ಕನ್ಹೇರಿ ಶ್ರೀಗಳ ಪ್ರವೇಶ ನಿರ್ಬಂಧ ವಿರುದ್ಧ ಹೋರಾಟ ಕುರಿತುಅ. 29ರಂದು ಬೆಳಗಾವಿಯಲ್ಲಿ ಸಭೆ

ಸಪ್ತಸಾಗರ ವಾರ್ತೆ,ವಿಜಯಪುರ, ಅ. 26 :
ಕನ್ಹೇರಿ ಶ್ರೀಗಳ ವಿಜಯಪುರ, ಬಾಗಲಕೋಟೆ ಜಿಲ್ಲಾ ಪ್ರವೇಶದ ಮೇಲೆ ನಿರ್ಬಂಧ ಹೇರಿದ ಸರ್ಕಾರದ ನಿರ್ಧಾರವನ್ನು ಖಂಡಿಸಿ ಯಾವ ರೀತಿಯ ಹೋರಾಟವನ್ನು ರೂಪಿಸಬೇಕು ಎಂಬ ಬಗ್ಗೆ ಚರ್ಚಿಸಲು ಬೆಳಗಾವಿಯಲ್ಲಿ ಅ. ೨೯ ರಂದು ಬೃಹತ್ ಸಭೆ ನಡೆಸಲಾಗುವುದು ಮಾಜಿ ಉಪ ಮುಖ್ಯಮಂತ್ರಿ ಕೆ. ಎಸ್. ಈಶ್ವರಪ್ಪ ತಿಳಿಸಿದರು.
ಭಾನುವಾರ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ಅನೇಕ ಹಿಂದೂಪರ ಹೋರಾಟಗಾರರು, ರಾಜಕೀಯ ನಾಯಕರು ಈ ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಹೇಳಿದರು. ರಾಜ್ಯ ಸರ್ಕಾರ ಹಿಂದೂ ಸಮಾಜ, ವೀರಶೈವ, ಲಿಂಗಾಯತ ಸಮಾಜಕ್ಕೆ ತೊಂದರೆ ಕೊಡುತ್ತಿದೆ. ವೀರಶೈವ ಸಮಾಜವನ್ನು ತುಂಡು ತುಂಡು ಮಾಡುತ್ತಿದೆ. ಹಿಂದೂ ಸಮಾಜಕ್ಕೆ ತೊಂದರೆ ಕೊಡುತ್ತಿರುವ ಈ ಕಾಂಗ್ರೆಸ್ ಸರ್ಕಾರ ಸಾಧು ಸಂತರನ್ನು ಬಿಡುತ್ತಿಲ್ಲ ಎಂದರು.
ಕನ್ಹೇರಿ ಶ್ರೀಗಳಿಗೆ ನಿರ್ಬಂಧ ಹಾಕಿರುವ ವಿಷಯದ ಕುರಿತು ಪ್ರತಿಭಟಿಸಬೇಕು. ಈ ನಿರ್ಧಾರವನ್ನು ಹಿಂದಕ್ಕೆ ಪಡೆಯಲು ಸರ್ಕಾರವನ್ನು ಮಣಿಸುವ ನಿಟ್ಟಿನಲ್ಲಿ ಈ ಸಭೆ ನಡೆಸಲಾಗುತ್ತಿದೆ. ವಾಗ್ಮಿ ಚಕ್ರವರ್ತಿ ಸೂಲಿಬೆಲೆ, ಶಾಸಕ ಬಸನಗೌಡ ಪಾಟೀಲ ಯತ್ನಾಳ್, ಪ್ರಮೋದ್ ಮುತಾಲಿಕ್, ಸಿ.ಟಿ. ರವಿ, ಪ್ರತಾಪ್ ಸಿಂಹ, ಅರವಿಂದ ಬೆಲ್ಲದ, ನಾರಾಯಣಸಾ ಭಾಂಡಗೆ, ಈರಣ್ಣ ಕಡಾಡಿ, ಅಭಯ ಪಾಟೀಲ, ಸಂಜಯ ಪಾಟೀಲ, ಅರುಣ ಶಹಾಪೂರ ಸೇರಿದಂತೆ ಹಲವರು ಬರಲು ಒಪ್ಪಿಗೆ ಸೂಚಿಸಿದ್ದಾರೆ ಎಂದರು.
ಈ ಸಭೆಗೆ ಬರುವಂತೆ ಕನ್ಹೇರಿ ಶ್ರೀಗಳಿಗೂ ಮನವಿ ಮಾಡಿಕೊಂಡಿದ್ದೇವೆ. ರಾಜ್ಯ ಸರ್ಕಾರದ ಕಿವಿ ಹಿಂಡಲು ಲಕ್ಷಾಂತರ ಜನ ಸೇರಬೇಕು ಎಂದರು.
ಸಮಾಜದಲ್ಲಿ ಶಾಂತಿ ಕದಡುವ ರೀತಿಯಲ್ಕಿ ಹಾಕಿರುವ ನಿರ್ಬಂಧ ಹಿಂತೆಗೆದುಕೊಳ್ಳಬೇಕು. ಈ ವಿಷಯವಾಗಿ ಇಡೀ ಸಮಾಜಕ್ಕೆ ಆಕ್ರೋಶವಿದೆ. ಈ ಸರ್ಕಾರ ಬಂದ ನಂತರ ಅನೇಕ ತೊಂದರೆ ಕೊಡುತ್ತಿದೆ ಎಂದರು.
ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವರಿಗೆ ಏನೇನು ಕಲ್ಪನೆ ಇಲ್ಲ. ವೀರಶೈವ ಲಿಂಗಾಯತರನ್ನು ಒಡೆಯಲು ಇವರೇ ಕಾರಣ ಎಂದರು.
ಕೆಲವು ಸ್ವಾಮೀಜಿಗಳು ಹಿಂದೂ ಧರ್ಮದ ಬಗ್ಗೆ ಅಗೌರವ ತೋರಿದ್ದಾರೆ. ಮಾಂಸ ತಿನ್ನಿ, ದೇವಾಲಯಕ್ಕೆ ಹೋಗಬೇಡಿ, ದಾರು ಕುಡಿಯಿರಿ ಎಂದು ಹೇಳುತ್ತಿದ್ದಾರೆ. ಇದನ್ನು ಯಾರು ಸಮರ್ಥಿಸಿಕೊಳ್ಳುತ್ತಾರೆ ಹೇಳಿ ಎಂದರು.
ಕುರುಬರಿಗೆ ಎಸ್.ಟಿ. ವಿಷಯವಾಗಿ ಪ್ರತಿಕ್ರಿಯೆ ನೀಡಿದ ಕೆ.ಎಸ್. ಈಶ್ವರಪ್ಪ, ಈ ವಿಷಯ ಕೇಂದ್ರ ಸರ್ಕಾರಕ್ಕೆ ಹೋಗಿದೆ. ಉಗ್ರಪ್ಪನವರು ಉಗ್ರಾವತಾರ ತಾಳಿದ ಪರಿಣಾಮ ಈ ಹೋರಾಟ ನಾನು ಮಾಡಿಲ್ಲ ಎಂದು ಸಿದ್ಧರಾಮಯ್ಯ ಹೇಳುತ್ತಿದ್ದಾರೆ. ಈ ವಿಷಯದಲ್ಲಿ ಸಿ.ಎಂ. ಹಾಲುಮತ ಸಮಾಜದವರನ್ನು ಕತ್ತಲಲ್ಲಿ ಇರಿಸಿದ್ದಾರೆ ಎಂದರು.

Share this