ನ್ಯಾಯಮೂರ್ತಿಗಳ ಮೇಲೆ ಶೂ ಎಸೆತ: ಸಂವಿಧಾನದ ಮೇಲೆ ನಡೆದ ದಾಳಿ- ರಾಜು ಆಲಗೂರ ಖಂಡನೆ

ಸಪ್ತಸಾಗರ ವಾರ್ತೆ ವಿಜಯಪುರ, ಅ. 8 : ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ಮೇಲೆ ಚಪ್ಪಲಿ ಎಸೆತ ಪ್ರಕರಣ ನಡೆದಿರುವುದು ಅತ್ಯಂತ ಒಂದು ರೀತಿ ಸಂವಿಧಾನ ಮೇಲೆ ನಡೆದಿರುವ ದಾಳಿ. ಇದನ್ನು ನಾವು ಕ್ಷಮಿಸುವುದಿಲ್ಲ, ಆರೋಪಿ ಮೇಲೆ ಸೂಕ್ತ ಕ್ರಮಕ್ಕೆ ಆಗ್ರಹಿಸಿ ಅ.೧೬ ರಂದು ವಿಜಯಪುರ ಬಂದ್ ಕರೆ ನೀಡಲಾಗಿದೆ ಎಂದು ಮಾಜಿ ಶಾಸಕ ರಾಜು ಆಲಗೂರ ಹೇಳಿದರು.
ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ವಂತ ಬಲದಿಂದ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಹುದ್ದೆ ಅಲಂಕರಿಸಿದ ಬಿ.ಆರ್. ಗವಾಯಿ ಅವರ ಹುದ್ದೆ ಅಲಂಕರಿಸಿದ ದಿನದಿಂದಲೇ ಅವರ ಮೇಲೆ ಅಪಪ್ರಚಾರ ನಡೆದಿದೆ, ಧಾರ್ಮಿಕ ಬೋಧಕ ಗುರು ಅನೀರುದ್ದ ಆಚಾರ್ಯ ಒಂದು ಹೆಜ್ಜೆ ಮುಂದೆ ಹೋಗಿ ಅವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸುವೆ ಎಂದು ಹೇಳಿದ್ದಾರೆ. ಈ ಹಿಂದೆ ಸಂಘ ಪರಿವಾರ ತನ್ನ ಬೆಂಬಲ‌ಕ್ಕೆ ಇದೆ ಎಂದು ಗೋಡ್ಸೆ ಗಾಂಧೀಜಿ ಅವರನ್ನು ಕೊಂದ. ಇದೇ ರೀತಿ ಬಲ ತನ್ನ ಹಿಂದೆ ಇದೆ ಎಂಬ ಕಾರಣಕ್ಕೆ ಆ ವಕೀಲ ಈ ಕೆಟ್ಟ ಕಾರ್ಯಕ್ಕೆ ಕೈ ಹಾಕಿದ್ದಾನೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಘಟನೆ ನಡೆದ ಎಷ್ಟೋ ತಾಸುಗಳ ನಂತರ ಪ್ರಧಾನಮಂತ್ರಿಗಳು ಖಂಡಿಸಿದರು. ಅದು ಬಿಹಾರ್ ಚುನಾವಣೆ ದೃಷ್ಟಿಕೋನದಿಂದಾಗಿ ಖಂಡನೆ ಮಾಡಿದ್ದಾರೆ ಅಷ್ಟೇ ಎಂದರು.
ದಲಿತರೊಬ್ಬರು ಸುಪ್ರೀಂಕೋರ್ಟ್ ಉನ್ನತ ಹುದ್ದೆ ಅಲಂಕರಿಸಿದ್ದನ್ನು ಸಹಿಸದ ಮನುವಾದಿಗಳೇ ಈ ಷಡ್ಯಂತ್ರ ಮಾಡಿದ್ದಾರೆ ಎಂದರು‌.
ಕೂಡಲೇ ಈ ಪ್ರಕರಣವನ್ನು ಪೊಲೀಸ್ ಇಲಾಖೆ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಳ್ಳಬೇಕು ಎಂದು ಒತ್ತಾಯಿಸಿದರು.

ಸಂಘ ಪರಿವಾರ ಖಂಡನಾ‌ ನಿರ್ಣಯ ಸ್ವೀಕರಿಸಲು ಸವಾಲು
ಸಂಘ ಪರಿವಾರ ನೂರನೇ ವರ್ಷಾಚರಣೆ ಹಿನ್ನೆಲೆಯಲ್ಲಿ ನಾಳೆ ವಿಜಯಪುರದಲ್ಲಿ ಪಥ ಸಂಚಲನ ನಡೆಯಲಿದೆ. ಈ ಪಥ ಸಂಚಲನ ನಡೆದ ನಂತರ ನಡೆಯುವ ಸಭೆಯಲ್ಲಿ ಈ ಘಟನೆ ಕುರಿತಂತೆ ಖಂಡನಾ ನಿರ್ಣಯ ಸ್ವೀಕರಿಸುವಂತೆ ಸವಾಲು ಹಾಕಿದರು.
ನಾವೆಲ್ಲರೂ ಹಿಂದೂ, ಹಿಂದೂ ಎಂದು ಹೇಳುವ ಸಂಘ ಪರಿವಾರ ಈ ಘಟನೆಯನ್ನು ಖಂಡಿಸಿ ತನ್ನ ಖಂಡನಾ ನಿರ್ಣಯ ಪ್ರಕಟಿಸಲಿ ಎಂದು ಆಲಗೂರ ಬಹಿರಂಗ ಸವಾಲು ಹಾಕಿದರು.
ಚಪ್ಪಲಿ ಎಸೆದ ವ್ಯಕ್ತಿ ಸಂಘ ಪರಿವಾರ ಹಿನ್ನೆಲೆ ವ್ಯಕ್ತಿ, ಹೀಗಾಗಿ ಸಂಘ ಪರಿವಾರವೇ ಈ ಘಟನೆ ಹೊಣೆ ಹೊತ್ತು ಸಂಘ ಪರಿವಾರ ದೇಶದ ಕ್ಷಮೆ ಯಾಚಿಸಬೇಕು ಎಂದು ಒತ್ತಾಯಿಸಿದರು.
ಹಿರಿಯ ಮುಖಂಡ ಅಬ್ದುಲ್ ಹಮೀದ್ ಮುಶ್ರೀಫ್ ಮಾತನಾಡಿ, ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳ ಮೇಲೆ ಚಪ್ಪಲಿ ಎಸೆದ ವ್ಯಕ್ತಿ ಆರಾಮ ಆಗಿ ಮನೆಯಲ್ಲಿದ್ದಾನೆ, ನಾಳೆ ಈ ವ್ಯಕ್ತಿ ಪ್ರಧಾನಮಂತ್ರಿಗೂ ಚಪ್ಪಲಿ ಎಸೆಯುತ್ತಾನೆ. ಆತನನ್ನು ಸುಮ್ಮನೆ ಬಿಡುತ್ತೀರಾ? ಹೀಗಾಗಿ ನ್ಯಾಯಾಲಯದ ಮುಂದೆಯೇ ಆತನನ್ನು ಗಲ್ಲಿಗೇರಿಸಿ ಇಲ್ಲವೇ ಜಾಮೀನು ದೊರಕದಂತೆ ಮಾಡಿ ಜೈಲಿಗೆ ಅಟ್ಟಿ, ದಲಿತರೊಬ್ಬರು ಉನ್ನತ ಹುದ್ದೆ ಅಲಂಕರಿಸಬಾರದು ಎಂಬ ಹೊಟ್ಟೆಕಿಚ್ಚಿನ ಶಕ್ತಿಗಳು ಈ ಕಾರ್ಯ ಮಾಡಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅಹಿಂದ ಮುಖಂಡ ಸೋಮನಾಥ ಕಳ್ಳಿಮನಿ ಮಾತನಾಡಿ, ಈ ಘಟನೆ ಅತ್ಯಂತ ಖಂಡನಾರ್ಹ, ಈ ಘಟನೆಯನ್ನು ಮನುವಾದಿ ಮನಸ್ಥಿತಿಯ ಬಿಜೆಪಿ, ಕಾಂಗ್ರೆಸ್ ನಲ್ಲಿರುವ ಕೆಲವು ಮನಸ್ಥಿತಿ ನಾಯಕರು ಸಹ ಕಟುವಾಗಿ ಟೀಕಿಸಿಲ್ಲ. ಇಂದಿಗೂ ದಲಿತ ಬಾಂಧವರಿಗೆ ದೇಗುಲಗಳಿಗೆ ಪ್ರವೇಶವಿಲ್ಲ, ದಲಿತರು ಉನ್ನತ ಹುದ್ದೆಯಲ್ಲಿದ್ದನ್ನು ಸಹಿಸದೇ ಇರುವವರು ಈ ಘಟನೆಗೆ ಪ್ರೋತ್ಸಾಹಿಸಿದ್ದಾರೆ ಎಂದರು.
ಮುಖಂಡ ಎಸ್.ಎಂ. ಪಾಟೀಲ ಗಣಿಹಾರ ಮಾತನಾಡಿ, ಈ ಘಟನೆಯ ಹಿಂದೆ ಸಂಘ ಪರಿವಾರದ ಕೈವಾಡ ಇದೆ. ಈ ಹಿಂದೆ ಯೋಜನಾ ಆಯೋಗ ರದ್ದುಗೊಳಿಸಿ ತನ್ನ ನೀತಿ ಜಾರಿಗೊಳಿಸಲು ನೀತಿ ಆಯೋಗ ರಚಿಸಿದೆ. ಕೂಡಲೇ ಸಂಘ ಪರಿವಾರದ ಪ್ರಮುಖರನ್ನು ಈ ಘಟನೆಯಲ್ಲಿ ಬಂಧಿಸಬೇಕು ಎಂದು ಒತ್ತಾಯಿಸಿದರು.
ಮುಖಂಡರಾದ ರಮೇಶ ಆಸಂಗಿ, ಅಭಿಷೇಕ ಚಕ್ರವರ್ತಿ, ಅಡಿವೆಪ್ಪ ಸಾಲಗಲ್ಲ, ನಾಗರಾಜ ಲಂಬು, ಅಶೋಕ ಚಲವಾದಿ, ಆನಂದ ಔದಿ, ಶ್ರೀನಾಥ್ ಪೂಜಾರಿ, ಪ್ರಭುಗೌಡ ಪಾಟೀಲ, ಸಿದ್ದು ರಾಯಣ್ಣವರ, ಇರ್ಫಾನ್ ಶೇಖ್, ಸಂತೋಷ ಶಹಾಪೂರ, ಮಹಾದೇವ ರಾವಜಿ, ಫಯಾಜ್ ಕಲಾದಗಿ, ವಸಂತ ಹೊನಮೋಡೆ, ಬಾಬು ಮಿಲ್ಲೇದಾರ, ಅಕ್ಷಯ ಅಜಮನಿ ಮೊದಲಾದವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Share this