ಅತಿಥಿ ಉಪನ್ಯಾಸಕರ ನೇಮಕಾತಿಗೆ ಸರ್ಕಾರ ಅಸ್ತು: ವಿದ್ಯಾರ್ಥಿಗಳ ಹೋರಾಟಕ್ಕೆ ಸಂದ ಜಯ

ಸಪ್ತಸಾಗರ ವಾರ್ತೆ, ವಿಜಯಪುರ, ಸೆ. 30: ಅತಿಥಿ ಉಪನ್ಯಾಸಕರ ನೇಮಕಾತಿಗೆ ಸರ್ಕಾರ ಒಪ್ಪಿರುವುದನ್ನು ಎಐಡಿಎಸ್ ಒ ಜಿಲ್ಲಾ ಕಾರ್ಯದರ್ಶಿ ಕಾವೇರಿ ರಜಪೂತ ಸ್ವಾಗತಿಸಿದ್ದಾರೆ.
ರಾಜ್ಯದಲ್ಲಿ ಪದವಿ ಕಾಲೇಜುಗಳು ಆರಂಭವಾಗಿ 2 ತಿಂಗಳಾದರೂ, ಅತಿಥಿ ಉಪನ್ಯಾಸಕರಿಲ್ಲದೆ ಸರ್ಕಾರಿ ಕಾಲೇಜಿನ ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತಿದೆ. ತರಗತಿಗಳನ್ನೇ ನಡೆಸದೆ ರಾಜ್ಯದ ಹಲವು ವಿಶ್ವವಿದ್ಯಾಲಯಗಳು ಪರೀಕ್ಷೆಗಳನ್ನು ಕೂಡ ಘೋಷಿಸಿವೆ. ಇನ್ನೊಂದೆಡೆ, ಖಾಸಗಿ ಕಾಲೇಜುಗಳಲ್ಲಿ ಸರಾಗವಾಗಿ ಪಾಠಗಳು ನಡೆದು ಅಲ್ಲಿನ ವಿದ್ಯಾರ್ಥಿಗಳು ಪರೀಕ್ಷೆಗೆ ತಯಾರಾಗುತ್ತಿದ್ದಾರೆ. ರಾಜ್ಯದ ಬಡ ವಿದ್ಯಾರ್ಥಿಗಳಿಗಾದ ಈ ಘೋರ ಅನ್ಯಾಯವನ್ನು ಖಂಡಿಸಿ ಎಐಡಿಎಸ್ಓ ನೇತೃತ್ವದಲ್ಲಿ ರಾಜ್ಯದ ವಿದ್ಯಾರ್ಥಿಗಳು ಕಳೆದ ಎರಡು ತಿಂಗಳಿಂದ ಹೋರಾಟ ನಡೆಸಿದ್ದಾರೆ. ಜಿಲ್ಲಾ ಮಟ್ಟದಲ್ಲಿ ಪ್ರತಿಭಟನೆಗಳನ್ನು ನಡೆಸಿ, ಸೆಪ್ಟೆಂಬರ್ 27ರಂದು ರಾಜ್ಯವ್ಯಾಪಿ ಸ್ವಯಂಪ್ರೇರಿತರಾಗಿ ತರಗತಿ ಬಹಿಷ್ಕರಿಸಿದ್ದರು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈಶ್ವರ ಚಂದ್ರ ವಿದ್ಯಾಸಾಗರ್, ಜ್ಯೋತಿರಾವ್ ಪುಲೆ, ಕ್ರಾಂತಿಕಾರಿ ಭಗತ್ ಸಿಂಗ್, ನೇತಾಜಿಯವರ ಆದರ್ಶಗಳಿಂದ ಪ್ರೇರಿತರಾಗಿ ತಮ್ಮ ಶಿಕ್ಷಣದ ಹಕ್ಕನ್ನು ಕಾಪಾಡಿಕೊಳ್ಳಲು ವಿದ್ಯಾರ್ಥಿಗಳು ನಡೆಸಿದ ಹೋರಾಟಕ್ಕಿಂದು ಜಯ ದೊರೆತಿದೆ ಎಂದು ಅವರು ತಿಳಿಸಿದ್ದಾರೆ.
ಅಂತಿಮವಾಗಿ, ಕರ್ನಾಟಕ ರಾಜ್ಯ ಸರ್ಕಾರವು ಅತಿಥಿ ಉಪನ್ಯಾಸಕರ ನೇಮಕಾತಿಗೆ ಮುಂದಾಗಿದೆ. ವಿದ್ಯಾರ್ಥಿಗಳ ಕೂಗಿಗೆ ಸ್ಪಂದಿಸಿದ ಸರ್ಕಾರದ ನಡೆಯನ್ನು ಎಐಡಿಎಸ್ಓ ಸ್ವಾಗತಿಸುತ್ತದೆ. ಆದರೆ, ಪ್ರತಿ ವಿಷಯಕ್ಕೆ ಕನಿಷ್ಠ 30 ಗಂಟೆ ಪಾಠ ನಡೆಸಿದ ನಂತರವಷ್ಟೇ ಪರೀಕ್ಷೆಗಳನ್ನು ನಡೆಸಬೇಕೆಂದು ರಾಜ್ಯ ಸರ್ಕಾರವನ್ನು ಈ ಮೂಲಕ ಆಗ್ರಹಿಸುತ್ತಿದ್ದೇವೆ ಎಂದರು.
ಹೋರಾಟದಿಂದ ಮಾತ್ರವೇ ಬದಲಾವಣೆ ಸಾಧ್ಯ ಎಂಬ ಸಂದೇಶವನ್ನು ಕರ್ನಾಟಕದ ವಿದ್ಯಾರ್ಥಿಗಳು ಈ ಮೂಲಕ ಎಲ್ಲೆಡೆ ಸಾರಿದ್ದಾರೆ ಎಂದು ಕಾವೇರಿ ರಜಪೂತ ತಿಳಿಸಿದ್ದಾರೆ.

Share this