ಸಪ್ತಸಾಗರ ವಾರ್ತೆ ವಿಜಯಪುರ,ಅ. 16 : ಸರಕಾರದ ಯೋಜನೆಗಳ ಲಾಭ ಪಡೆದುಕೊಂಡು, ಪ್ರತಿಯೊಬ್ಬರೂ ಯಶಸ್ಸನ್ನು ಹೊಂದಿ, ಉದ್ಯಮಿಗಳಾಗುವುದರ ಜೊತೆಗೆ ಬೇರೆಯವರಿಗೂ ಉದ್ಯೋಗವನ್ನು ನೀಡುವಂತವರಾಗಿ ಎಂದು ನಿವೃತ್ತ ಕೃಷಿ ಸಹ ವಿಸ್ತರಣೆ ನಿರ್ದೇಶಕ ಡಾ. ರವೀಂದ್ರ ಬೆಳ್ಳಿ ಕರೆ ನೀಡಿದರು.
ನಗರ ಹೊರ ವಲಯದ ಹಿಟ್ನಳ್ಳಿಯ ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ಪ್ರಧಾನ ಮಂತ್ರಿ ಕಿರು ಆಹಾರ ಸಂಸ್ಕರಣೆಯ ಯೋಜನೆಯ ಫಲಾನುಭವಿಗಳಿಗೆ ಹಮ್ಮಿಕೊಂಡ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕೃಷಿಯಲ್ಲಿ ಉದ್ಯಮಿಗಳಾಗಲು ಅನೇಕ ಅವಕಾಶಗಳಿವೆ. ಆಡು, ಕುರಿ ಸಾಕಣೆ, ಹೈನೋದ್ಯಮ, ಎರೆಹುಳು ಸಾಕಾಣಿಕೆ, ಜೇನು ಕೃಷಿ, ಅಣಬೆ ಕೃಷಿ, ಕೃಷಿ ನರ್ಸರಿ ಸ್ಥಾಪನೆ ,ಕೃಷಿ ಯಂತ್ರೋಪಕರಣ ಗೃಹಿಣಿಯರಿಗಾಗಿ ರೊಟ್ಟಿ ತಯಾರಿಕೆ, ಉಪ್ಪಿನಕಾಯಿ ತಯಾರಿಕೆ, ಅಗರಬತ್ತಿ ತಯಾರಿಕೆ ವಿವಿಧ ಹಣ್ಣುಗಳಿಂದ ಜ್ಯೂಸ್ ತಯಾರಿಕೆಯಂತಹ ಹಲವಾರು ಗೃಹ ಉದ್ದಿಮೆ ಸ್ಥಾಪನೆಗೆ ವಿಪುಲ ಅವಕಾಶಗಳಿವೆ. ಇವುಗಳ ಸದ್ಬಳಕೆ ಮಾಡಿಕೊಳ್ಳಬೇಕೆಂದರು.
ಲೀಡ್ ಬ್ಯಾಂಕ್ ವ್ಯವಸ್ಥಾಪಕ ಸಿದ್ದಯ್ಯ.ಬಿ ಮಾತನಾಡಿ, ಈ ಯೋಜನೆ ಅಡಿಯಲ್ಲಿ ಬ್ಯಾಂಕುಗಳಿಂದ ಸಾಲ ಸೌಲಭ್ಯ ಮತ್ತು ಸಹಾಯಧನದ ಸೌಲಭ್ಯಗಳಿದ್ದು ಯಾವುದೇ ಬ್ಯಾಂಕ್ ನಲ್ಲಿ ಈ ಯೋಜನೆ ಅಡಿಯಲ್ಲಿ ಸಾಲ ಪಡೆಯುವಾಗ ತಾಂತ್ರಿಕ ತೊಂದರೆ ಉಂಟಾದಲ್ಲಿ ತಮ್ಮನ್ನು ಸಂಪರ್ಕಿಸಬೇಕೆಂದರು.
ಈ ಮೂಲಕ ವಿವಿಧ ಉದ್ಯಮಗಳನ್ನು ಸ್ಥಾಪಿಸಿ ಆರ್ಥಿಕವಾಗಿ ಲಾಭ ಹೊಂದಬೇಕೆಂದರು.
ಜಿಲ್ಲಾ ಸಂಪನ್ಮೂಲ ವ್ಯಕ್ತಿ ಸಿದ್ದು ಪೂಜಾರಿ ಪಿಎಂಎಫ್ಎಮ್ಇ ಯೋಜನೆಯ ವರದಿ ತಯಾರಿಕೆ, ಸಲ್ಲಿಸುವಿಕೆ, ಅನುಮೋದನೆ, ಹಿಡಿದು ಉದ್ಯಮವನ್ನು ಸ್ಥಾಪಿಸುವವರೆಗೆ ಸಹಾಯ ಮಾಡಲಾಗುತ್ತದೆ ಎಂದು ತಿಳಿಸಿದರು.
ಸಹಾಯಕ ಕೃಷಿ ನಿರ್ದೇಶಕಿ ಪಾರ್ವತಿ ಪಾಟೀಲ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕೃಷಿ ಅಧಿಕಾರಿ ಗೀತಾ ಭಜಂತ್ರಿ ಪ್ರಾಸ್ತಾವಿಕವಾಗಿ ಮಾತನಾಡಿ, ಮೂರು ದಿವಸಗಳ ಅವಧಿಯಲ್ಲಿ ತರಬೇತಿಯಲ್ಲಿ ಫಲಾನುಭವಿಗಳಿಗೆ ಹಮ್ಮಿಕೊಂಡ ವಿವಿಧ ಚಟುವಟಿಕೆಗಳ ಕುರಿತು ವಿವರಣೆ ನೀಡಿದರು. ತರಬೇತಿಯಲ್ಲಿ ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ ಯೋಜನೆಯ ವಿವಿಧ ಫಲಾನುಭವಿಗಳು ಉಪಸ್ಥಿತರಿದ್ದರು.
ಉದ್ಯಮಿಗಳಾಗಿ, ಇತರರಿಗೆ ಉದ್ಯೋಗ ನೀಡಿ- ಬೆಳ್ಳಿ ಕರೆ


