ಸಪ್ತಸಾಗರ ವಾರ್ತೆ, ಮುದ್ದೇಬಿಹಾಳ, ಅ.5 :
ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಸರ್ಕಾರವು ಪಂಚ ಗ್ಯಾರಂಟಿ ಯೋಜನೆಗಳ ಮೂಲಕ ಗಿನ್ನಿಸ್ ದಾಖಲೆ ನಿರ್ಮಿಸಿದೆ. ಆದರೆ, ಕೇಂದ್ರದ ಬಿಜೆಪಿ ಸರ್ಕಾರ ಜಿಎಸ್‌ಟಿ, ಡಿಜಿಟಲ್ ಇಂಡಿಯಾ ಹೆಸರಿನಲ್ಲಿ ಜನರನ್ನು ಲೂಟಿ ಮಾಡುತ್ತಿದೆ ಎಂದು ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಅಧ್ಯಕ್ಷ ಎಚ್.ಎಸ್. ಮಂಜುನಾಥ ಗೌಡ ಗಂಭೀರ ಆರೋಪ ಮಾಡಿದರು.
ಪಟ್ಟಣದಲ್ಲಿ ಆಯೋಜಿಸಲಾಗಿದ್ದ ಯುವ ಕಾಂಗ್ರೆಸ್ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಅವರು, ರಾಜ್ಯ ಸರ್ಕಾರದ ಸಾಧನೆಗಳನ್ನು ಮತ್ತು ಕೇಂದ್ರ ಸರ್ಕಾರದ ವೈಫಲ್ಯಗಳನ್ನು ಕಾರ್ಯಕರ್ತರ ಮುಂದಿಟ್ಟರು.
ನಾವು ಚುನಾವಣೆಗೆ ಮುನ್ನ ನೀಡಿದ್ದ ವಾಗ್ದಾನದಂತೆ, ಐದು ಗ್ಯಾರಂಟಿ ಯೋಜನೆಗಳ ಮೂಲಕ 1 ಲಕ್ಷ ಕೋಟಿ ರೂ. ಗೂ ಅಧಿಕ ಹಣವನ್ನು ನೇರವಾಗಿ ಜನರ ಕೈಗೆ ತಲುಪಿಸಿದ್ದೇವೆ. ಇದು ಕೇವಲ ಭರವಸೆಯಲ್ಲ, ರಾಜ್ಯದ ತಲಾ ಆದಾಯವನ್ನು ಹೆಚ್ಚಿಸಿದೆ. ಜನರ ಬದುಕಿಗೆ ಆಸರೆಯಾದ ಐತಿಹಾಸಿಕ ಕಾರ್ಯಕ್ರಮ. ನಮ್ಮ ಈ ಯೋಜನೆಗಳು ಇಂದು ಬೇರೆ ರಾಜ್ಯಗಳಿಗೂ ಮಾದರಿಯಾಗಿದ್ದು, ಬಿಜೆಪಿಯವರೇ ಇದನ್ನು ಅನುಸರಿಸುವಂತಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಜನರ ಜೇಬಿಗೆ ಬಿಜೆಪಿ ಕತ್ತರಿ
ಕೇಂದ್ರ ಸರ್ಕಾರದ ಆರ್ಥಿಕ ನೀತಿಗಳನ್ನು ತೀವ್ರವಾಗಿ ಟೀಕಿಸಿದ ಅವರು, ಕಳೆದ ಎಂಟು ವರ್ಷಗಳಿಂದ ಶೇ. 18 ಹಾಗೂ ಶೇ. 28ರಷ್ಟು ಜಿಎಸ್‌ಟಿ ವಿಧಿಸಿ ಜನರ ಜೇಬಿಗೆ ಕತ್ತರಿ ಹಾಕಿದ್ದ ಬಿಜೆಪಿಯವರು, ಈಗ ದರ ಇಳಿಸಿ ‘ಜಿಎಸ್‌ಟಿ ಉಳಿತಾಯ ಉತ್ಸವ’ ಎಂದು ಬೆನ್ನು ತಟ್ಟಿಕೊಳ್ಳುತ್ತಿದ್ದಾರೆ. ಇದು ಸಾಧನೆಯಲ್ಲ, ನಾಚಿಕೆಗೇಡಿನ ಸಂಗತಿ. ನಿಜವಾಗಿಯೂ ಅವರಿಗೆ ಜನರ ಮೇಲೆ ಕಾಳಜಿ ಇದ್ದರೆ, ಇಷ್ಟು ವರ್ಷ ಲೂಟಿ ಮಾಡಿದ ಹಣವನ್ನು ವಾಪಸ್ ಕೊಡಲಿ ಎಂದರು.
ಆರೋಗ್ಯ ವಿಮೆಯಂತಹ ಅಗತ್ಯ ಸೇವೆಗಳ ಮೇಲೂ ತೆರಿಗೆ ವಿಧಿಸಿದ್ದ ಇವರು, ನಮ್ಮ ರಾಜ್ಯ ಸರ್ಕಾರದ ನಿರಂತರ ಒತ್ತಾಯದ ಫಲವಾಗಿ ಈಗ ತೆರಿಗೆ ಕಡಿಮೆ ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಡಿಜಿಟಲ್ ಇಂಡಿಯಾ ಹೆಸರಿನಲ್ಲಿ ಖಾಸಗಿ ಕಂಪನಿಗಳಿಗೆ ಅನುಕೂಲ ಮಾಡಿಕೊಟ್ಟು, ಈಗ ಮೊಬೈಲ್ ರಿಚಾರ್ಜ್‌ಗಳ ಮೇಲೆ ಪ್ಲಾಟ್‌ಫಾರ್ಮ್ ಶುಲ್ಕ ಮತ್ತು ಕ್ರೆಡಿಟ್ ಕಾರ್ಡ್ ಬಳಕೆಗೆ ಹೆಚ್ಚುವರಿ ಶುಲ್ಕ ವಿಧಿಸಿ ಲೂಟಿ ಮುಂದುವರಿಸಿದ್ದಾರೆ. ಬ್ಯಾಂಕ್‌ಗಳಲ್ಲಿ ಕನಿಷ್ಠ ಬ್ಯಾಲೆನ್ಸ್ ಮೊತ್ತವನ್ನು ಹೆಚ್ಚಿಸಿ ಬಡವರನ್ನು ಸುಲಿಗೆ ಮಾಡಲಾಗುತ್ತಿದೆ ಎಂದು ಆರೋಪಿಸಿದರು.
ನಾವು ಸಾಮಾಜಿಕ ನ್ಯಾಯದಡಿ ಜಾತಿವಾರು ಹಿಂದುಳಿದಿರುವಿಕೆ ಗುರುತಿಸಲು ಸಮೀಕ್ಷೆ ನಡೆಸಿದರೆ, ಬಿಜೆಪಿ ಅದನ್ನು ರಾಜಕೀಯಕ್ಕಾಗಿ ವಿರೋಧಿಸುತ್ತಿದೆ. ಈ ಎಲ್ಲಾ ಜನವಿರೋಧಿ ನೀತಿಗಳನ್ನು ಜನರಿಗೆ ತಿಳಿಸಿ, ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವಂತೆ ಮಾಡಬೇಕು ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.
ಈ ಸಂದರ್ಭದಲ್ಲಿ ಮುದ್ದೇಬಿಹಾಳ ಶಾಸಕ ಸಿ.ಎಸ್. ನಾಡಗೌಡ, ಕರ್ನಾಟಕ ಯುವ ಕಾಂಗ್ರೆಸ್ ಉಸ್ತುವಾರಿ ನಿಗಮ್ ಭಂಡಾರಿ ಉಪಸ್ಥಿತರಿದ್ದರು.


