ಸಪ್ತಸಾಗರ ವಾರ್ತೆ, ವಿಜಯಪುರ, ಅ. 13:
ಜಿಲ್ಲಾ ಬಿಜೆಪಿ ರೈತ ಮೋರ್ಚಾ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಭೇಟಿ ಮಾಡಿ ಬೆಳೆ ಪರಿಹಾರವನ್ನು ಕೂಡಲೇ ನೀಡಬೇಕೆಂದು ಸೋಮವಾರ ಸಂಜೆ ಮನವಿ ಸಲ್ಲಿಸಲಾಯಿತು.
ರಾಜ್ಯದಲ್ಲಿ ಯಾವುದೇ ಜಿಲ್ಲೆಯಲ್ಲಿ ಆಗದಷ್ಟು ವಾಡಿಕೆಗಿಂತ ಹೆಚ್ಚಿನ ಮಳೆ ವಿಜಯವುರ ಜಿಲ್ಲೆಯಲ್ಲಿ ಆಗಿದೆ ವರದಿಗಳ ಪ್ರಕಾರ ವಾಡಿಕೆ ಗಿಂತ ಶೇ 150 ಕ್ಕೂ ಹೆಚ್ಚು ಮಳೆಯಾಗಿದೆ ಎಂದು ತಿಳಿದು ಬಂದಿರುತ್ತದೆ. ವಿಜಯಪುರ ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡಿದ 7.50 ಲಕ್ಷ ಹೆಕ್ಟರ್ ಪ್ರದೇಶದ ಬೆಳೆ ಸಂಪೂರ್ಣ ನಾಶವಾಗಿದೆ. ಮೂರು ತಿಂಗಳಿನಿಂದ ನಿರಂತರ ಮಳೆಯಿಂದಾಗಿ ಆಗಿರುವ ಬೆಳೆ ಹಾನಿಯನ್ನು ಪ್ರಕೃತಿ ವಿಕೋಪದಿಂದ ಆಗಿರುವ ಬೆಳೆಹಾನಿ ಎಂದು ಪರಿಗಣಿಸಿ ಸರಕಾರಕ್ಕೆ ನೈಜ ಮತ್ತು ವಾಸ್ತವ ವರದಿಯನ್ನು ಸಲ್ಲಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ. “ಇದು ಭೀಮಾನದಿಯಿಂದ ಆಗಿರುವ ಪ್ರವಾಹ ಹಾಗೂ ಪ್ರಕೃತಿ ವಿಕೋಪದಿಂದ ಆಗಿರುವ ಹಾನಿ” ಒಂದಿಬ್ಬರು ತಳಮಟ್ಟದ ಅಧಿಕಾರಿಗಳನ್ನು ರೈತರ ಹೊಲಗಳಿಗೆ ಕಳುಹಿಸಿ ಸಂಪೂರ್ಣ ಬೆಳ ಹಾನಿಯ ಸಮೀಕ್ಷೆಯನ್ನು ಕಾಲಮಿತಿಯಲ್ಲಿ ಜಿಪಿಎಸ್ ಮೂಲಕ ಮಾಡಲು ಸಾಧ್ಯವಿಲ್ಲ. ಜಿಲ್ಲಾಧಿಕಾರಿಗಳು ನೇಮಿಸಿರುವ ಅಧಿಕಾರಿಗಳು ಪ್ರತಿ ತಾಲೂಕಿನಲ್ಲಿ ಒಂದೆರಡು ಹಳ್ಳಿಗಳ ಸಂಪೂರ್ಣ ಸಮೀಕ್ಷೆ ನಡೆಸಿ ಪಕೃತಿ ವಿಕೋಪದಿಂದಾದ ನೈಜ ಹಾನಿಯ ಬಗ್ಗೆ, ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿದೆ. ನಿರಂತರ ಮಳೆಯಿಂದಾಗಿರುವ ಬೆಳೆ ಹಾನಿಯ ನೈಜತೆಯನ್ನು ಮುಚ್ಚಿಟ್ಟು ಸಂಕಟದಲ್ಲಿರುವ ರೈತರ ಜೊತೆ ಚೆಲ್ಲಾಟ ಆಡದಂತೆ ಜಿಲ್ಲಾ ಆಡಳಿತಕ್ಕೆ ಈ ಮೂಲಕ ಎಚ್ಚರಿಕೆ ನೀಡುತ್ತಿದ್ದೇವೆ. ಈ ಕೂಡಲೇ ವಿಜಯಪುರ ಜಿಲ್ಲೆಯ ರೈತರು ಬೆಳೆದ ಸುಮಾರು 7.50 ಲಕ್ಷ ಹೆಕ್ಟೇರ್ ಪ್ರದೇಶದ ಬೆಳೆಯನ್ನು ಪ್ರಕೃತಿ ವಿಕೋಪದಿಂದಾದ ಸಂಪೂರ್ಣ ನಷ್ಟವೆಂದು ಘೋಷಿಸಿ ಸರ್ಕಾರಕ್ಕೆ ಕೂಡಲೇ ವರದಿಯನ್ನು ಸಲ್ಲಿಸಬೇಕು ಎಂದು ಮನವಿಯಲ್ಲಿ ಕೇಳಿಕೊಳ್ಳಲಾಗಿದೆ.
ಪರಿಹಾರವನ್ನು ನಾವು ಸರ್ಕಾರಕ್ಕೆ ಕೇಳುತ್ತಿದ್ದೇವೆಯೇ ಹೊರತು ಜಿಲ್ಲಾಡಳಿತಕ್ಕಲ್ಲ. ಪರಿಹಾರ ಎಷ್ಟು ಕೊಡುತ್ತಾರೆ ಎನ್ನುವುದನ್ನು ಸರ್ಕಾರ ಮಟ್ಟದಲ್ಲಿ ತೀರ್ಮಾನಿಸಲಿ. ಮೊದಲು ವಾಸ್ತವ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಬೇಕು. ಪ್ರತಿ ಗ್ರಾಮ, ಪ್ರತಿ ಗ್ರಾಮ ಪಂಚಾಯತ್ ಪ್ರತಿ ರೈತ ಸಂಪರ್ಕ ಕೇಂದ್ರಗಳಲ್ಲಿ ಬೆಳೆಹಾನಿಗೀಡಾದ ಎಲ್ಲಾ ರೈತರ ಪಟ್ಟಿ ಲಗತ್ತಿಸಬೇಕು. ಎಲ್ಲಿಯವರೆಗೆ ಈ ಬೇಡಿಕೆ ಈಡೇರುವುದಿಲ್ಲವೋ ಅಲ್ಲಿಯವರೆಗೆ ರೈತರು ಬೀದಿಗಿಳಿದು ಹೋರಾಟ ಮಾಡಲು ಸಿದ್ಧರಾಗಿದ್ದೇವೆ. ಸಂಕಷ್ಟದಲ್ಲಿರುವ ರೈತರಿಗೆ ಸಹಾಯ ಮಾಡುವುದು ಅಧಿಕಾರಿಗಳ ಆದ್ಯ ಕರ್ತವ್ಯ. ಸಹಾಯ ಮಾಡುವಂತೆ ಕೇಳುವುದು ರೈತರ ಕಾನೂನು ಬದ್ಧ ಹಕ್ಕು. ಈ ನಮ್ಮ ಮನವಿಯನ್ನು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸಬೇಕು. ನಿರ್ಲಕ್ಷ್ಯ ತೋರಿದಲ್ಲಿ ರೈತರಿಗೆ ಅನ್ಯಾಯ ಮಾಡುವ ಪ್ರಯತ್ನ ನಡೆದಲ್ಲಿ ಕಾನೂನನ್ನು ಮೀರಿ ಹೋರಾಟಕ್ಕೆ ಇಳಿಯಬೇಕಾಗುತ್ತದೆ. ಶಾಂತಿಭಂಗವಾದಲ್ಲಿ ಅದಕ್ಕೆ ಜಿಲ್ಲಾಡಳಿತವೇ ಹೊಣೆಯಾಗುತ್ತದೆ ವಿನ: ಪ್ರತಿಭಟನೆಗೆ ಇಳಿದ ರೈತರನ್ನು ಹೊಣೆ ಮಾಡಲು ಸಾಧ್ಯವಿಲ್ಲವೆಂದು ಈ ಮೂಲಕ ಎಚ್ಚರಿಕೆ ನೀಡುತ್ತಿದ್ದೇವೆ. ಕೂಡಲೇ ಬೇಡಿಕೆ ಈಡೇರಿಸದಿದ್ದಲ್ಲಿ ಆಯಾ ಗ್ರಾಮ. ಗ್ರಾಮ ವಂಚಾಯತ್, ಹೋಬಳಿ ಹಾಗೂ ತಾಲೂಕಾ ಕೇಂದ್ರಗಳಲ್ಲಿರುವ ಸರ್ಕಾರಿ ಕಛೇರಿಗಳ ಮುಂದೆ ಪ್ರತಿಭಟನೆ ಮತ್ತು ಆಯಾ ಗ್ರಾಮಗಳಲ್ಲಿ ಹಾಯ್ದು ಹೋಗುವ ಮುಖ್ಯ ರಸ್ತೆಗಳಲ್ಲಿ ರಸ್ತೆ ತಡೆ ನಡೆಸುವುದರ ಮೂಲಕ ಬೇಡಿಕೆ ಈಡೇರುವವರೆಗೆ ನಿರಂತರ ಹೋರಾಟ ನಡೆಸುವುದಾಗಿ ಈ ಮೂಲಕ ಸರ್ಕಾರಕ್ಕೆ ಹಾಗೂ ಜಿಲ್ಲಾಡಳಿತಕ್ಕೆ ತಿಳಿಯಪಡಿಸುತ್ತಿದ್ದೇವೆ. ಹೋರಾಟದ ಸಂದರ್ಭದಲ್ಲಿ ಪೋಲಿಸ್ ಅಧಿಕಾರಿಗಳು ರೈತರ ಮೇಲೆ ದರ್ಪ ತೋರುವುದಾಗಲಿ, ಲಾಠಿ ಎತ್ತುವುದಾಗಲಿ ಹಾಗೂ ಹಿಂಸೆಗೆ ಪ್ರಚೋದನೆ ನೀಡುವ ಕೆಲಸ ಮಾಡಿದಲ್ಲಿ ರೈತರು ತಕ್ಕ ಪ್ರತ್ಯುತ್ತರವನ್ನು ನೀಡಬೇಕಾಗುತ್ತದೆ ಎಂದು ವಿನಮ್ರವಾಗಿ ಎಚ್ಚರಿಸುತ್ತಿದ್ದೇವೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಈ ಸಂದರ್ಭದಲ್ಲಿ ಸಂಸದ ರಮೇಶ ಜಿಗಜಿಣಗಿ, ಮಾಜಿ ಶಾಸಕ, ರೈತ ಮೋರ್ಚಾ ರಾಜ್ಯ ಅಧ್ಯಕ್ಷ ಎ.ಎಸ್. ಪಾಟೀಲ ನಡಹಳ್ಳಿ, ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ, ಮಾಜಿ ಸಚಿವ ಎಸ್.ಕೆ. ಬೆಳ್ಳುಬ್ಬಿ. ಮಾಜಿ ಶಾಸಕರಾದ ಸೋಮನಗೌಡ ಪಾಟೀಲ ಸಾಸನೂರ, ರಮೇಶ ಭೂಸನೂರ, ಮುಖಂಡರಾದ ವಿಜುಗೌಡ ಪಾಟೀಲ, ಸಂಜಯ ಐಹೊಳೆ, ಈರಣ್ಣ ರಾವೂರ್, ವಿಜಯ ಜೋಶಿ, ವಿಕಾಸ ಪದಕಿ ಮತ್ತಿತರರು ಇದ್ದರು.
ತ್ವರಿತವಾಗಿ ಬೆಳೆ ಹಾನಿ ಪರಿಹಾರ ನೀಡಲು ಬಿಜೆಪಿ ರೈತ ಮೋರ್ಚಾ ನಿಯೋಗ ಜಿಲ್ಲಾಧಿಕಾರಿಗಳಿಗೆ ಮನವಿ


