ರಾಜ್ಯಮಟ್ಟದ ಕೃಷಿ ಸಖಿಯರ ಸಂಘ ಅಸ್ತಿತ್ವಕ್ಕೆ

ಸಪ್ತಸಾಗರ ವಾರ್ತೆ, ವಿಜಯಪುರ, ಅ. 7: ನಗರದ ಕನಕದಾಸ ಬಡಾವಣೆಯಲ್ಲಿ ಇರುವ ಕೃಷಿ ತಂತ್ರಜ್ಞರ ಸಭಾಭವನದಲ್ಲಿ ರಾಜ್ಯಮಟ್ಟದ ಕೃಷಿ ಸಖಿಯರ ಸಮಾವೇಶ ಜರುಗಿತು.
ನಿವೃತ್ತ ಸಹ ವಿಸ್ತರಣೆ ನಿರ್ದೇಶಕ ಡಾ. ರವೀಂದ್ರ ಬೆಳ್ಳಿ ಸಮಾವೇಶ ಉದ್ಘಾಟಿಸಿ ಮಾತನಾಡಿ, ಕೃಷಿ ಸಖಿಯರು, ಕೃಷಿ ಇಲಾಖೆ ಹಾಗೂ ರೈತರ ಮಧ್ಯೆ ಕೊಂಡಿಯಾಗಿ ಕೆಲಸವನ್ನು ನಿರ್ವಹಿಸುತ್ತಿದ್ದಾರೆ. ಪಂಚಾಯತ್ ಹಾಗೂ ಇತರೆ ಸಂಸ್ಥೆಯವರು ವಹಿಸಿದ ಜವಾಬ್ದಾರಿಯನ್ನು ಸಮರ್ಪಕವಾಗಿ ಮಾಡುತ್ತಿದ್ದಾರೆ. ಇವರು ಗೌರವಧನದ ಆಧಾರದ ಮೇಲೆ ಕೆಲಸ ನಿರ್ವಹಿಸುತ್ತಿದ್ದು , ಸಂಘಟಿತರಾಗಿ ಹೆಚ್ಚಿನ ಸೇವೆಯನ್ನು ಸಲ್ಲಿಸಲು ಅನುಕೂಲವಾಗುವಂತೆ ಒಂದು ರಾಜ್ಯಮಟ್ಟದ ಸಂಘಟನೆಯನ್ನು ರಚಿಸಿಕೊಳ್ಳುತ್ತಿದ್ದು, ಇದೊಂದು ಉತ್ತಮ ಬೆಳವಣಿಗೆ ಎಂದರು.
ಇದೇ ಸಂದರ್ಭದಲ್ಲಿ ಡಾ. ರವೀಂದ್ರ ಬೆಳ್ಳಿ ಇವರ ಗೌರವಾಧ್ಯಕ್ಷತೆಯಲ್ಲಿ ಜರುಗಿದ ಸಭೆಯಲ್ಲಿ ಬಾಗಲಕೋಟೆ ಜಿಲ್ಲೆಯ ತ್ರಿವೇಣಿ ಉದಂಡ ಅವರನ್ನು ಅಧ್ಯಕ್ಷರನ್ನಾಗಿ, ವಿಜಯಪುರ ಜಿಲ್ಲೆಯ ಚಾಂದಬಿ ಆಲಮೇಲ್ ಅವರು ಉಪಾಧ್ಯಕ್ಷರಾಗಿ, ಬೆಳಗಾವಿ ಜಿಲ್ಲೆಯ ಕಾವೇರಿ ಮಂಗಸೂಳಿ ಕಾರ್ಯದರ್ಶಿಯಾಗಿ, ಸಂಘಟನಾ ಕಾರ್ಯದರ್ಶಿಗಳಾಗಿ ಕೌಸರಬಿ ಬಾಗವಾನ, ಸುನಿತಾ ಬ್ಯಾಹಟ್ಟಿ, ಖಜಾಂಚಿಯಾಗಿ ಧಾರವಾಡ ಜಿಲ್ಲೆಯ ಅನ್ನಪೂರ್ಣ ಪಂಚಾಕ್ಷರಿಮಠ ಅವಿರೋಧವಾಗಿ ಆಯ್ಕೆಯಾದರು.
ಜಿಲ್ಲಾ ಅಧ್ಯಕ್ಷರುಗಳಾಗಿ ವಿಜಯಪುರ ಜಿಲ್ಲೆಯಿಂದ ಜಯಶೀಲಾ ದಾಸರ, ಬಾಗಲಕೋಟೆ ಜಿಲ್ಲೆಯಿಂದ ಹೇಮಾ ಮಠಪತಿ, ಬೆಳಗಾವಿ ಜಿಲ್ಲೆಯಿಂದ ಸಾವಿತ್ರಿ ಕೆಂಚರೆಡ್ಡಿ, ಧಾರವಾಡ ಜಿಲ್ಲೆಯಿಂದ ಬಸಮ್ಮ ಗುದ್ದೆಪ್ಪನವರ ಅವಿರೋಧವಾಗಿ ಆಯ್ಕೆಯಾದರು.
ನೂತನವಾಗಿ ಆಯ್ಕೆಯಾದ ಪದಾಧಿಕಾರಿಗಳನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ನೂತನ ಅಧ್ಯಕ್ಷೆ ತ್ರಿವೇಣಿ ಉದಂಡ ಮಾತನಾಡಿ, ನಾವೆಲ್ಲ ನಮ್ಮ ಮೇಲಾಧಿಕಾರಿಗಳು ವಹಿಸಿಕೊಟ್ಟ ಕೆಲಸಗಳನ್ನು ಕಾಯಾ ವಾಚಾ ಮನಸ್ಸಿನಿಂದ ಪ್ರಾಮಾಣಿಕವಾಗಿ ಮಾಡುತ್ತಿದ್ದೇವೆ. ಆದರೂ ಕೂಡ ಕೆಲವು ಕಡೆಗಳಲ್ಲಿ ನಮ್ಮ ಕೃಷಿ ಸಖಿಯರಿಗೆ ಸಮಸ್ಯೆಗಳಾಗುತ್ತವೆ. ಇದಲ್ಲದೆ, ವಿವಿಧ ಅಧಿಕಾರಿಗಳು ಹೇಳಿಕೊಟ್ಟ ಕೆಲಸಗಳನ್ನು ಪ್ರಾಮಾಣಿಕವಾಗಿ ಮಾಡಿದರೂ ಕೆಲವು ಕಡೆಗಳಲ್ಲಿ ವೇತನ ತಾರತಮ್ಯ, ತಡವಾಗಿ ವೇತನ ಬಟವಡೆ, ಅನಗತ್ಯ ಕಿರುಕುಳ ನಮ್ಮ ಸಖಿಯರಿಗೆ ಆಗುತ್ತಿರುವುದನ್ನು ಕಳೆದ ಒಂದು ವರ್ಷದಿಂದ ಗಮನಿಸುತ್ತಿದ್ದೇವೆ. ಇದೆಲ್ಲದಕ್ಕೆ ಪರಿಹಾರವಾಗಿ, ವಿವಿಧ ಜಿಲ್ಲೆಗಳ ಸಖಿಯರು ಸಮನ್ವಯವಾಗಿ ಕೆಲಸ ಮಾಡಲು ಹಾಗೂ ನಮಗೆ ಕೆಲಸದ ಸಂದರ್ಭದಲ್ಲಿ ಉಂಟಾಗುವ ತೊಂದರೆಗಳನ್ನು ಪರಿಹರಿಸಿಕೊಳ್ಳಲು ಒಂದು ಸಂಘಟನೆ ಮಾಡುವ ಅವಶ್ಯಕತೆಯನ್ನು ಮನಗಂಡು, ನಾವಿಂದು ವಿಜಯಪುರದಲ್ಲಿ ಸೇರಿ ಒಂದು ಸಮಾವೇಶವನ್ನು ಹಮ್ಮಿಕೊಂಡು, ಪದಾಧಿಕಾರಿಗಳ ಆಯ್ಕೆಯನ್ನು ಮಾಡಿಕೊಂಡಿದ್ದೇವೆ ಎಂದರು.
ಈ ಸಮಾವೇಶದಲ್ಲಿ ಧಾರವಾಡ, ಬೆಳಗಾವಿ, ಬಾಗಲಕೋಟೆ, ವಿಜಯಪುರ, ಕೊಪ್ಪಳ ಜಿಲ್ಲೆಯ ಕೃಷಿ, ಪಶುಸಖಿಯರು ಆಗಮಿಸಿದ್ದರು.

Share this