ಸಪ್ತಸಾಗರ ವಾರ್ತೆ ವಿಜಯಪುರ, ಅ. 4: ಬಿ.ಎಲ್.ಡಿ.ಇ ಸಂಸ್ಥೆಯ ಅಧ್ಯಕ್ಷ ಮತ್ತು ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಅವರ ಜನ್ಮದಿನದ ಅಂಗವಾಗಿ ಅಕ್ಟೋಬರ್ 7ರಂದು ಮಂಗಳವಾರ ಜಿಲ್ಲೆಯ ನಾಲ್ಕು ಕಡೆಗಳಲ್ಲಿ ಉಚಿತ ಆರೋಗ್ಯ ತಪಾಸಣೆ ಮತ್ತು ಚಿಕಿತ್ಸೆ ಬೃಹತ್ ಶಿಬಿರಗಳನ್ನು ಆಯೋಜಿಸಲಾಗಿದೆ.
ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ ಶ್ರೀ ಬಿ. ಎಂ. ಪಾಟೀಲ ವೈದ್ಯಕೀಯ ಮಹಾವಿದ್ಯಾಲಯ, ಆಸ್ಪತ್ರೆ ಹಾಗೂ ಸಂಶೋಧನೆ ಕೇಂದ್ರದ ವತಿಯಿಂದ ತಿಕೋಟಾ, ಬಬಲೇಶ್ವರ, ದೇವರ ಗೆಣ್ಣೂರ ಮತ್ತು ಬಸವನ ಬಾಗೇವಾಡಿ ತಾಲೂಕಿನ ಉಕ್ಕಲಿಯಲ್ಲಿ ಬೆಳಿಗ್ಗೆ 10 ರಿಂದ ಸಂಜೆ 4 ವರೆಗೆ ಈ ಶಿಬಿರ ನಡೆಯಲಿವೆ.
ತಿಕೋಟಾದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ, ಬಬಲೇಶ್ವರದಲ್ಲಿ ಕಾಖಂಡಕಿ ರಸ್ತೆಯ ಶ್ರೀ ಶಾಂತವೀರ ಪ್ರೌಢಶಾಲೆ ಆವರಣ, ದೇವರ ಗೆಣ್ಣೂರಿನ ನಮ್ಮೂರು ಸರಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಉಕ್ಕಲಿಯ ನ್ಯೂ ಇಂಗ್ಲಿಷ್ ಪ್ರೌಢ ಶಾಲೆಯಲ್ಲಿ ಈ ಶಿಬಿರಗಳನ್ನು ಆಯೋಜಿಸಲಾಗಿದೆ.
ಈ ಶಿಬಿರಗಳಲ್ಲಿ ವೈದ್ಯಕೀಯ ವಿಭಾಗ, ಶಸ್ತ್ರಚಿಕಿತ್ಸೆ, ಎಲುಬು ಮತ್ತು ಕೀಲು ಚಿಕಿತ್ಸೆ, ಕಿವಿ, ಮೂಗು ಹಾಗೂ ಗಂಟಲು, ಹೆರಿಗೆ ಮತ್ತು ಪ್ರಸೂತಿ, ಚಿಕ್ಕಮಕ್ಕಳ ಚಿಲಿತ್ಸೆ, ಚರ್ಮರೋಗ ಚಿಕಿತ್ಸೆ, ನೇತ್ರ ಚಿಕಿತ್ಸೆ, ಹೃದ್ರೋಗ ಚಿಕಿತ್ಸೆ ಹಾಗೂ ನರ ರೋಗ ಚಿಕಿತ್ಸೆ ವಿಭಾಗಗಳ ವೈದ್ಯರು ತಪಾಸಣೆ ನಡೆಸಲಿದ್ದಾರೆ.
ಶಿಬಿರಾರ್ಥಿಗಳಿಗಾಗಿ ವೈದ್ಯರ ಸಲಹೆ ಮೇರೆಗೆ ಹೆಚ್ಚಿನ ಚಿಕಿತ್ಸೆ ಅಥವಾ ಶಸ್ತ್ರಚಿಕಿತ್ಸೆ ಮಾಡಲು ಸಾಮಾನ್ಯ ವಾರ್ಡಿಗೆ ದಾಖಲಾತಿ, ವೈದ್ಯರು, ಶುಶ್ರೂಷಕರು ಮತ್ತು ಶಸ್ತ್ರಚಿಕಿತ್ಸೆ ಶುಲ್ಕ ಹಾಗೂ ಪ್ರಾಥಮಿಕ ತಪಾಸಣೆಗಳಾದ ಸಿಬಿಸಿ, ಯುರೀನ್ ರೊಟೀನ್, ಆರ್.ಬಿ.ಎಸ್, ಚೆಸ್ಟ್ ಎಕ್ಸ್-ರೆ ಮತ್ತು ಕ್ರಿಟಿನೈನ್ ಸೇವೆಗಳು ಉಚಿತವಾಗಿವೆ. ವಿಶೇಷ ತಪಾಸಣೆ ಮತ್ತು ಚಿಕಿತ್ಸೆಯನ್ನು ರಿಯಾಯಿತಿ ದರದಲ್ಲಿ ಮಾಡಲಾಗುವುದು. ರೋಗಿಗಳು ಹೆಚ್ಚಿನ ಚಿಕಿತ್ಸೆಗೆ ಬರುವಾಗ ತಮ್ಮಲ್ಲಿರುವ ಬಿ.ಪಿ.ಎಲ್., ಅಂತ್ಯೋದಯ, ಯಶಸ್ವಿನಿ ಹಾಗೂ ಆಧಾರ ಕಾರ್ಡುಗಳನ್ನು ತರಬೇಕು. ಅಲ್ಲದೇ, ಚಿಕಿತ್ಸೆಗೆ ಬೇಕಾಗುವ ಔಷಧಿಗಳ ವೆಚ್ಚವನ್ನು ಶಿಬಿರಾರ್ಥಿಗಳೇ ಭರಿಸಬೇಕು.
ಹೆಚ್ಚಿನ ಮಾಹಿತಿ ಮತ್ತು ನೋಂದಣಿಗಾಗಿ ಮೊಬೈಲ್: 9591682224 ಮತ್ತು 8951178777 ಸಂಪರ್ಕಿಸಬಹುದು ಎಂದು ಬಿ.ಎಲ್.ಡಿ.ಇ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ರಾಜೇಶ ಹೊನ್ನುಟಗಿ ಅವರು ಮಾಧ್ಯಮ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.
ಸಚಿವ ಎಂ.ಬಿ. ಪಾಟೀಲ ಜನ್ಮದಿನ ನಿಮಿತ್ತ ಬೃಹತ್ ಉಚಿತ ಆರೋಗ್ಯ ಶಿಬಿರ


