ಸಪ್ತಸಾಗರ ವಾರ್ತೆ ವಿಜಯಪುರ, ಅ. 20:
ಕೂಡಲೇ ಸಭೆ ಕರೆದು ಕಬ್ಬಿಗೆ ಸೂಕ್ತ ದರ ನಿಗದಿ ಪಡಿಸದಿದ್ದರೆ ಅನಿರ್ದಿಷ್ಟ ಹೋರಾಟ ಕೈಗೊಳ್ಳಲಾಗುವುದು ಎಂದು
ರೈತ ಸಂಘ ಹಾಗೂ ಹಸಿರು ಸೇನೆ ಅಧ್ಯಕ್ಷ ಸಂಗಮೇಶ ಸಗರ್ ಎಚ್ಚರಿಕೆ ನೀಡಿದ್ದಾರೆ.
೨೦೨೫-೨೬ ನೇ ಸಾಲಿನ ಕಬ್ಬಿನ ದರ ನಿಗದಿ, ರೈತರಿಗೆ ಆಗುತ್ತಿರುವ ಮೋಸದ ಕುರಿತು ಹಾಗೂ ಇನ್ನು ಅನೇಕ ವಿಷಯಗಳ ಕುರಿತು ವಾಡಿಕೆಯಂತೆ ಪ್ರತಿವರ್ಷದಂತೆ ಚರ್ಚೆ ಮಾಡಲು ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ವಿಜಯಪುರ, ಬೆಳಗಾವಿ, ಬಾಗಲಕೋಟೆ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ೨ ಸುತ್ತಿನ ಸಭೆ ಮಾಡಿ ೭೪ ಕಾರ್ಖಾನೆ ಮಾಲಿಕರಿಗೆ ಕಾಲಾವಕಾಶ ನೀಡಿ ನವೆಂಬರ್ ೧ ರ ಒಳಗಾಗಿ ಎಫ್.ಆರ್.ಪಿ ಹೊರತುಪಡಿಸಿ ಹೆಚ್ಚಿಗೆ ಸಾಧ್ಯವಾಗುವಷ್ಟು ದರ ಘೋಷಿಸುವಂತೆ ನಿರ್ಣಯಿಸಲಾಗಿತ್ತು. ಇದಕ್ಕೂ ಮುಂಚೆ
ಮುಖ್ಯಮಂತ್ರಿಗಳು ನವೆಂಬರ್ ೧ ರ ನಂತರ ಎಲ್ಲಾ ಕಾರ್ಖಾನೆಗಳು ಕಬ್ಬು ನುರಿಸಲು ಆದೇಶ ಹೊರಡಿಸಿದ್ದರು. ಇದನ್ನು ಬದಲಿಸಿ ಏಕಾಎಕಿ ೧೦ ದಿನ ಮುಂಚೆ ಅಕ್ಟೋಬರ ೨೦ ರ ನಂತರ ಕಾರ್ಖಾನೆ ಪ್ರಾರಂಭ ಮಾಡುವಂತೆ ಮತ್ತೆ ಆದೇಶ ಹೊರಡಿಸಿ ರೈತ ವಿರೋಧಿ ಮುಖ್ಯಮಂತ್ರಿ ಸಿದ್ದರಾಮಯ್ಯ ಎಂದು ಮತ್ತೊಮ್ಮೆ ಸಾಬೀತು ಪಡಿಸಿದ್ದಾರೆ. ಇದಕ್ಕೆ ಬೆಂಬಲವಾಗಿ ನಮ್ಮವರೇ ಆದರೂ ಕಾರ್ಖಾನೆ ಮಾಲಿಕರ ಪರವಾಗಿ ಕಬ್ಬು ಹಾಗೂ ಸಕ್ಕರೆ ಸಚಿವರು ಬೆಂಬಲಿಸಿ ಆದೇಶವನ್ನು ಹೊರಡಿಸಿದ್ದಾರೆ ಎಂದರು.
ಬೆಂಬಲಬೆಲೆ, ತೂಕದಲ್ಲಿ ಮೋಸ, ಇಳುವರಿಯಲ್ಲಿ ಮೋಸ, ಸಮಯಕ್ಕೆ ಸರಿಯಾಗಿ ಬಾಕಿ ಬಿಲ್ ಹಾಕದಿರುವುದು ಸೇರಿದಂತೆ ಹಲವಾರು ಗಂಭಿರ ವಿಷಯಗಳ ಚರ್ಚೆ ನಂತರವೇ ಕಾರ್ಖಾನೆ ಪ್ರಾರಂಭಿಸಿಬೇಕು. ಕನಿಷ್ಟ ಒಂದು ಟನ್ ಕಬ್ಬಿಗೆ ಕಟಾವು ಮತ್ತು ಸಾಗಾಣೆಯನ್ನು ಹೊರತುಪಡಿಸಿ ೩೫೦೦ ಆದರೂ ಕೊಡಲೇ ಬೇಕು. ಮೊದಲು ಕಬ್ಬಿನಿಂದ ಸಕ್ಕರೆ ಮಾತ್ರ ತಾಯಾರಾಗುತ್ತಿತ್ತು. ಈಗ ೭-೮ ಉಪಉತ್ಪನ್ನಗಳು ಸಿದ್ದವಾಗಿ ಸಕ್ಕರೆ ಕಾರ್ಖಾನೆ ಮಾಲಿಕರು ಒಳ್ಳೆಯ ಲಾಭದಲ್ಲಿದ್ದು, ಇಂದಿನ ಕಾಸ್ಟ ಆಫ್ ಕಲ್ಟಿವೇಷನ ಪ್ರಕಾರ ಒಂದು ಎಕರೆ ಕಬ್ಬು ಬೆಳೆದ ರೈತ ೩೦ ಸಾವಿರ ನಷ್ಟದಲ್ಲಿದ್ದಾನೆ. ಆದರೆ ಸರಿಯಾದ ಬೆಲೆ ಸಿಗದೇ ಕಬ್ಬು ಬೆಳೆಗಾರರು ಮಾತ್ರ ಆತ್ಮಹತ್ಯೆ ಮಾಡಿಕೊಳ್ಳುವಂತಾಗಿದೆ ಎಂದು ನುಡಿದರು.
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸೇರಿದಂತೆ ವಿಜಯಪುರ ಜಿಲ್ಲೆಯ ಸಮಸ್ತ ಕಬ್ಬು ಬೆಳೆಗಾರರು ಹಾಗೂ ರೈತರು ಸೇರಿಕೊಂಡು ಜಿಲ್ಲಾಧಿಕಾರಿಗಳ ಕಚೇರಿ, ಸಚಿವ ಶಿವಾನಂದ ಪಾಟೀಲರ ಮನೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲರ ಮನೆ ಮುಂದೆ ಅನಿರ್ಧಿಷ್ಟ ಹೋರಾಟ ಮಾಡಲು ಸಭೆ ಸೇರಿ ನಿರ್ಣಯಿಸಲಾಗುವುದು ಎಂದು ಜಿಲ್ಲಾಧ್ಯಕ್ಷರಾದ ಸಂಗಮೇಶ ಸಗರ ಅವರು ಪತ್ರಿಕಾ ಪ್ರಕಟಣೆಯಲ್ಲಿ ಎಚ್ಚರಿಕೆ ನೀಡಿದ್ದಾರೆ.
ಕೂಡಲೇ ಜಿಲ್ಲಾಧಿಕಾರಿಗಳು ಸಕ್ಕರೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಎಲ್ಲಾ ಸಕ್ಕರೆ ಕಾರ್ಖಾನೆಗಳ ಮಾಲಿಕರು ಹಾಗೂ ರೈತ ಮುಖಂಡರೊಡನೆ ಸಭೆ ಕರೆದು ದರ ನಿಗದಿ ಪಡಿಸಬೇಕು ಇಲ್ಲವಾದಲ್ಲಿ ಮುಂದಿನ ಹೋರಾಟಕ್ಕೆ ನೀವೇ ನೇರ ಹೋಣೆಗಾರರಾಗಬೇಕಾಗುತ್ತದೆ ಎಂದು ಅವರು ಹೇಳಿದ್ದಾರೆ.
ಕಬ್ಬಿಗೆ ಸೂಕ್ತ ದರ ನಿಗದಿಪಡಿಸದಿದ್ದರೆ ಹೋರಾಟ: ಸಂಗಮೇಶ ಎಚ್ಚರಿಕೆ


