ಸಪ್ತಸಾಗರ ವಾರ್ತೆ, ವಿಜಯಪುರ, ಅ. 20:
ನಗರದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಆಗ್ರಹಿಸಿ 31 ದಿನದಿಂದ ಅನಿರ್ಧಿಷ್ಟ ಧರಣಿ ನಡೆದರೂ ಸ್ಪಂದಿಸದ ರಾಜ್ಯ ಸರ್ಕಾರದ ನಿರ್ಲಕ್ಷ್ಯವನ್ನು ಖಂಡಿಸಿ ಸ್ಥಾಪನಾ ಸಮಿತಿಯ ಹೋರಾಟಗಾರರು ಶನಿವಾರ ಪಂಜಿನ ಮೆರವಣಿಗೆ ನಡೆಸಿದರು.
ನಗರದ ಶಿವಾಜಿ ವೃತ್ತದಿಂದ ಆರಂಭವಾದ ಪಂಜಿನ ಮೆರವಣಿಗೆ ಗಾಂಧಿ ಚೌಕ್, ಸರಾಫ್ ಬಜಾರ್, ಹೆಡಗೆವಾರ್ ವೃತ್ತ, ಸಿದ್ದೇಶ್ವರ ದೇವಸ್ಥಾನ, ಗಾಂಧಿ ಚೌಕ್, ಬಸವೇಶ್ವರ ವೃತ್ತದ ಮೂಲಕ ಸಾಗಿ ಅಂಬೇಡ್ಕರ್ ವೃತ್ತದಲ್ಲಿರುವ ಧರಣಿ ಸ್ಥಳಕ್ಕೆ ತಲುಪಿ ಸಮಾಪ್ತಿಯಾಯಿತು.
ಸರ್ಕಾರಿ ವೈದ್ಯಕೀಯ ಕಾಲೇಜು ಹೋರಾಟಕ್ಕೆ ಒಂದು ತಿಂಗಳು ಕಳೆದರೂ , ಸರ್ಕಾರ ಕಣ್ಣು ಮುಚ್ಚಿ ಕೂತಂತಿದೆ. ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ್, ಸಚಿವ ಶಿವಾನಂದ್ ಪಾಟೀಲ್ ಮತ್ತು ಶಾಸಕರು ಸರ್ಕಾರದ ಗಮನ ಸೆಳೆಯುವಲ್ಲಿ ವಿಫಲವಾಗಿದ್ದಾರೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಹೋರಾಟ ಸಮಿತಿಯ ಸದಸ್ಯರಾದ ಭಗವಾನ್ ರೆಡ್ಡಿ, ಲಲಿತಾ ಬಿಜ್ಜರಗಿ, ಲಕ್ಷ್ಮಣ್ ಕಂಬಾಗಿ, ಗಿರೀಶ್ ಕಲಘಟಗಿ, ಭೋಗೇಶ್ ಸೋಲಾಪುರ್, ಜಗದೇವ್ ಸೂರ್ಯವಂಶಿ, ಸಿದ್ದರಾಮ್ ಹಲ್ಲೂರ್, ಅರವಿಂದ್ ಕುಲಕರ್ಣಿ, ಮಲ್ಲಿಕಾರ್ಜುನ್ ಎಚ್, ಬಾಬು ಬಿಜಾಪುರ, ಶಿವಬಾಲಮ್ಮ ಕೊಂಡಗುಲಿ, ಗೀತಾ ಎಚ್, ಭರತ ಕುಮಾರ್, ಅಕ್ರಂ ಮಾಶಾಳಕರ್, ಸುರೇಶ್ ಬಿಜಾಪುರ, ಶ್ರೀನಾಥ್ ಪೂಜಾರಿ, ಮಹಾದೇವಿ ಧರ್ಮಶೆಟ್ಟಿ, ನೀಲಂಬಿಕಾ ಬಿರಾದಾರ, ಸುಶೀಲಾ ಮಿಣಜಗಿ, ಸಿದ್ದರಾಮಯ್ಯ ಹಿರೇಮಠ, ವರದಾ ಧರ್ಮಶೆಟ್ಟಿ ಹಾಗೂ ಅಂಗವಿಕಲ ಸಂಘದ ಸದಸ್ಯರು ಕೂಡ ಇದ್ದರು.
ಸರ್ಕಾರಿ ವೈದ್ಯಕೀಯ ಕಾಲೇಜಿಗೆ ಆಗ್ರಹಿಸಿ ಪಂಜಿನ ಮೆರವಣಿಗೆ


