ಸಪ್ತಸಾಗರ ವಾರ್ತೆ, ವಿಜಯಪುರ, ಅ. 1: ಜಿಲ್ಲೆಯ ಮುದ್ದೇಬಿಹಾಳ ತಾಲ್ಲೂಕಿನ ಯರಗಲ್ಲ ಗ್ರಾಮದ ಪ್ರತಿಭಾವಂತ ಚಿತ್ರಕಲಾವಿದ ಬಸವರಾಜ ಹಡಪದ ಅವರು ನವರಾತ್ರಿಯ ಅಂಗವಾಗಿ ವಿಶೇಷ ಕಲಾಕೃತಿಯನ್ನು ರಚಿಸಿದ್ದಾರೆ.
ಮಿಶ್ರ ಮಾಧ್ಯಮ ಶೈಲಿಯಲ್ಲಿ ಮೂಡಿಬಂದಿರುವ ಶ್ರೀ ದೇವಿಯ ಭಾವಚಿತ್ರವು ಕಲಾಭಿಮಾನಿಗಳ ಮನಸೂರೆಗೊಂಡಿದೆ.
ನವರಾತ್ರಿಯ ಸಾಂಸ್ಕೃತಿಕ ವೈಭವವನ್ನು ತೋರಿಸುವ ಉದ್ದೇಶದಿಂದ ಕಲಾವಿದ ಬಸವರಾಜ ಅವರು ಭಕ್ತಿ, ಶಕ್ತಿ ಹಾಗೂ ನೈಜತೆಯ ಸಂಯೋಜನೆಯಲ್ಲಿ ಈ ಚಿತ್ರವನ್ನು ರಚಿಸಿದ್ದು, ಬಣ್ಣಗಳ ಸೊಗಸು ಮತ್ತು ಅಲಂಕಾರಿಕ ಕುಂಚಸ್ಪರ್ಶವು ಕಲಾಕೃತಿಗೆ ವಿಶೇಷತೆ ನೀಡಿದೆ.
ದೇವಿಯ ಕರುಣಾಮಯ ಮುಖಭಾವ, ಆಯುಧಗಳು ಹಾಗೂ ಅಲಂಕಾರಗಳು ಜೀವಂತವಾಗಿ ತೋರುವಂತೆ ಮೂಡಿ ಬಂದಿರುವುದು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿದೆ.
ಗ್ರಾಮಸ್ಥರು ಹಾಗೂ ಕಲಾಪ್ರೇಮಿಗಳು ಈ ಕಲಾಕೃತಿಯನ್ನು ಕಂಡು ಹರ್ಷ ವ್ಯಕ್ತಪಡಿಸುತ್ತಿದ್ದು, “ನವರಾತ್ರಿ ಹಬ್ಬಕ್ಕೆ ತಕ್ಕ ರೀತಿಯ ಆಧ್ಯಾತ್ಮಿಕ ಹಾಗೂ ಸಾಂಸ್ಕೃತಿಕ ಕಲೆ, ನಮ್ಮ ಗ್ರಾಮದ ಹೆಮ್ಮೆ” ಎಂದು ಅಭಿಪ್ರಾಯಪಟ್ಟಿದ್ದಾರೆ.
ಯರಗಲ್ಲ ಗ್ರಾಮದ ಬಸವರಾಜ ಹಡಪದ ಅವರ ಕೈಚಳಕದಲ್ಲಿ ಅರಳಿದ ಈ ಕಲಾಕೃತಿ, ಭಕ್ತಿ-ಕಲೆಯ ಸಮ್ಮಿಲನದ ಮಾದರಿಯಾಗಿ ನವರಾತ್ರಿ ಹಬ್ಬದ ನೆನಪಿನಲ್ಲಿ ವಿಶೇಷ ಸ್ಥಾನ ಪಡೆಯಲಿದೆ.
ನವರಾತ್ರಿ ಅಂಗವಾಗಿ ವಿಶೇಷ ಕಲಾಕೃತಿ ರಚನೆ: ಚಿತ್ರ ಕಲಾವಿದ ಬಸವರಾಜ ಹಡಪದ ಕೈಚಳಕದಲ್ಲಿ ಅರಳಿದ ಕಲೆ


