಿಪ್ರಾಯಪಟ್ಟರು.
ಸ್ಥಾನಿಕ ಅಭಿಯಂತರ ಮಾರುತಿ ಕದಮ ಮಾತನಾಡಿ, ವಿದ್ಯಾರ್ಥಿಗಳು ಅತಿಯಾದ ಮೊಬೈಲ್ ಬಳಕೆಯನ್ನು ಬಿಟ್ಟು, ಸಮಯ ವ್ಯರ್ಥ ಮಾಡದೆ ಅಧ್ಯಯನಶೀಲರಾದರೆ ಮಾತ್ರ ಶೈಕ್ಷಣಿಕ ಸಾಧನೆ ಸಾಧ್ಯವಾಗುತ್ತದೆ ಎಂದು ಸಲಹೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಪ್ರೊ. ಸಕ್ಪಾಲ ಹೂವಣ್ಣ ಮಾತನಾಡಿ, ವಿದ್ಯಾರ್ಥಿನಿಯರು ಬದುಕಿನಲ್ಲಿ ಸಾಮಾನ್ಯ ಜ್ಞಾನವನ್ನು ಹೊಂದಿಕೊಳ್ಳುವುದು ಅತ್ಯಂತ ಅಗತ್ಯ. ಶಿಕ್ಷಣದೊಂದಿಗೆ ಜೀವನಮೌಲ್ಯಗಳು ಹಾಗೂ ಸಾಮಾನ್ಯ ಅರಿವು ಬೆಳೆಸಿಕೊಂಡರೆ ಮಾತ್ರ ವ್ಯಕ್ತಿತ್ವದ ಬೆಳವಣಿಗೆ ಸಾಧ್ಯ ಎಂದು ಹೇಳಿದರು.
ಸ್ನಾತಕ ಅಧ್ಯಯನ ವಿಭಾಗದ ಸಂಯೋಜಕಿ ಡಾ. ಜಿ. ಸೌಭಾಗ್ಯ, ಸಮಾಜಶಾಸ್ತ್ರ ಅಧ್ಯಯನ ವಿಭಾಗದ ಮುಖ್ಯಸ್ಥ ಪ್ರೊ. ಎಂ. ಪಿ. ಬಳೆಗಾರ, ಸಾಂಸ್ಕೃತಿಕ ಸಂಯೋಜಕಿ ಕು. ದೀಪಾ ಸೂರ್ಯವಂಶಿ, ವಿದ್ಯಾರ್ಥಿಗಳ ಕಾರ್ಯದರ್ಶಿ ಕು. ಲಕ್ಷ್ಮಿ ಕರ್ನಾಳ ಮತ್ತು ಬೋಧಕ-ಬೋಧಕೇತರರು ಉಪಸ್ಥಿತರಿದ್ದರು.
ವಿದ್ಯಾರ್ಥಿನಿಯರಾದ ಶೃತಿ ಕುಲಕರ್ಣಿ ತಂಡದವರು ಮಹಿಳಾ ಗೀತೆಯನ್ನು ಪ್ರಾರ್ಥಿಸಿದರು. ಗೌತಮಿ ನಾಟೇಕರ ಸ್ವಾಗತಿಸಿದರು. ಸ್ಪಂದನಾ ಪರಿಚಯಿಸಿದರು. ರುಶ್ದಾ ಖಾನಂ ರೂಗಿ ವಂದಿಸಿದರು. ಶ್ವೇತಾ, ಗೀತಾ, ವಂದನಾ, ಸಾನಿಯಾ ಮತ್ತು ರೋಹಿಣಿ ನಿರೂಪಿಸಿದರು.
ಮಹಿಳೆಯರು ಧನಾತ್ಮಕ ಚಿಂತನೆ ಹೊಂದಿ: ಉಜ್ವಲ ಸರನಾಡಗೌಡ ಸಲಹೆ
