ಭೀಮಾ ನದಿಗೆ ಪ್ರವಾಹ: 8 ಜನರ ರಕ್ಷಣೆ


ರುದ್ರಪ್ಪ ಆಸಂಗಿ

ಸಪ್ತಸಾಗರ ವಾರ್ತೆ ವಿಜಯಪುರ, ಸೆ. 27:
ಕಳೆದ ಮೂರು ದಿನಗಳಿಂದ ವಿಜಯಪುರ ಜಿಲ್ಲೆಯಲ್ಲಿ ಸತತವಾಗಿ ಧಾರಾಕಾರ ಮಳೆ ಸುರಿಯುತ್ತಿದ್ದು, ಭೀಮಾ ನದಿಗೆ ಪ್ರವಾಹ ಬಂದು ಜನಜೀವನ ಅಸ್ತವ್ಯಸ್ತವಾಗಿದೆ. ತೋಟದ ಜಮೀನಿನಲ್ಲಿ ನೀರು ಸುತ್ತುವರಿದ ಪರಿಣಾಮ ಮಧ್ಯೆದಲ್ಲಿ ಸಿಲುಕಿಕೊಂಡಿದ್ದ ಎಂಟು ಜನರನ್ನು ರಕ್ಷಿಸಲಾಗಿದೆ.
ಜಿಲ್ಲೆಯ ಆಲಮೇಲ ತಾಲೂಕಿನ ತಾವರಖೇಡ ಗ್ರಾಮದಲ್ಲಿ ಪ್ರವಾಹ ಉಂಟಾಗಿ ನದಿ ದಂಡೆ ಜಮೀನುಗಳಿಗೆ ನೀರು ನುಗ್ಗಿದೆ. ನೋಡು ನೋಡುತ್ತಿದ್ದಂತೆಯೇ
ತೋಟದ ಮನೆ ಸುತ್ತಮುತ್ತಲಿನ ಪ್ರದೇಶದಲ್ಲಿ ನೀರು ನುಗ್ಗಿ ಸಿಲುಕಿದ್ದ 8 ಜನರನ್ನು ಬೋಟ್ ಬಳಸಿ ರಕ್ಷಣೆ ಮಾಡಲಾಗಿದೆ.
ಅಗ್ನಿಶಾಮಕ ಸಿಬ್ಬಂದಿ ಪ್ರವಾಹ ಸ್ಥಿತಿಯ ನಡುವೆಯೂ ತೋಟದ ಮನೆಯಲ್ಲಿ ವಾಸವಿದ್ದ ಕುಟುಂಬಗಳ 8 ಜನರನ್ನು ಬೋಟ್ ಸಮೇತ ತೆರಳಿ ರಕ್ಷಣೆ ಮಾಡಿದ್ದಾರೆ.
ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಶಶಿಕುಮಾರ್, ಶಾಂತು ಬಿರಾದಾರ ಉಮೇಶ ತಳಕೇರಿ ನೇತೃತ್ವದಲ್ಲಿ ರಕ್ಷಣಾ ಕಾರ್ಯ ಕೈಗೊಳ್ಳಲಾಗಿದೆ.
ಏತನ್ಮಧ್ಯೆ ಜಿಲ್ಲಾಧಿಕಾರಿ ಡಾ. ಆನಂದ ಕೆ. ಅವರು ವಿಡಿಯೋ ಕಾನ್ಫರೆನ್ಸ್ ಸಭೆ ನಡೆಸಿ ಪ್ರವಾಹ ಪರಿಸ್ಥಿತಿ ಎದುರಿಸಲು ಸಜ್ಜಾಗಿ ಮುಂಜಾಗ್ರತೆ ಕ್ರಮಗಳನ್ನು ಕೈಗೊಳ್ಳಬೇಕೆಂದು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಮಹಾರಾಷ್ಟ್ರದಲ್ಲಿ ಬಿಡುವಿಲ್ಲದೆ ಮಳೆ ಸುರಿಯುತ್ತಿದ್ದು ಭೀಮಾನದಿಗೆ ಪ್ರವಾಹ ಉಂಟಾಗಿದೆ. ಮಹಾರಾಷ್ಟ್ರದ ಉಜನಿ, ವೀರ್ ಜಲಾಶಯಗಳಿಂದ 3.5ಲಕ್ಷ ಕ್ಯೂಸೆಕ್ ನೀರು ಬಿಡುಗಡೆ ಮಾಡಿದ್ದು, ವಿಜಯಪುರ ಜಿಲ್ಲೆಯ ಭೀಮಾನದಿ ತಟದಲ್ಲಿ ಪ್ರವಾಹ ಭೀತಿ ಎದುರಾಗಿದೆ.
ಚಡಚಣ, ಇಂಡಿ, ಆಲಮೇಲ ತಾಲೂಕಿನ ಭಾಗಗಳಲ್ಲಿ ಪ್ರವಾಹದ ಭೀತಿ ಹೆಚ್ಚಾಗಿದೆ.
ಕರ್ನಾಟಕ- ಮಹಾರಾಷ್ಟ್ರ ರಾಜ್ಯ ಸರ್ಕಾರಗಳು ಭೀಮಾನದಿಗೆ ಅಡ್ಡಲಾಗಿ ನಿರ್ಮಾಣ ಮಾಡಿರುವ ಬ್ರಿಡ್ಜ್ ಕಂ ಬ್ಯಾರೇಜ್ ಗಳು ಸಂಪೂರ್ಣ ಜಲಾವೃತಗೊಂಡಿವೆ. ಬ್ರಿಡ್ಜ್ ಕಂ ಬ್ಯಾರೇಜ್ ಗಳಾದ ಗೋವಿಂದಪುರ-ಭಂಡಾರಕವಟೆ, ಔಜ್-ಶಿರನಾಳ, ಚಣೇಗಾಂವ-ಬರೂರ,
ಹಿಂಗಣಿ-ಆಳಗಿ, ಖಾನಾಪುರ-ಪಡನೂರ, ಹಿಳ್ಳಿ-ಗುಬ್ಬೇವಾಡ ಬ್ಯಾರೇಜ್ ಗಳು ಜಲಾವೃತಗೊಂಡಿದ್ದು, ಬ್ಯಾರೇಜ್ ಗಳ ಮೇಲೆ ಭಾರಿ ಪ್ರಮಾಣದ ನೀರು ಅಪಾಯದ ಮಟ್ಟ ಮೀರಿ ಹರಿಯುತ್ತಿರುವುದರಿಂದ ಮಹಾರಾಷ್ಟ್ರ- ಕರ್ನಾಟಕಕ್ಕೆ ಸಂಪರ್ಕ ಕಲ್ಪಿಸುವ ಸೇತುವೆಗಳು ಮುಳುಗಿ ಅಲ್ಲಿನ ರಸ್ತೆ ಸಂಚಾರ ಕಡಿತಗೊಂಡಿದೆ.
ಭೀಮಾನದಿ ಸುತ್ತಮುತ್ತಲಿನ ಜಮೀನುಗಳಿಗೆ ನೀರು ನುಗ್ಗಿ
ವಿವಿಧ ಬೆಳೆಗಳು ಹಾಳಾಗಿವೆ. ಇದರಿಂದ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂದು ವಿವಿಧ ಬೆಳೆಗಳನ್ನು ಕಳೆದುಕೊಂಡು ರೈತರು ಕಂಗಾಲಾಗಿದ್ದಾರೆ. ಮಹಾರಾಷ್ಟ್ರದ ಅಣೆಕಟ್ಟುಗಳಿಂದ ಮತ್ತೆ ಹೆಚ್ಚುವರಿ ನೀರು ಬಿಡುವ ಸಾಧ್ಯತೆಯಿದ್ದು, ಜಿಲ್ಲೆಯ ರೈತರು ಆತಂಕಗೊಂಡಿದ್ದಾರೆ. ಈಗಾಗಲೇ ಭೀಮಾನದಿ ಪ್ರವಾಹದಿಂದ ವಿಜಯಪುರ ಜಿಲ್ಲೆಯ ಚಡಚಣ, ಇಂಡಿ, ಅಲಮೇಲ ತಾಲೂಕುಗಳ ಭೀಮ ನದಿ ತೀರದ ಜಮೀನು, ತೋಟದ ಮನೆಗಳಿಗೆ ನೀರು ನುಗ್ಗಿದೆ.

Share