ಸಪ್ತಸಾಗರ ವಾರ್ತೆ, ವಿಜಯಪುರ, ಅ. 8: ಅಂತಾರಾಷ್ಟ್ರೀಯ ದೈತ್ಯ ಕಂಪನಿ ಫಾಕ್ಸ್ ಕಾನ್ ನಗರದ ಬಿಎಲ್.ಡಿ.ಇ ಸಂಸ್ಥೆ ವಚನಪಿತಾಮಹ ಡಾ.ಫ.ಗು.ಹಳಕಟ್ಟಿ ಎಂಜನಿಯರಿಂಗ್ ಕಾಲೇಜಿನಲ್ಲಿ ಎಂಜನಿಯರಿಂಗ್ ಮತ್ತು ಡಿಪ್ಲೋಮಾ ಪಾಸಾದ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ಬೃಹತ್ ಉದ್ಯೋಗ ಮೇಳದಲ್ಲಿ 65 ಜನ ಆಯ್ಕೆಯಾಗಿದ್ದಾರೆ.
ಅಂತಾರಾಷ್ಟ್ರೀಯ ಬೃಹತ್ ಸಂಸ್ಥೆಯಾಗಿರುವ ಫಾಕ್ಸ್ ಕಾನ್ ಜಗತ್ತಿನಲ್ಲಿಯೇ ಐಪೋನ್ ತಯಾರಿಕೆಯಲ್ಲಿ ಅಗ್ರಗಣ್ಯ ಸಂಸ್ಥೆಯಾಗಿದ್ದು, ಈ ಕಂಪನಿಯ ಆಡಳಿತ ಮಂಡಳಿಗೆ ವಿಜಯಪುರ ಹಾಗೂ ಸುತ್ತಲಿನ ಜಿಲ್ಲೆಗಳ ವಿದ್ಯಾರ್ಥಿಗಳಿಗೆ ತಮ್ಮ ಕಂಪನಿಯಲ್ಲಿ ಹೆಚ್ಚಿನ ಅವಕಾಶ ನೀಡಬೇಕು ಎಂದು ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಪಾಟೀಲ ಅವರು ಕೋರಿದ್ದರು. ಈ ಹಿನ್ನೆಲೆಯಲ್ಲಿ ಫಾಕ್ಸ್ ಕಾನ್ ಅಧಿಕಾರಿಗಳು ಖುದ್ದು ವಿಜಯಪುರಕ್ಕೆ ಆಗಮಿಸಿ, ಇದೇ ಮೊದಲ ಬಾರಿಗೆ ಬೆಂಗಳೂರು ಹೊರತು ಪಡಿಸಿ ಉತ್ತರ ಕರ್ನಾಟಕದ ವಿಜಯಪುರ ನಗರದಲ್ಲಿ ಸೆಪ್ಟೆಂಬರ್ 26 ರಂದು ನೇರ ನೇಮಕಾತಿಗಾಗಿ ವಿದ್ಯಾರ್ಥಿಗಳ ಸಂದರ್ಶನ ನಡೆಸಿದ್ದರು. ಈ ಉದ್ಯೋಗ ಮೇಳದಲ್ಲಿ 2024 ಮತ್ತು 2025 ನೇ ಶೈಕ್ಷಣಿಕ ವರ್ಷದಲ್ಲಿ ಬಿ.ಇ ಮತ್ತು ಡಿಪ್ಲೋಮಾ ಪದವಿಯ ಮೆಕ್ಯಾನಿಕಲ್, ಎಲೇಕ್ಟ್ರಾನಿಕ್ಸ್ ಕಮ್ಯೂನಿಕೇಶನ್ ಮತ್ತು ಎಲೇಕ್ಟ್ರಾನಿಕ್ಸ್ ಎಲೆಕ್ಟ್ರಿಕಲ್ಸ್ ವಿಭಾಗಗಳಲ್ಲಿ ತೇರ್ಗಡೆಯಾದ 600ಕ್ಕೂ ಹೆಚ್ಚು ಯುವಕರು ಪಾಲ್ಗೊಂಡಿದ್ದರು. ಈ ಸಂದರ್ಶನದ ಫಲಿತಾಂಶವನ್ನು ಈಗ ಪ್ರಕಟಿಸಲಾಗಿದೆ.
ಫಾಕ್ಸ್ ಕಾನ್ ಕಂಪನಿಯಲ್ಲಿ ಉದ್ಯೋಗಕ್ಕೆ ಆಯ್ಕೆಯಾಗಿರುವ ಒಟ್ಟು 65 ಜನರಲ್ಲಿ ಬಿ.ಎಲ್.ಡಿ.ಇ ಎಂಜಿನಿಯರಿಂಗ್ ಕಾಲೇಜಿನ 32 ಸೇರಿದಂತೆ ವಿಜಯಪುರ ಜಿಲ್ಲೆಯ ಒಟ್ಟು 48 ಜನ ನಾನಾ ಹುದ್ದೆಗಳಿಗೆ ಆಯ್ಕೆಯಾಗಿದ್ದಾರೆ. ಅದೇ ರೀತಿ, ಧಾರವಾಡ, ಬೆಳಗಾವಿ, ಬಾಗಲಕೋಟೆ, ಕಲಬುರಗಿ ಹಾಗೂ ದಾವಣಗೆರೆ ಜಿಲ್ಲೆಗಳ ಒಟ್ಟು 33 ವಿದ್ಯಾರ್ಥಿಗಳು ಉದ್ಯೋಗ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ವಿಶ್ವಖ್ಯಾತಿಯ ಫಾಕ್ಸಕಾನ್ ಕಂಪನಿ ನಡೆಸಿದ ಸಂದರ್ಶನದಲ್ಲಿ ಆಯ್ಕೆಯಾದ ಎಲ್ಲ ವಿದ್ಯಾರ್ಥಿಗಳಿಗೆ ಸಚಿವ ಎಂ. ಬಿ. ಪಾಟೀಲ ಅಭಿನಂದನೆ ಸಲ್ಲಿಸಿದ್ದು, ಅವರ ಭವಿಷ್ಯ ಉಜ್ವಲವಾಗಿರಲಿ ಎಂದು ಶುಭ ಹಾರೈಸಿದ್ದಾರೆ ಎಂದು ಸಚಿವರ ಸಾರ್ವಜನಿಕ ಸಂಪರ್ಕಾಧಿಕಾರಿ ಡಾ. ಮಹಾಂತೇಶ ಬಿರಾದಾರ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬೃಹತ್ ಉದ್ಯೋಗ ಮೇಳದಲ್ಲಿ 65 ಜನ ಆಯ್ಕೆ


