ಸಪ್ತಸಾಗರ ವಾರ್ತೆ ವಿಜಯಪುರ, ಸೆ. 24: ಜಾನಪದ ಗಾಯಕ, ತಂತಿ ವಾದ್ಯಗಳ ತಯಾರಕರಾದ ಏಕತಾರಿ ರಾಮಯ್ಯನವರ ಅವರಿಗೆ ರಾಜ್ಯ ಪ್ರಶಸ್ತಿ ನೀಡುವಂತೆ ಒತ್ತಾಯಿಸಿ ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ ರವರು, ಮುಖ್ಯಮಂತ್ರಿಗಳಾದ ಸಿದ್ದರಾಯಯ್ಯನವರಿಗೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾದ ಶಿವರಾಜ ತಂಗಡಗಿ ಅವರಿಗೆ ಬುಧವಾರ ಪತ್ರ ಬರೆದಿದ್ದಾರೆ.
ಬೆಂಗಳೂರಿನ ಗೊಲ್ಲಹಳ್ಳಿ ಹೋಬಳಿಯ ಕೆಂಚನಪಾಳ್ಯ ಗ್ರಾಮದ ನಿವಾಸಿಯಾಗಿರುವ ಜಾನಪದ ಗಾಯಕ ಏಕತಾರಿ ರಾಮಯ್ಯನವರು ತಮ್ಮ ಕಂಚಿನ ಕಂಠ ಹಾಗೂ ವಿಶಿಷ್ಟ ಪ್ರತಿಭೆಯ ಮೂಲಕ ಜಾನಪದ ಲೋಕಕ್ಕೆ ಸಾಕಷ್ಟು ಕೊಡುಗೆಯನ್ನು ನೀಡಿದ್ದಾರೆ. ಏಕತಾರಿ (ತಂಬೂರಿ), ಕಿನ್ನರಿ, ಪುಂಗಿ, ಚಿಟಕಿ, ತಮಟೆ ಕಟ್ಟಿಕೊಂಡು ಊರೂರು ಸುತ್ತುವ ಇವರು ಐದು ವಾದ್ಯಗಳನ್ನು ನುಡಿಸುವಂತ ಪ್ರತಿಭಾವಂತ ಕಲಾವಿದರು. ಜಾನಪದ ಗಾಯಕರಷ್ಟೇ ಅಲ್ಲ, ವಾದ್ಯ ತಯಾರಕರೂ ಹೌದು.
ಸುಮಾರು 13 ವಾದ್ಯಗಳನ್ನು ತಯಾರು ಮಾಡುತ್ತ ಸದರಿ ವಾದ್ಯಗಳು ಮುಂದಿನ ಪೀಳಿಗೆಗೂ ಉಳಿಯಬೇಕೆಂಬ ಉತ್ಪಟ ಹಂಬಲದಿಂದ ತಮ್ಮ ಸಣ್ಣ ಗುಡಿಸಿಲಿನಲ್ಲಿ ತಂಬೂರಿ ತರಬೇತಿ ಕೇಂದ್ರವನ್ನು ಸ್ಥಾಪಿಸಿ ಕಲಾ ಸರಸ್ವತಿಯನ್ನು ಆರಾಧಿಸುತ್ತಿದ್ದಾರೆ. ಆಧುನಿಕತೆಯ ಭರಾಟೆಯಲ್ಲಿ ಜಾನಪದ ಗೀತೆಗಳ ಮೂಲ ಧಾಟಿಗಳು ಕಣ್ಮರೆಯಾಗುತ್ತಿರುವ ಸಂದರ್ಭದಲ್ಲಿ ರಾಮಯ್ಯನವರು ಇದನ್ನು ಉಳಿಸಲು ಮಾಡುತ್ತಿರುವ ಭಗೀರಥ ಪ್ರಯತ್ನ ಅಭಿನಂದನೀಯ ಹಾಗೂ ಆದರಣೀಯವಾಗಿದೆ.
ರಾಗಿ ಬೀಸೋಪದ, ಸೊಬಾನಿಪದ, ಸಾಸುವೆಪದ, ಜೋಗಿಪದ, ಚೌಡಿಕೆಪದ, ಬಳೆಗಾರಪದ, ಕಂಸಾಳೆ ಪದಗಳನ್ನು ಲೀಲಾಜಾಲವಾಗಿ ಹಾಡುತ್ತ ಜಾನಪದ ಲೋಕಕ್ಕೆ ತಮ್ಮದೇ ಆದ ಕೊಡುಗೆಯನ್ನು ನೀಡುತ್ತಾ ಬಂದಿದ್ದಾರೆ. ರಾಮಯ್ಯನವರು ಕಡು ಬಡತನತಲ್ಲಿದ್ದು, ಇವರ ಕಲೆಗೆ ಸರ್ಕಾರ ಪ್ರೋತ್ಸಾಹ ನೀಡಿ ಇವರಿಗೆ ರಾಜ್ಯಮಟ್ಟದ ಪ್ರಶಸ್ತಿ ಸೇರಿದಂತೆ ಇವರ ಬದುಕಿಗೆ ಅನುಕೂಲವಾಗುವಂತೆ ಪಿಂಚಣಿ ನೀಡಬೇಕಾದದ್ದು ಸರ್ಕಾರದ ಆದ್ಯ ಕರ್ತವ್ಯವಾಗಿರುತ್ತದೆ. ಅಲ್ಲದೆ ತಮ್ಮ ಸ್ವಂತ ಸಂಪನ್ಮೂಲದಿಂದ ತಂತಿವಾದ್ಯಗಳನ್ನು ತಯಾರಿಕೆ ಮಾಡುತ್ತಿರುವ ಇವರಿಗೆ ಮೂಲಭೂತ ಸೌಕರ್ಯವನ್ನು ನೀಡಲು ಸರ್ಕಾರ ಗಂಭೀರವಾಗಿ ಚಿಂತಿಸಬೇಕಾಗಿದೆ.
ಪರಂಪರೆ ಪ್ರಜ್ಞೆಯ ಸಂಕೇತವಾದ ಜಾನಪದ ಕಲೆಗಳನ್ನು ಉಳಿಸುವ ಕಾರ್ಯದಲ್ಲಿ ತಮ್ಮ ಜೀವನವನ್ನೇ ಅರ್ಪಿಸಿರುವ ಜಾನಪದ ಗಾಯಕ, ತಂತಿ ವಾದ್ಯಗಳ ತಯಾರಕರು ಆದ ಏಕತಾರಿ ರಾಮಯ್ಯನವರ ಸಾಧನೆಗೆ ಹಾಗೂ ಕೊಡುಗೆಯನ್ನು ಪರಿಗಣಿಸಿ, ಅವರಿಗೆ ರಾಜ್ಯ ಪ್ರಶಸ್ತಿ ಹಾಗೂ ಕಲಾವಿದರಿಗೆ ನೀಡುವ ಪಿಂಚಣಿಯನ್ನು ನೀಡಬೇಕೆಂದು ಪತ್ರದಲ್ಲಿ ತಿಳಿಸಿದ್ದಾರೆ ಎಂದು ನಗರ ಶಾಸಕರ ಸಾರ್ವಜನಿಕ ಸಂಪರ್ಕ ಕಾರ್ಯಾಲಯದ ಪ್ರಕಟಣೆ ತಿಳಿಸಿದೆ.
ಏಕತಾರಿ ರಾಮಯ್ಯನವರಿಗೆ ರಾಜ್ಯ ಪ್ರಶಸ್ತಿ ನೀಡಲು ಸಿಎಂಗೆ ಯತ್ನಾಳ್ ಒತ್ತಾಯ


