ಸಪ್ತ ಸಾಗರ ವಾರ್ತೆ,ವಿಜಯಪುರ, ಅ.7: ವಿಜಯಪುರ ಹೊರವಲಯದ ಮಾನವ ನಿರ್ಮಿತ ಅರಣ್ಯ ಪ್ರದೇಶದಲ್ಲಿ 16 ಕಿ.ಮೀ ಓಡುವ ಮೂಲಕ ವಿಜಯಪುರ ಸೈಕ್ಲಿಂಗ್ ಗ್ರುಪ್ ಸದಸ್ಯರು ಸಚಿವ ಎಂ.ಬಿ.ಪಾಟೀಲ ಅವರ ಹುಟ್ಟುಹಬ್ಬವನ್ನು ವಿಶಿಷ್ಟ ರೀತಿಯಲ್ಲಿ ಆಚರಿಸಿದರು.
ಇಂದು ಬೆಳಗ್ಗೆ 6 ಗಂಟೆಗೆ ಬಿ.ಎಂ. ಪಾಟೀಲ ವೃತ್ತದಿಂದ ಓಟ ಆರಂಭಿಸಿದ ಸದಸ್ಯರು, ಸೋಲಾಪುರ, ಅರಕೇರಿ ರಸ್ತೆ ಮೂಲಕ ಭೂತನಾಳ ಕೆರೆ ಪರಿಸರದಲ್ಲಿ, ಕರಾಡ ದೊಡ್ಡಿ ಅರಣ್ಯದಲ್ಲಿ ಓಡುತ್ತ, ಬಿ.ಎಂ.ಪಾಟೀಲ ವೃತ್ತಕ್ಕೆ ಮರಳಿದರು. ಒಟ್ಟು 16 ಕಿ.ಮೀ ಓಟದಲ್ಲಿ 15 ಕ್ಕೂ ಹೆಚ್ಚು ವಿಸಿಜಿ ಸದಸ್ಯರು ಪಾಲ್ಗೊಂಡಿದ್ದರು.
ಈ ಸಂದರ್ಭದಲ್ಲಿ ಅಧ್ಯಕ್ಷ ಡಾ. ಮಹಾಂತೇಶ ಬಿರಾದಾರ ಮಾತನಾಡಿ, ಸತತ ಬರಗಾಲದ ಈ ಭಾಗಕ್ಕೆ ನೀರಾವರಿ ಕಾರ್ಯಗಳ ಮೂಲಕ ಅರಣ್ಯದ ಜಾಗೃತಿಯ ಜೊತೆಗೆ ಗುಣಮಟ್ಟದ ಶಿಕ್ಷಣವನ್ನು ಒದಗಿಸುವ ಜೊತೆಗೆ ಜಲ ವೃಕ್ಷ, ಶಿಕ್ಷಣ ಈ ಮೂರು ಕ್ಷೇತ್ರದಲ್ಲಿ ಎಂ.ಬಿ. ಪಾಟೀಲ ಅವರ ಕೊಡುಗೆ ಅನನ್ಯವಾಗಿದೆ. ಮುಂದಿನ ಜನಾಂಗದ ಭವಿಷ್ಯದ ದೃಷ್ಟಿಯಲ್ಲಿಟ್ಟುಕೊಂಡು ಕಾರ್ಯ ಮಾಡುವ ಅಪರೂಪದ ಜನನಾಯಕರು. ಅವರ ಹುಟ್ಟುಹಬ್ಬವನ್ನು ವಿಜಯಪುರ ಸೈಕ್ಲಿಂಗ್ ಸದಸ್ಯರು ಬೆವರ ಹನಿಗಳನ್ನು ಹರಿಸಿ, 16 ಕಿ.ಮೀ ದೀರ್ಘ ಓಟವನ್ನು ಓಡುವದರ ಮೂಲಕ ಇಂದಿನ ಯುವ ಸಮುದಾಯಕ್ಕೆ ಮಾದರಿಯಾಗಿದ್ದಾರೆ. ಎಲ್ಲರೂ ಹುಟ್ಟು ಹಬ್ಬವನ್ನು ಜಂಕ್ ಪುಡ್‍ಗಳಿಂದ ಆರೋಗ್ಯಕರವಲ್ಲದ ಕೇಕ್‍ಗಳ ಮೂಲಕ ಪಟಾಕಿ ಇತ್ಯಾದಿಗಳ ಮೂಲಕ ಮಾಲಿನ್ಯ ಆಗುವಂಥ ಆಚರಣೆಗಳನ್ನು ನಿಲ್ಲಿಸಬೇಕು ಎಂಬ ಸಂದೇಶ ಕೂಡ ಇದು ಹೊಂದಿದೆ. ಸಸಿಗಳನ್ನು ನೆಡುವುದು. ಪುಸ್ತಕಗಳನ್ನು ಉಡುಗೊರೆಯಾಗಿ ನೀಡುವುದು. ಅಲ್ಲದೇ, ದೈಹಿಕ ಶ್ರಮದ ಮೂಲಕ ಹುಟ್ಟುಹಬ್ಬವನ್ನು ಆಚರಿಸಬಹುದು ಎಂದು ವಿಸಿಜಿ ತೋರಿಸಿಕೊಟ್ಟಿದ್ದಾರೆ.
16 ಕಿ.ಮೀ ಓಟದಲ್ಲಿ ವಿಸಿಜಿ ಉಪಾಧ್ಯಕ್ಷ ಶಿವನಗೌಡ ಪಾಟೀಲ, ಸದಸ್ಯರಾದ ಸೋಮು ಮಠ ಗುರೂಜಿ, ಸಂತೋಷ ಔರಸಂಗ, ಸಂದೀಪ ಮಡಗೊಂಡ, ಶಿವಾನಂದ ಕುಂಬಾರ, ಅಪ್ಪು ಭೈರಗೊಂಡ, ಡಾ.ಪ್ರವೀಣ ಚೌರ, ವಿಜಯಕುಮಾರ ಪಾಟೀಲ, ಸಿದ್ದು ನಾಯ್ಕೋಡಿ, ರಾಮು ಪರಮಗೊಂಡ, ಅಮೋಘಸಿದ್ದ ಬಸನಾಳ ಪಾಲ್ಗೊಂಡಿದ್ದರು.
ಈ ಸಂದರ್ಭದಲ್ಲಿ ಕೋಟಿ ವೃಕ್ಷ ಅಭಿಯಾನ ಸಂಚಾಲಕ ಡಾ. ಮುರುಗೇಶ ಪಟ್ಟಣಶೆಟ್ಟಿ, ಮಹಾನಗರ ಪಾಲಿಕೆ ಸದಸ್ಯ ಅಶ್ಪಾಕ ಮನಗೂಳಿ, ವಿಜಯಕುಮಾರ ಕೋರಿ, ಗುರುಶಾಂತ ಕಾಪಸೆ, ಸಮೀರ ಬಳಗಾರ, ಶಿವರಾಜ ಬಿರಾದಾರ, ಮುತ್ತಣ್ಣ ಬಿರಾದಾರ, ನವೀದ ನಾಗಠಾಣ ಹಾಜರಿದ್ದರು.
16 ಕಿ.ಮಿ ಓಟದ ಮೂಲಕ ಸಚಿವ ಎಂಬಿಪಿ ಹುಟ್ಟುಹಬ್ಬ ಆಚರಣೆ


