ಜನಕಲ್ಯಾಣ ಸೇವೆಗಳು ಅರ್ಹರನ್ನು ತಲುಪಲಿ: ಸಚಿವ ಶಿವಾನಂದ ಪಾಟೀಲ

ಸಪ್ತಸಾಗರ ವಾರ್ತೆ,ಬಸವನಬಾಗೇವಾಡಿ, ಅ. 11:
ಪ್ರಸಕ್ತ ಸಂದರ್ಭದಲ್ಲಿ ಬಡ ಜನರ ಕಲ್ಯಾಣಕ್ಕೆ ಸರ್ಕಾರ ಅನೇಕ ಸೇವೆಗಳನ್ನು ಒದಗಿಸುತ್ತಿದ್ದು, ಅರ್ಹರಿಗೆ ತಲುಪಬೇಕಿದೆ. ಇದರ ಭಾಗವಾಗಿ ಜನರ ಆರೋಗ್ಯ ಸೇವೆಗಾಗಿ ಇ-ಶ್ರಮ ಕಾರ್ಡ್ ಹಾಗೂ ಆಯುಷ್ಮಾನ್ ಭಾರತ ಕಾರ್ಡ್ ವಿತರಣೆ ಶಿಬಿರ ಹಾಗೂ ಉಚಿತ ನೋಂದಣಿ ಕಾರ್ಯ ನಡೆಯುತ್ತಿದೆ. ಅರ್ಹರಿಗೆ ಸರ್ಕಾರಿ ಸೌಲಭ್ಯ ತಲುಪಿಸುವ ಕೆಲಸವನ್ನು ರಾಷ್ಟ್ರೀಯ ಬಸವ ಸೈನ್ಯ ಮಾಡುತ್ತಿರುವುದು ಶ್ಲಾಘನೀಯ ಎಂದು ಜವಳಿ, ಕಬ್ಬು ಅಭಿವೃದ್ಧಿ, ಸಕ್ಕರೆ, ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಹೇಳಿದರು.
ಶನಿವಾರ ಪಟ್ಟಣದ ಇಂಗಳೇಶ್ವರ ರಸ್ತೆಯಲ್ಲಿನ ಯಲ್ಲಮ್ಮದೇವಿ ದೇವಸ್ಥಾನದಲ್ಲಿ ರಾಷ್ಟ್ರೀಯ ಬಸವಸೈನ್ಯ ಹಾಗೂ ಪುಣೆಯ ನಮ್ಮವರ ಆಶ್ರಯ ಕಲ್ಯಾಣ ಸಂಘದ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಇ-ಶ್ರಮ ಕಾರ್ಡ ಹಾಗೂ ಆಯುಷ್ಮಾನ ಭಾರತ ಕಾರ್ಡಗಳ ಉಚಿತ ನೋಂದಣಿ ಹಾಗೂ ವಿತರಣಾ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದ ಸಚಿವರು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೈತರು, ಬಡ ಕೂಲಿಕಾರ್ಮಿಕರಿಗೆ ಅನೇಕ ಸೌಲಭ್ಯಗಳನ್ನು ಒದಗಿಸುತ್ತಿದೆ. ಆರೋಗ್ಯ ಸೇವೆಗಾಗಿ ಆಯುಷ್ಮಾನ ಭಾರತ ಯೋಜನೆಯಿಂದ ಯಾವುದೇ ಶಸ್ತ್ರಚಿಕಿತ್ಸೆ ಇದ್ದರೂ ಸುಮಾರು 5 ಲಕ್ಷ ರೂ. ವರೆಗಿನ ಆಸ್ಪತ್ರೆ ವೆಚ್ಚವನ್ನು ಸರ್ಕಾರವೇ ಭರಿಸಲಿದೆ. ಆದರೆ ಅರ್ಹರಿಗೆ ಇದರ ಸೌಲಭ್ಯ ಸಿಗಬೇಕು ಎಂದರು.
ಇ-ಶ್ರಮ ಕಾರ್ಡದಿಂದ ಕಾರ್ಮಿಕರಗೆ ಅನೇಕ ಸೌಲಭ್ಯಗಳಿದ್ದು, ಸರ್ಕಾರ ಅನುಷ್ಠಾನ ಗೊಳಿಸುವ ಬಡವರ ಪರ ಯೋಜನೆಗಳನ್ನು ಅರ್ಹರಿಗೆ ಮುಟ್ಟಿಸುವ ಕೆಲಸವನ್ನು ರಾಷ್ಟ್ರೀಯ ಬಸವ ಸೈನ್ಯ ಸಂಘಟನೆ ಮಾಡುತ್ತಿರುವುದು ಶ್ಲಾಘನೀಯ ಎಂದರು.
ಈ ಸಂದರ್ಭದಲ್ಲಿ ರಾಷ್ಟ್ರೀಯ ಬಸವಸೈನ್ಯದ ಸಂಸ್ಥಾಪಕ ಅಧ್ಯಕ್ಷ ಶಂಕರಗೌಡ ಬಿರಾದಾರ, ಮುಖಂಡರಾದ ಸಂಗಮೇಶ ಓಲೇಕಾರ, ಶ್ರೀಕಾಂತ ಕೊಟ್ರಶೆಟ್ಟಿ, ಪ್ರಶಾಂತ ಮುಂಜಾನೆ, ಮನ್ನಾನ ಶಾಬಾದಿ, ಸಂಗಮೇಶ ಜಾಲಗೇರಿ, ನಮ್ಮವರ ಆಶ್ರಯ ಕಲ್ಯಾಣ ಸಂಘದ ಅಧ್ಯಕ್ಷ ಬಸವರಾಜ ಹಿರೇಮಠ, ಸಂಚಾಲಕ ಬಸವರಾಜ ಪಟ್ಟಣಶೆಟ್ಟಿ, ಎಂ. ಝಾನ್ಸಿ ರಾವ್, ರೂಪ ಪಟ್ಟಣಶೆಟ್ಟಿ, ಮಹೇಶ, ಪಿ‌.ಕವಿತಾ, ಎಂ.ಸಂಜಯ ಅಷ್ಟಪುತ್ರೆ, ರಶ್ಮಿ ಅಷ್ಟಪುತ್ರೆ, ಜೀವಂತ ಎಂ.ಜಟ್ಟಿಂಗ ಮಾಲಗಾರ, ವಿಜಯ ಅವಟಿ, ವಸೀಮ್ ಮಕಾಂದಾರ, ಸಲೀಂ ಸಯ್ಯದ, ಮಂಜುನಾಥ ಜಾಲಗೇರಿ, ಸಂಗಮೇಶ ಬಿದರಿ, ನಿಂಗಪ್ಪ ಅವಟಿ, ಸಂತೋಷ ಕುಳಗೇರಿ, ಮಲ್ಲು ಬನಾಸಿ, ಶಂಕರ ರಜಪೂತ ಸೇರಿದಂತೆ ಇತರರು ಉಪಸ್ಥಿತರಿದ್ದರು.

Share this