ಕನ್ಹೇರಿ ಶ್ರೀಗಳ ಮೇಲಿನ ನಿಷೇಧ ಹಿಂಪಡೆಯದಿದ್ದರೆ ವಿಜಯಪುರ ಬಂದ್ ಗೆ ಕರೆ

ಸಪ್ತಸಾಗರ ವಾರ್ತೆ, ವಿಜಯಪುರ, ಅ. 16: ಸಮಾಜದಲ್ಲಿ ನಡೆಯುತ್ತಿರುವ ಘಟನಾವಳಿಗಳನ್ನು ಯಥಾವತ್ತಾಗಿ ವಿವರಿಸಿದ್ದಕ್ಕೆ ಶ್ರೀ ಕನೇರಿ ಮಠದ ಶ್ರೀ ಅದೃಶ್ಯ ಕಾಡಸಿದ್ದೇಶ್ವರ ಮಠದ ಸ್ವಾಮೀಜಿಗಳಿಗೆ ವಿಜಯಪುರಕ್ಕೆ ಬರದಂತೆ ಜಿಲ್ಲಾಡಳಿತ ನಿಷೇಧ ಹೇರಿರುವುದನ್ನು ಹಿಂಪಡೆಯದಿದ್ದರೆ ವಿಜಯಪುರದ ಬಂದ್ ಗೆ ಕರೆ ನೀಡಬೇಕಾಗುತ್ತದೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಎಚ್ಚರಿಸಿದ್ದಾರೆ.
ರಾಜಕೀಯ ಪ್ರಾಬಲ್ಯ ಸಾಧಿಸಲು, ವೋಟ್ ಬ್ಯಾಂಕ್ ರಾಜಕಾರಣವನ್ನು ಧಿಕ್ಕರಿಸಲು ಅವರು ಮಾತನಾಡಿದ ಕಾರಣ, ಅವರ ಮೇಲೆ ಈ ಕ್ರಮ ಜರುಗಿಸಲಾಗಿದೆ. ಆತ್ಮನಿರ್ಭರ ಸಮಾಜವನ್ನು ಸ್ಥಾಪಿಸಲು ಅನೇಕ ಉಪಕ್ರಮಗಳನ್ನು ಪರಿಚಯಿಸಿ ಎಲೆಮರಿಕಾಯಿಯಂತೆ ದುಡಿಯುತ್ತಿರುವ ಸರ್ವಸಂಗ ಪರಿತ್ಯಾಗಿಗಳ ಮೇಲೆ ಸರ್ಕಾರ ಕ್ರಮ ಜರುಗಿಸಿದೆ.
ಪ್ರಜೆಗಳ ವಾಕ್ ಸ್ವಾತಂತ್ರ್ಯ, ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಕೆಲಸವನ್ನು ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ. ಒಂದೆಡೆ, ‘ಮೊಹಬ್ಬತ್ ಕಿ ದುಕಾನ್’ ಎಂದು ಸಮ ಸಮಾಜದ ಬಗ್ಗೆ ಪುಂಖಾನುಪುಂಖವಾಗಿ ಮಾತನಾಡುವವರು ಪೊಲೀಸರನ್ನು, ಜಿಲ್ಲಾಡಳಿತವನ್ನು ಉಪಯೋಗಿಸಿಕೊಂಡು ವಾಕ್ ಸ್ವಾತಂತ್ರ್ಯಹರಣ ಮಾಡುತ್ತಿರುವುದು ಹೇಯ ಹಾಗೂ ಖಂಡನೀಯ. ಇದು ಪ್ರಜಾಪ್ರಭುತ್ವದ ಅಣಕ ಎಂದರೆ ತಪ್ಪಾಗಲಾರದು. ಸರ್ಕಾರ ಕೂಡಲೇ ಈ ನಿಷೇಧವನ್ನು ವಾಪಸ್ ಪಡೆಯಬೇಕು. ಈ ರೀತಿಯಾದ ನಿರಂಕುಶ ಧೋರಣೆಯನ್ನು ಕೂಡಲೇ ಕೈಬಿಡಬೇಕು.
ಒಂದು ವೇಳೆ, ಸ್ವಾಮೀಜಿಗಳಿಗೆ ನಿಷೇಧ ಹೇರಿದರೆ, ವಿಜಯಪುರದ ಬಂದ್ ಗೆ ಕರೆ ನೀಡಬೇಕಾಗುತ್ತದೆ ಎಂದು ಎಕ್ಸ ಖಾತೆಯಲ್ಲಿ ಟ್ವಟ್ ಮೂಲಕ ಸರ್ಕಾರಕ್ಕೆ ಎಚ್ಚರಿಸಿದ್ದಾರೆ.

Share this