ಖಾಸಗಿ ವೈದ್ಯಕೀಯ ಕಾಲೇಜು ಸ್ಥಾಪನೆ: ಬಡವರ ರಕ್ತ ಹೀರುವ ಹುನ್ನಾರ- ಚಿಂತಕ ಜಿ. ಬಿ. ಪಾಟೀಲ

ಸಪ್ತಸಾಗರ ವಾರ್ತೆ, ವಿಜಯಪುರ, ಅ. 28 :
ಜಿಲ್ಲಾ ಆಸ್ಪತ್ರೆಯಲ್ಲಿ ಕೋಟಿ ಕೋಟಿ ರೂ. ಬೆಲೆ ಬಾಳುವ ಜಮೀನು ಇದೆ. ಸಕಲ ಸೌಲಭ್ಯಗಳಿವೆ. ಇಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜ್ ಮಾಡುವುದನ್ನು ಬಿಟ್ಟು ಖಾಸಗಿಯವರೆಗೆ ಮಣೆ ಹಾಕಿ ಬಡವರ ರಕ್ತ ಹೀರುವ ಹುನ್ನಾರ ನಡೆದಿದೆ. ಒಂದು ರೀತಿ ಚಿನ್ನದ ಮೊಟ್ಟೆ ಇಡುವ ಕೋಳಿಯನ್ನೇ ಕತ್ತರಿಸಿದಂತೆ ಎಂದು ಖ್ಯಾತ ಚಿಂತಕ ಜಿ.ಬಿ. ಪಾಟೀಲ ಖಾರವಾಗಿ ಅಸಮಾಧಾನ ಹೊರಹಾಕಿದರು.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚಿನ್ನದ ಮೊಟ್ಟೆ ಇಡುವ ಕೋಳಿಯನ್ನೇ ಕತ್ತರಿಸಿದ ಮಾದರಿಯಲ್ಲಿ ಬೆಲೆಬಾಳುವ ಜಮೀನು ಹೊಂದಿರುವ ಜಿಲ್ಲಾ ಆಸ್ಪತ್ರೆಯನ್ನು ಸರ್ಕಾರಿಯವರಿಗೆ ನೀಡುತ್ತಿರುವುದು ಸರಿಯಲ್ಲ. ಈ ಪ್ರಯತ್ನ ಇಲ್ಲಿಗೆ ನಿಲ್ಲಬೇಕು ಎಂದರು.
ಪ್ರಗತಿಪರ ಚಿಂತಕ ಡಾ.ಸಿದ್ಧನಗೌಡ ಪಾಟೀಲ ಮಾತನಾಡಿ, ವೈದ್ಯಕೀಯ ಶಿಕ್ಷಣ ಇಂದು ಮಾಫಿಯಾ ಆಗಿದೆ, ಈ ಮಾಫಿಯಾಗಳೇ ಪರೋಕ್ಷವಾಗಿ ಖಾಸಗೀಕರಣಕ್ಕೆ ಪ್ರೋತ್ಸಾಹಿಸುತ್ತಿವೆ, ಮ್ಯಾನೇಜ್‌ಮೆಂಟ್ ಕೋಟಾ ಹೆಸರಿನಲ್ಲಿ ವಿದೇಶಿ ವಿದ್ಯಾರ್ಥಿಗಳಿಗೆ ಕೋಟಿ ಕೋಟಿ ರೂ. ಪಡೆದು ಸೀಟ್ ಮಾರಾಟ ಮಾಡುವುದು ಮೆಡಿಕಲ್ ಮಾಫಿಯಾ, ವೈದ್ಯಕೀಯ ಕ್ಷೇತ್ರ ಉದ್ಯಮವಾಗಿ ಬದಲಾಗಿದೆ, ಈ ಶಕ್ತಿಗಳೇ ಖಾಸಗೀಕರಣಕ್ಕೆ ªಮುಂದಾಗುತ್ತಿವೆ, ಇದು ಕೇವಲ ಮೆಡಿಕಲ್ ಕಾಲೇಜ್ ಹೋರಾಟವಲ್ಲ ಬದಲಾಗಿ ಖಾಸಗೀಕರಣದ ವಿರುದ್ಧ ಹೋರಾಟ ಎಂದರು.
ಮೂಲ ಸೇವೆಗಳಾದ ಆರೋಗ್ಯ, ಶಿಕ್ಷಣ, ಸಾರಿಗೆ ಈ ಎಲ್ಲ ವಲಯಗಳನ್ನು ಖಾಸಗೀಕರಣ ಮಾಡುವ ದೊಡ್ಡ ಪ್ರಯತ್ನ ನಡೆದಿದೆ, ಜಾಗತೀಕರಣ ಪ್ರಕ್ರಿಯೆಯ ಫಲವಾಗಿ ಸೇವಾ ವಲಯದಲ್ಲೂ ಖಾಸಗಿ ಕಂಪನಿ ಗಳು ಲೂಟಿ ಮಾಡುತ್ತಿವೆ, ಬೂಟ್, ಪಿಪಿಪಿ ಎನ್ನುವ ವಿಲಕ್ಷಣ ಪ್ರಕ್ರಿಯೆಗಳಿಂದ ಪ್ರಜಾಸತ್ತಾತ್ಮಕತೆಗೆ ಮಾರಕವಾದ ನೀತಿಗಳು ಹೊರಹೊಮ್ಮುತ್ತಿವೆ, ರಾಜ್ಯ ನಿರ್ದೇಶಕ ತತ್ವಗಳ ಆಶಯವನ್ನೇ ಸರ್ಕಾರಗಳು ಗಾಳಿಗೆ ತೂರುತ್ತಿವೆ, ಆರೋಗ್ಯ, ಶಿಕ್ಷಣ, ವಿಮೆ, ಹೆದ್ದಾರಿ ನೋಡಿಕೊಳ್ಳಲು ಆಗದೇ ಹೋದರೆ ಸರ್ಕಾರ ಏಕೆ ಬೇಕು? ಎಂದು ಪ್ರಶ್ನಿಸಿದರು.

ಜನಪ್ರತಿನಿಧಿಗಳೋ ಸಿಇಓಗಳೋ?
ಜನಪ್ರತಿನಿಧಿಗಳ ಬಗ್ಗೆಯೂ ಅಸಮಾಧಾನ ಹೊರಹಾಕಿದ ಡಾ.ಸಿದ್ಧನಗೌಡ ಪಾಟೀಲ, ಜನರ ಪ್ರತಿನಿಧಿಗಳಾಗಿ ಇರಲು ಅವರನ್ನು ವಿಧಾನಸೌಧಕ್ಕೆ ಕಳುಹಿಸಲಾಗಿದೆ, ಆದರೆ ಅವರೆಲ್ಲರೂ ಇಂದು ಬಹುರಾಷ್ಟಿçÃಯ ಕಂಪನಿಗಳ ಸಿಇಓಗಳಂತೆ ವರ್ತನೆ ಮಾಡುತ್ತಿದ್ದಾರೆ ಎಂದರು.
ಸರ್ಕಾರಿ ಮೆಡಿಕಲ್ ಕಾಲೇಜ್ ಆಗ್ರಹಿಸಿ ಧರಣಿ ಸುದೀರ್ಘವಾಗಿ ನಡೆದರೂ ಸಹ ಸರ್ಕಾರ ಕಣ್ಣು ತೆರೆಯುತ್ತಿಲ್ಲ. ಈ ವಿಷಯವನ್ನು ಬೆಂಗಳೂರು ಮಟ್ಟಕ್ಕೂ ವಿಸ್ತರಣೆ ಮಾಡಲು ನಾವೆಲ್ಲರೂ ಕಟಿಬದ್ಧರಾಗಿದ್ದು, ಬೆಂಗಳೂರಿನಲ್ಲಿಯೂ ಪ್ರತಿಭಟನೆ ನಡೆಸಲಾಗುವುದು, ಹಾಗೂ ನಿಯೋಗದೊಂದಿಗೆ ಶೀಘ್ರದಲ್ಲಿಯೇ ಮುಖ್ಯಮಂತ್ರಿ, ವೈದ್ಯಕೀಯ ಶಿಕ್ಷಣ ಸಚಿವರಿಗೆ ಭೇಟಿ ಮಾಡಲಾಗುವುದು ಎಂದರು.
ಖಾಸಗಿಯವರ ಸುಪರ್ದಿಗೆ ಆರೋಗ್ಯ ಸೇವೆ ಒದಗಿಸಿದರೆ, ಜನಸಾಮಾನ್ಯರ ಆರೋಗ್ಯದ ಹಕ್ಕು ಕಸಿದಂತೆಯೇ ಎಂದರು.
ಖ್ಯಾತ ಲೇಖಕ ಡಾ.ಅರವಿಂದ ಮಾಲಗತ್ತಿ ಮಾತನಾಡಿ, ಹಸಿದವರಿಗೆ ಕಲಿಯುವ ದಾಹವಿರುತ್ತದೆ, ಈ ದಾಹ ಬಡ ವಿದ್ಯಾರ್ಥಿಗಳಲ್ಲಿರುತ್ತದೆ, ಈ ವಿಷಯವನ್ನು ಮುಖ್ಯಮಂತ್ರಿಗಳು ಗಂಭೀರವಾಗಿ ಪರಿಗಣಿಸಿ ಪಿಪಿಪಿ ನಿರ್ಧಾರವನ್ನು ವಾಪಾಸ್ಸು ಪಡೆಯಬೇಕು ಎಂದರು.
ಹೋರಾಟಗಾರ ಬಸವರಾಜ ಸೂಳಿಭಾವಿ ಮಾತನಾಡಿ, ಖಾಸಗಿ ಸಹಭಾಗಿತ್ವಕ್ಕೆ ವಿರೋಧ ಮಾಡಬೇಕಾದ ಜನಪ್ರತಿನಿಧಿಗಳು ತಾವೇ ಹೂಡಿಕೆ ಮಾಡುವುದಾಗಿ ಸದನದಲ್ಲಿ ಘೋಷಣೆ ಮಾಡುತ್ತಾರೆ ಎಂದರೆ ಏನರ್ಥ? ಎಂದು ಪ್ರಶ್ನಿಸಿದರು.
ಹಿರಿಯ ನ್ಯಾಯವಾದಿ ವಿದ್ಯಾವತಿ ಅಂಕಲಗಿ, ಚೆನ್ನು ಕಟ್ಟಮನಿ, ಬಾಬರ ಕೇವಿನ್, ಎಚ್.ಟಿ. ಭರತಕುಮಾರ, ಶ್ರೀನಾಥ್ ಪೂಜಾರಿ, ಅನೀಲ್ ಹೊಸಮನಿ ಮೊದಲಾದವರು ಪಾಲ್ಗೊಂಡಿದ್ದರು.

Share this